ಲಾಲ್‌ಬಾಗ್‌ನಲ್ಲಿ ಅವರೆಕಾಯಿ ಮೇಳಕ್ಕೆ ಚಾಲನೆ

Update: 2018-12-22 15:53 GMT

ಬೆಂಗಳೂರು, ಡಿ.22: ಕ್ರಿಸ್‌ಮಸ್ ಅಂಗವಾಗಿ ಹಾಪ್‌ಕಾಮ್ಸ್ ನಗರದಲ್ಲಿ ಇದೇ ಮೊದಲ ಬಾರಿಗೆ ಅವರೆಕಾಯಿ ಮೇಳವನ್ನು ಆಯೋಜಿಸಿದೆ. ಮೂರು ದಿನಗಳ ಕಾಲ ನಡೆಯುವ ಅವರೆಕಾಯಿ ಮೇಳಕ್ಕೆ ಶನಿವಾರ ಲಾಲ್‌ಬಾಗ್‌ನಲ್ಲಿ ಚಾಲನೆ ನೀಡಲಾಯಿತು. ಮೊದಲ ದಿನವೇ ವಾಯುವಿಹಾರಿಗಳು ಹಾಗೂ ಉದ್ಯಾನಕ್ಕೆ ಬಂದ ಗ್ರಾಹಕರು ಅತ್ಯಂತ ಖುಷಿಯಿಂದ ಮೇಳದಲ್ಲಿ ಖರೀದಿಯಲ್ಲಿ ತೊಡಗಿದ್ದರು.

ಈ ವೇಳೆ ಮಾತನಾಡಿದ ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್. ಪ್ರಸಾದ್, ಗುಣಮಟ್ಟದ ಅವರೆಕಾಯಿಯ ಜತೆಗೆ, ತೊಗರಿಕಾಯಿ, ಬಟಾಣಿ, ಗೆಣಸಿನಗಡ್ಡೆ, ಹಸಿ ಕಡ್ಲೆಕಾಯಿ. ಜತೆಗೆ ಚಳಿಗಾಲದಲ್ಲಿ ಸಿಗುವ ವಿಯೆನ್ನಾರ್ ಸೀಬೆ, ಡ್ರ್ಯಾಗನ್ ಫ್ರೂಟ್, ಸ್ಟ್ರಾಬೆರಿಗಳನ್ನೂ ಮಾರಾಟ ಮಾಡಲಾಗುತ್ತಿದೆ. ನೇರವಾಗಿ ರೈತರಿಂದ ಖರೀದಿಸಿ ನಾವು ಮಾರಾಟ ಮಾಡುತ್ತೇವೆ. ನಗರದ ಎಲ್ಲಾ ಮಳಿಗೆಗಳಲ್ಲೂ ಮೇಳ ನಡೆಯಲಿದೆ ಎಂದರು.

ಇನ್ನು ಹೊಲದ ಸೊಗಡವರೆ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲ. ಹಿಮ ಬೀಳುತ್ತಿಲ್ಲ. ಮಳೆಯೂ ಇಲ್ಲದೆ ಬೆಳೆ ಈ ಬಾರಿ ವಿಳಂಬವಾಗಿದೆ. ಹೀಗಾಗಿ ಜನವರಿ ಮಧ್ಯದಲ್ಲಿ ಹೊಲದವರೆ ಬರಬಹುದು. ಆದರೆ ಇದೀಗ ನೀರಾವರಿಯಲ್ಲೂ ಸೊಗಡವರೆಯನ್ನು ಬೆಳೆಯಲಾಗುತ್ತಿದೆ. ಇದೀಗ ಈ ನೀರಾವರಿ ಸೊಗಡವರೆಯನ್ನು ಮೇಳದಲ್ಲಿ ಮಾರಲಾಗುತ್ತಿದೆ. ಲಾಲ್‌ಬಾಗ್‌ನಲ್ಲಿ 50/60 ಅಡಿ ಜಾಗದಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ.

ಕಬ್ಬನ್‌ ಪಾರ್ಕ್‌ನಲ್ಲೂ ಮೇಳ: ನಗರದ ಎಲ್ಲಾ ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ಮಾರಾಟ ಮೇಳ ನಡೆಯಲಿದೆ. ರವಿವಾರ ಮತ್ತು ಮಂಗಳವಾರ ಸರಕಾರಿ ರಜೆ ಹಿನ್ನೆಲೆಯಲ್ಲಿ ಈ ಎರಡೂ ದಿನ ಕಬ್ಬನ್‌ಪಾರ್ಕ್‌ನಲ್ಲೂ ಮೇಳ ಏರ್ಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ದರ ಪಟ್ಟಿ (ಕೆ.ಜಿ.ಗಳಲ್ಲಿ)

ಅವರೆಕಾಯಿ- 25 ರೂ.

ತೊಗರಿಕಾಯಿ- 35 ರೂ.

ಗೆಣಸು -35 ರೂ.

ಕಡ್ಲೆಕಾಯಿ -60 ರೂ.

ಬಟಾಣಿ- 40 ರೂ.

ವಿಯೆನ್ನಾರ್ ಸೀಬೆ- 110 ರೂ.

ಕೃಷ್ಣ ಬ್ರೌನ್ ಅಂಜೂರ- 100 ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News