ಪ್ರಗತಿಯ ದಾಖಲಿಸಿ

Update: 2018-12-22 18:25 GMT

►► ಅಧ್ಯಯನ ಮತ್ತು ಅರಿವು

ಕಲಿಕಾ ನ್ಯೂನತೆಗಳು

ಭಾಗ-10

► ದಿನಚರಿಯ ರೂಢಿಸಿ

ನ್ಯೂನತೆ ಇರುವಂತಹ ವಿಶೇಷ ಮಕ್ಕಳಿಗೆ ವಿಶೇಷ ಶಾಲೆಗಳು ಎನ್ನುವುದು ಅಷ್ಟೇನೂ ಒಳ್ಳೆಯದಲ್ಲ. ಕೆಲವೊಮ್ಮೆ ಅಂತಹ ವಿಶೇಷ ಶಾಲೆಗಳು ಕುಟುಂಬದಿಂದ ಅವರನ್ನು ಬೇರ್ಪಡಿಸುವುದಲ್ಲದೇ ಅವರದೇ ವಯಸ್ಸಿನ ಎಲ್ಲಾ ಮಕ್ಕಳ ಜೊತೆ ಬೆರೆಯುವ ಆನಂದದಿಂದ ವಂಚಿಸಿದಂತಾಗುತ್ತದೆ. ಆದರೆ ಬೇರೆ ಮಕ್ಕಳ ಜೊತೆಯಲ್ಲಿಯೇ ವಿಶೇಷ ಮಕ್ಕಳನ್ನು ಹೊಂದಿರುವ ಶಿಕ್ಷಕರು ಅವರಿಗೆ ಬೋಧಿಸುವ ಸಲುವಾಗಿಯೇ ತಮ್ಮನ್ನು ತಾವು ತರಬೇತಿಗೊಳಿಸಿಕೊಳ್ಳಬೇಕು.

ಸಾಧಾರಣ ಮಕ್ಕಳು, ಸಾಧಾರಣ ನ್ಯೂನತೆ ಇರುವ ಮಕ್ಕಳು, ವಿಶೇಷ ನ್ಯೂನತೆ ಇರುವ ಮಕ್ಕಳು; ಯಾವುದೇ ಮಕ್ಕಳಾಗಲಿ, ಶಿಕ್ಷಕರು ದಿನಚರಿಯನ್ನು ಇಟ್ಟುಕೊಳ್ಳಲೇ ಬೇಕಾಗಿರುವುದು ಒಂದು ಅತ್ಯಗತ್ಯದ ವಿಷಯ. ಹಾಗೆಯೇ ಮಕ್ಕಳಿಗೂ ದಿನಚರಿಯನ್ನು ರೂಢಿ ಮಾಡಿಸಿದ್ದೇ ಆದರೆ ಅದು ಅತ್ಯಂತ ಸಂತೋಷದ ವಿಷಯ. ಸ್ಕೂಲ್ ಡೈರಿ ಅಥವಾ ಶಾಲಾ ದಿನಚರಿಯ ಪುಸ್ತಕ ಎಂಬುದು ಈಗ ಸಾಧಾರಣವಾಗಿ ಎಲ್ಲಾ ಶಾಲೆಗಳಲ್ಲಿಯೂ ಇದೆ. ಆದರೆ ಆ ದಿನಚರಿಯ ಮಿತಿಯೇನೆಂದರೆ, ಅದು ಬರಿಯ ಹೋಂ ವರ್ಕ್, ಅಸೈನ್ಮೆಂಟ್, ಫೀಸ್ ಡ್ಯೂ, ರಜೆ ತೆಗೆದುಕೊಳ್ಳುವುದು ಮತ್ತು ಲೇಟಾಗಿ ಬಂದಿರುವ ವಿಷಯವನ್ನು ನಮೂದಿಸುವುದು, ಏನನ್ನು ಓದಬೇಕು; ಇತ್ಯಾದಿಗಳಿಗೆ ಸೀಮಿತವಾಗಿರುತ್ತವೆ. ಇದಲ್ಲದೇ ಶಾಲೆಯ ಧ್ಯೇಯ ಧೋರಣೆಗಳು, ಪ್ರಾರ್ಥನೆಗಳೂ, ಸಿಬ್ಬಂದಿಯ ಪರಿಚಯ, ಪಾಲಿಸಬೇಕಾದ ರೀತಿ ನೀತಿಗಳು ಇತ್ಯಾದಿಗಳು ಮುದ್ರಿತವಾಗಿರುತ್ತವೆ. ಇವೆಲ್ಲವೂ ಇರಲಿ, ಸರಿ. ಆದರೆ ಮಗುವಿನ ಪ್ರಗತಿಯನ್ನು ಗುರುತಿಸುವುದು, ದಾಖಲಿಸುವುದು ಹೇಗೆ? ಇದು ಬಹಳ ಮುಖ್ಯವಾದ ಸಂಗತಿ.

► ಪ್ರಗತಿಯ ದಾಖಲಿಸಿ

ಪ್ರಗತಿಯನ್ನು ದಾಖಲಿಸುವುದು ಎಂದರೆ ನಮ್ಮ ಶಾಲೆಗಳಲ್ಲಿ ಮಾರ್ಕ್ಸ್ ಕಾರ್ಡ್. ಪ್ರಗತಿಪತ್ರಕ್ಕೂ ಅಥವಾ ಅಂಕಪಟ್ಟಿಗೆ ಹೆಚ್ಚೇನೂ ವ್ಯತ್ಯಾಸ ವಿಲ್ಲ. ಅಂಕಗಳೇ ಪ್ರಗತಿ ಎಂದುಕೊಂಡಿರುವವರ ಸಮಸ್ಯೆ ಇದು. ಅದಿರಲಿ, ಪ್ರಗತಿಯ ದಾಖಲೆ ಎಂದರೆ ಏನೆಂದು ಮೊದಲು ಅರ್ಥ ಮಾಡಿಕೊಳ್ಳೋಣ. ಶಿಕ್ಷಕರು ತಮ್ಮ ನಿರ್ದಿಷ್ಟ ಉದ್ದೇಶದ ಬೋಧನೆಗಳನ್ನು ಮಾಡುತ್ತಾರೆ. ಅದರಲ್ಲಿ ಏನೇನೆಲ್ಲಾ ಕಲಿಸಬೇಕೆಂದು ನಿರ್ಧಾರ ಮಾಡಿರುತ್ತಾರೆ. ಇಷ್ಟು ಪದಗಳನ್ನು ಪರಿಚಯಿಸಬೇಕು, ಇಷ್ಟು ವ್ಯಾಕರಣಾಂಶಗಳನ್ನು ತಿಳಿಸಬೇಕು, ಇಂಥಾ ವಿಷಯವನ್ನು ಇಷ್ಟರಮಟ್ಟಿಗೆ ಪರಿಚಯಿಸಬೇಕು; ಹೀಗೆ ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ಏನೇನೋ ಗುರುತು ಹಾಕಿಕೊಂಡಿರುತ್ತಾರೆ. ಅವುಗಳನ್ನು ಆ ತರಗತಿಯ ಮಕ್ಕಳಿಗೆ ಸಮಗ್ರವಾಗಿ ಬೋಧಿಸಲು ಸಾಧ್ಯವಾಯಿತೇ? ಸಾಧ್ಯವಾದರೆ ಎಷ್ಟರಮಟ್ಟಿಗೆ ಮಕ್ಕಳು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು? ಇತ್ಯಾದಿಗಳನ್ನೆಲ್ಲಾ ಗುರುತು ಹಾಕಿಕೊಳ್ಳಬೇಕು. ದಾಖಲಿಸಬೇಕು.

► ಪಾಠ ಯೋಜನೆ

ತಾವು ಏನು ಪಾಠ ಮಾಡಬೇಕೆಂದು ಯೋಜಿಸಿಕೊಳ್ಳುವುದು ಲೆಸನ್ ಪ್ಲಾನ್ ಅಥವಾ ಪಾಠ ಯೋಜನೆ. ಆದರೆ ಅದರ ಮುಂದಿನ ದಾಖಲೀಕರಣ ಈ ಪ್ರಗತಿ ದಾಖಲೆ. ಇದು ಸರ್ಟಿಫಿಕೇಟ್ ಅಥವಾ ರಿಪೋರ್ಟ್ ಅಲ್ಲ. ಇದು ಶಿಕ್ಷಕರಿಗೆ ತಾವು ಉದ್ದೇಶಿಸಿದ ಕಲಿಕೆಯನ್ನು ಸಾಧಿಸಲು ಸಾಧ್ಯವಾಯಿತೇ? ಒಂದು ವೇಳೆ ಸಾಧ್ಯವಾದರೆ ಎಷ್ಟರಮಟ್ಟಿಗೆ ಫಲಪ್ರದವಾಗಿದೆ ಎಂಬುದನ್ನೂ ಗುರುತಿಸಿಕೊಂಡರೆ ಮುಂದಿನ ಕಲಿಕೆಯ ಪ್ರಕ್ರಿಯೆಯು ಸುಲಭವಾಗುತ್ತದೆ. ಆ ನಿರ್ದಿಷ್ಟ ದಿನದಂದು ಐದು ಹೊಸ ಪದಗಳನ್ನು ಕಲಿಸುವ ಮತ್ತು ಅವುಗಳನ್ನು ಪ್ರಯೋಗಿಸುವ ಉದ್ದೇಶವನ್ನು ಹೊಂದಿರುತ್ತಾರೆ. ಅದಕ್ಕೆ ಬೇಕಾದಂತಹ ಸಿದ್ಧತೆಯನ್ನು ಶಿಕ್ಷಕರು ಮಾಡಿಕೊಂಡಿರುತ್ತಾರೆ. ನಂತರ ಅದನ್ನು ಬೋಧಿಸುತ್ತಾರೆ. ಸಮಗ್ರವಾಗಿ ಅಥವಾ ಸಂಕಲಿತವಾಗಿ ಒಂದು ತರಗತಿಯಲ್ಲಿ ಮಕ್ಕಳು ಎಷ್ಟರ ಮಟ್ಟಿಗೆ ಕಲಿಕೆಯ ಫಲವನ್ನು ಧ್ವನಿಸುತ್ತಾರೆ ಎಂಬುದನ್ನು ನೋಡಬಹುದು. ಮಕ್ಕಳು ಉತ್ತರಗಳನ್ನು ಹೇಳುವ ಮೂಲಕ ಮತ್ತು ಅವರು ಪ್ರತಿಕ್ರಿಯಿಸುವ ಮೂಲಕ ಇದು ತಿಳಿಯುತ್ತದೆ. ಪಾಠ ಯೋಜನೆಗಳನ್ನು ರೂಪಿಸಿಕೊಳ್ಳುವುದರಲ್ಲಿ ಬಹಳಷ್ಟು ಜನ ಶಿಕ್ಷಕರು ತೊಡಗಿಕೊಳ್ಳುವುದಿಲ್ಲ. ಅವರು ಇದೊಂದು ಅನವಶ್ಯಕವಾದ ಹೆಚ್ಚಿನ ಒತ್ತಡ ಎಂದು ಭಾವಿಸುತ್ತಾರೆ. ಆದರೆ, ಮಗುವಿನ ಶೈಕ್ಷಣಿಕ ವಿಕಾಸದ ಮತ್ತು ಅದರ ಸಮಗ್ರ ಪ್ರಗತಿಯ ಬಗ್ಗೆ ಕಾಳಜಿ ಇರುವವರು ಯಾರೂ ಹಾಗೆ ಆಲೋಚಿಸುವುದಿಲ್ಲ. ಏಕೆಂದರೆ ಅದರ ದಾಖಲೀಕರಣ ಬಹಳ ಮುಖ್ಯವಾಗುತ್ತದೆ. ಇದರಿಂದಾಗಿ ಆಡಳಿತ ಮಂಡಳಿಗೆ ಮಕ್ಕಳಿಗೆ ಪಾಠ ಪ್ರವಚನಗಳು ಎಷ್ಟರಮಟ್ಟಿಗೆ ಆಗಿವೆ ಮತ್ತು ಎಷ್ಟರ ಮಟ್ಟಿಗೆ ಉದ್ದೇಶಿತ ಕೆಲಸವನ್ನು ಪೂರೈಸಿದ್ದಾರೆ ಎಂದು ತಿಳಿಯುತ್ತದೆ. ಜೊತೆಗೆ ಶಿಕ್ಷಕರು ಮತ್ತು ಮಕ್ಕಳ ನಡುವಿನ ಕಲಿಕೆಯ ಪ್ರಕ್ರಿಯೆಯ ಜಾಡನ್ನು ಅನುಸರಿಸುತ್ತಲೇ ಇರಲು ಸಾಧ್ಯವಾಗುತ್ತದೆ. ಪಾಠ ಯೋಜನೆ ಎಂದಿಗೂ ಹೊರೆಯಲ್ಲ. ಮಕ್ಕಳ ವಿಷಯದಲ್ಲಿ ಮಾತ್ರವಲ್ಲದೇ ಶಿಕ್ಷಕರಿಗೂ ತಮ್ಮ ಕೆಲಸವನ್ನು ಹಗುರಗೊಳಿಸಲು ಇದು ನೆರವಾಗುತ್ತದೆ. ಆದರೆ ಬಹಳಷ್ಟು ಜನ ಇದನ್ನು ಹೊರೆ ಎಂದು ತಿಳಿದುಕೊಂಡಿರುವ ಕಾರಣವೇ ನನಗೆ ತಿಳಿಯದು.

► ಪ್ರಗತಿಯ ದಾಖಲೆಯೆಂದರೆ ಪ್ರಗತಿಪತ್ರವಲ್ಲ

ಪಾಠ ಯೋಜನೆಯಂತೆಯೇ, ಮಕ್ಕಳ ಅಥವಾ ತರಗತಿಯ ಅಥವಾ ಮಗುವೊಂದರ ಕಲಿಕೆಯ ಪ್ರಗತಿಯನ್ನು ದಾಖಲಿಸುವಂತೆ ಮಗುವಿಗೂ ತನ್ನ ಪ್ರಗತಿಯನ್ನು ದಾಖಲಿಸುವುದರ ಬಗ್ಗೆ ಹೇಳಿಕೊಡಬೇಕು. ಇದನ್ನು ಹೇಗೆ ಮಾಡುವುದು? ಮಗುವು ತನ್ನ ಆ ಹೊತ್ತಿನ ಕಲಿಕೆಯ ಬಗ್ಗೆ ಮಾಹಿತಿಯನ್ನು ಹೊಂದಿರುತ್ತದೆ. ಅದರಂತೆಯೇ ತಾನು ಏನೇನು ಕಲಿಯಲು ಇಂದು ಮುಂದಾಗಿದ್ದೇನೆ ಎಂಬುದರ ಪಕ್ಷಿನೋಟವನ್ನು ಹೊಂದಿರುತ್ತದೆ. ಅದರ ನಂತರ ಪಾಠದ ನಂತರ ತಾನು ಏನನ್ನು ಕಲಿತಿದ್ದೇನೆ ಏನನ್ನು ಕಲಿತಿಲ್ಲ. ತನಗೆ ಯಾವುದು ಅರ್ಥವಾಗಿಲ್ಲ ಇತ್ಯಾದಿಗಳ ಅರಿವನ್ನು ಹೊಂದಿರುತ್ತದೆ. ತಾನು ಯಾವುದನ್ನು ಆ ಹೊತ್ತಿಗೆ ಕಲಿತಿರುವುದಿಲ್ಲವೋ ಅದನ್ನು ತಾನೇ ಸ್ವಪ್ರಯತ್ನದಿಂದ ಕಲಿಯಲೋ ಅಥವಾ ಬೇರೆಯವರಿಂದ ತಿಳಿದುಕೊಳ್ಳಲೋ ಮುಂದಾಗುತ್ತದೆ. ಈ ಮಕ್ಕಳ ಪ್ರಗತಿಯ ದಾಖಲೆಯು ಪಾಠ ಯೋಜನೆಯಷ್ಟೇ ಮುಖ್ಯವಾದುದು. ಇದು ಮಕ್ಕಳ, ಶಿಕ್ಷಕರ ಮತ್ತು ಪೋಷಕರ ಮೇಲಿರುವ ಕಲಿಕೆಯ ಒತ್ತಡವನ್ನು ಕಡಿಮೆ ಮಾಡುವುದರಲ್ಲದೇ ತಮ್ಮ ಕಲಿಕೆಯ ಬಗ್ಗೆ, ಅದರ ಪ್ರಗತಿಯ ಬಗ್ಗೆ ಸಂಪೂರ್ಣ ಅರಿವು ಹಾಗೂ ಜಾಡು ತಿಳಿದಿರುತ್ತದೆ. ಇದು ಪ್ರತಿಯೊಂದು ವಿಷಯಕ್ಕೂ ಅನ್ವಯವಾಗುತ್ತದೆ. ಇದೊಂದು ಕ್ರಮ ಮತ್ತು ಶಿಸ್ತು. ಇದನ್ನು ರೂಢಿಗೊಳಿಸಿದ್ದೇ ಆದರೆ ಮಕ್ಕಳು ಸ್ವಶಿಸ್ತಿಗೆ ಒಳಗಾಗುತ್ತಾರೆ. ಅಷ್ಟಾದರೆ ಪೋಷಕರು ಮತ್ತು ಶಿಕ್ಷಕರು ಕಲಿಕೆಯ ವಿಷಯದಲ್ಲಿ ಅರ್ಧ ಗೆದ್ದಂತೇ ಸರಿ.

► ಶಿಸ್ತು ತಾನೇ ರೂಢಿಸಿಕೊಳ್ಳಬೇಕು

ತಮ್ಮ ಯೋಜನೆಗಳನ್ನು ಮತ್ತು ಸಾಧನೆಗಳನ್ನು ದಾಖಲು ಮಾಡುವ ರೂಢಿಯನ್ನು ಮಕ್ಕಳಿಗೆ ಮಾಡಿಸುವುದು ಕಷ್ಟವೇನಲ್ಲ. ಆದರೆ ಶಿಕ್ಷಕರು ಮತ್ತು ಪೋಷಕರು ಇಂಥಾ ರೂಢಿಯನ್ನು ಮಾಡಿಕೊಳ್ಳಬೇಕು. ಮಗುವನ್ನು ಕಲಿಕೆಗೆ ತೊಡಗಿಸುವ ಮೊದಲೇ ಅಥವಾ ಯಾವುದೋ ಪಾಠವನ್ನು ಅಥವಾ ಅಧ್ಯಯನವನ್ನು ಅಥವಾ ಹೋಂವರ್ಕನ್ನು ಮಾಡುವ ಮೊದಲು ಯಾವುದ್ಯಾವುದನ್ನು ಮಾಡಬೇಕು ಎಂದು ನೋಡಿಕೊಳ್ಳಬೇಕು. ನಂತರ ಅದನ್ನು ಎಷ್ಟು ಸಮಯದವರೆಗೂ ತೆಗೆದುಕೊಳ್ಳಬೇಕಾಗಬಹುದು ಎಂಬುದನ್ನು ನೋಡಿಕೊಂಡು ಇತರ ವಿಷಯಗಳಿಗೂ ಸಮಯವನ್ನು ಯೋಜಿಸಿಕೊಳ್ಳಬೇಕು. ಗಡಿಯಾರದಲ್ಲಿರುವ ಚುಕ್ಕಿಗಳ ಅನುಸಾರವಾಗಿ ಕೆಲಸ ಮಾಡಬೇಕೆಂದಿಲ್ಲ. ಆದರೆ, ಅಂದಾಜಿನ ವೇಳಾಪಟ್ಟಿಯನ್ನು ಇಟ್ಟುಕೊಳ್ಳಲೇಬೇಕು. ಆಗಲೇ ಎಷ್ಟು ಮಾಡಿದ್ದೇವೆ? ಎಷ್ಟೆಷ್ಟು ಮಾಡುತ್ತಿದ್ದೇವೆ? ಇನ್ನೆಷ್ಟು ಮಾಡಬೇಕಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿರುತ್ತದೆ. ಇದೇ ವೇಳಾಪಟ್ಟಿ ಶಿಸ್ತನ್ನು ರೂಪಿಸುತ್ತದೆ. ಇದೇ ವೇಳಾಪಟ್ಟಿ ಅಗತ್ಯವಿರುವ ಸಮಯವನ್ನು ಪೋಲು ಮಾಡಬಾರದು ಎಂಬ ಎಚ್ಚರಿಕೆಯನ್ನು ನೀಡುತ್ತದೆ. ಇದೇ ವೇಳಾಪಟ್ಟಿ ತನಗೆಷ್ಟು ಸಮಯದ ಕೊರತೆ ಅಥವಾ ಉಳಿಕೆ ಇದೆ ಎಂಬ ಅರಿವನ್ನು ನೀಡುತ್ತದೆ. ಯೋಜನೆ, ವೇಳಾಪಟ್ಟಿಯ ಆಧಾರದ ಯೋಜನೆ, ಉದ್ದೇಶಿತ ಕಲಿಕೆಯ ಪಟ್ಟಿ, ಕಲಿಕೆಯ ಸಾಧನೆಯ ಅಥವಾ ಪ್ರಗತಿಯ ಪಟ್ಟಿ; ಇವುಗಳೆಲ್ಲವೂ ಶಿಕ್ಷಕರಿಗೂ, ಪೋಷಕರಿಗೂ ಮತ್ತು ಮಕ್ಕಳಿಗೂ ಕಲಿಕೆಯ ಪ್ರಕ್ರಿಯೆಯು ಮತ್ತಷ್ಟು ಸುಗಮಗೊಳಿಸುತ್ತದೆ. ಸ್ವಶಿಸ್ತನ್ನು ರೂಢಿಸುತ್ತದೆ. ತನ್ನ ಯೋಜನೆ ಮತ್ತು ಸಾಧನೆಯ ಬಗ್ಗೆ ತನಗೇ ಅರಿವುಂಟಾಗುವುದರಿಂದ ಮಗು ಮತ್ತು ಶಿಕ್ಷಕರಿಬ್ಬರೂ ಎಚ್ಚರಿಕೆಯಿಂದ ಮುಂದಿನ ಹೆಜ್ಜೆಗಳನ್ನು ಕಾಯ್ದುಕೊಳ್ಳಬಲ್ಲರು. ಈ ಶಿಸ್ತನ್ನು ಒಮ್ಮೆ ರೂಢಿಸಿಕೊಂಡರೆ ಅವರ ಎಲ್ಲಾ ಕಾರ್ಯ ಯೋಜನೆಗಳನ್ನು ಅವರು ಸಮರ್ಥವಾಗಿ ರೂಪಿಸಿಕೊಳ್ಳಬಲ್ಲರು. ಕಾರ್ಯ ಯೋಜನೆ ಮತ್ತು ಸಾಧನೆಯ ಪ್ರಗತಿಯ ದಾಖಲಾತಿ; ಇವೆರಡನ್ನೂ ಎಂದಿಗೂ ಮರೆಯಬಾರದು. ಇದು ಕಲಿಕಾ ನ್ಯೂನತೆಗಳನ್ನು ಮೀರುವುದಕ್ಕೂ ಸಹಾಯ ಮಾಡುತ್ತವೆ ಎಂಬುದನ್ನು ನಾನಿಲ್ಲಿ ಒತ್ತಿ ಹೇಳಬೇಕಾಗಿರುವುದು. ಗೋಜಲುಮಯ ಅಥವಾ ಗೊಂದಲಮಯ ಅಂದಾಜು ಐಡಿಯಾಗಳೇ ಸದಾ ಗೆಲ್ಲುತ್ತದೆ ಎಂಬುದನ್ನು ಎಂದಿಗೂ ನೆಚ್ಚಿಕೊಳ್ಳಬಾರದು. ಏಕೆಂದರೆ, ಕಲಿಕೆಯಲ್ಲಿ ಜೂಜಿನಾಟಕ್ಕೆ ಆಸ್ಪದವಿಲ್ಲ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News