ಪಾಕ್ ಸಿಪಿಇಸಿಯಲ್ಲಿ ಯುದ್ಧ ವಿಮಾನಗಳ ನಿರ್ಮಾಣ: ನ್ಯೂಯಾರ್ಕ್ ಟೈಮ್ಸ್ ವರದಿ ನಿರಾಕರಿಸಿದ ಚೀನಾ

Update: 2018-12-22 16:27 GMT

 ಬೀಜಿಂಗ್, ಡಿ. 22: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯ ಭಾಗವಾಗಿ, ಪಾಕಿಸ್ತಾನದಲ್ಲಿ ಯುದ್ಧವಿಮಾನಗಳು ಹಾಗೂ ಇತರ ಸೇನಾ ಉಪಕರಣಗಳನ್ನು ನಿರ್ಮಿಸುವ ರಹಸ್ಯ ಯೋಜನೆಯೊಂದನ್ನು ಚೀನಾ ರೂಪಿಸಿದೆ ಎಂಬ ಅಮೆರಿಕ ಮಾಧ್ಯಮ ವರದಿಯೊಂದನ್ನು ಚೀನಾ ಶುಕ್ರವಾರ ನಿರಾಕರಿಸಿದೆ.

 ಬಲೂಚಿಸ್ತಾನದಲ್ಲಿನ ಗ್ವಾಡರ್ ಬಂದರನ್ನು ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತಕ್ಕೆ ಸಂಪರ್ಕಿಸುವ 60 ಬಿಲಿಯ ಡಾಲರ್ (4.20 ಲಕ್ಷ ಕೋಟಿ ರೂಪಾಯಿ) ವೆಚ್ಚದ ಸಿಪಿಇಸಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಮಹತ್ವಾಕಾಂಕ್ಷೆಯ ‘ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್’ ಯೋಜನೆಯ ಭಾಗವಾಗಿದೆ.

ರಹಸ್ಯ ಪ್ರಸ್ತಾಪಕ್ಕೆ ಪಾಕಿಸ್ತಾನ ಮತ್ತು ಚೀನಾ ವಾಯುಪಡೆಗಳ ಹಿರಿಯ ಅಧಿಕಾರಿಗಳು ಅಂತಿಮ ರೂಪುರೇಷೆ ನೀಡುತ್ತಿದ್ದಾರೆ ಎಂಬುದಾಗಿ ‘ನ್ಯೂಯಾರ್ಕ್‌ ಟೈಮ್ಸ್’ನ ವರದಿ ತಿಳಿಸಿದೆ.

‘‘ಬೆಲ್ಟ್ ಆ್ಯಂಡ್ ರೋಡ್ ಶಾಂತಿಯುತ ಉದ್ದೇಶದ ಆರ್ಥಿಕ ಯೋಜನೆ ಎಂಬುದನ್ನು ಚೀನಾ ಅಧಿಕಾರಿಗಳು ಪದೇ ಪದೇ ಹೇಳುತ್ತಾ ಬಂದಿದ್ದಾರೆ. ಆದರೆ, ಪಾಕಿಸ್ತಾನಕ್ಕೆ ಸಂಬಂಧಿಸಿದ ತನ್ನ ಯೋಜನೆಗೆ ಚೀನಾ ಸೇನಾ ಚಟುವಟಿಕೆಗಳನ್ನು ತಳುಕು ಹಾಕಿದೆ’’ ಎಂದು ವರದಿ ಹೇಳಿದೆ.

‘‘ನಮ್ಮ ಮಾಹಿತಿಯ ಪ್ರಕಾರ, ಈ ವರದಿಯು ಸತ್ಯವಲ್ಲ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಬೀಜಿಂಗ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News