ಬಾನಾಡಿಗಳ ಸ್ವರ್ಗ ಮಾಗಡಿ ಕೆರೆ

Update: 2018-12-23 11:03 GMT

ಚಳಿಗಾಲ ಬಂತೆಂದರೆ ಸಾಕು ವಿವಿಧ ಪ್ರದೇಶಗಳಿಂದ ಸುಮಾರು 10 ಸಾವಿರ ಕಿ.ಮೀ. ದೂರದಿಂದ ಆಗಮಿಸಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ ಸುಮಾರು ನಾಲ್ಕೈದು ತಿಂಗಳು ತಮ್ಮ ವಾಸ್ತವ್ಯ ಹೂಡಿ ಪುನಃ ತಮ್ಮ ತವರಿಗೆ ಮರಳುವ ಬಣ್ಣ ಬಣ್ಣದ ಸಹಸ್ರಾರು ವಿದೇಶಿ ಬಾನಾಡಿಗಳು ಸ್ವಚ್ಛಂದವಾಗಿ ವಿಹರಿಸುತ್ತ ವರ್ಣರಂಜಿತ ಪಕ್ಷಿ ಲೋಕವನ್ನೇ ಸೃಷ್ಟಿಯಾಗುತ್ತಿವೆ.

ಹೌದು. ಪ್ರತಿ ವರ್ಷದ ಚಳಿಗಾಲ ಪ್ರಾರಂಭವಾಗುತ್ತಿ ದ್ದಂತೆಯೇ ಮಾಗಡಿ ಕೆರೆಯಲ್ಲಿ ವಿದೇಶಿ ಪಕ್ಷಿಗಳ ಕಲರವ ಪ್ರಾರಂಭವಾಗುತ್ತದೆ. ಸ್ಥಳೀಯ ಗ್ರಾಮದ ಜನರಿಗೆ ಖುಷಿಯ ಅನುಭವ ನೀಡುವ ಈ ಬಾನಾಡಿಗಳು, ಆಕರ್ಷಕ ಪಕ್ಷಿಧಾಮ ವನ್ನೇ ರಚಿಸುತ್ತವೆ. ಹಲವಾರು ಪ್ರಭೇದಗಳ ಈ ಹಕ್ಕಿಗಳ ಆಶ್ರಯ ತಾಣದಿಂದಾಗಿ ಜಿಲ್ಲೆಯ ಈ ಕೆರೆ ಆಕರ್ಷಕ ಪ್ರವಾಸಿ ತಾಣವಾಗಿ ರೂಪುಗೊಂಡಿದೆ.

ಪಕ್ಷಿಗಳ ಸ್ವರ್ಗವೆಂದೇ ಮಾಗಡಿ ಕೆರೆಯನ್ನು ಕರೆಯಲಾಗುತ್ತಿದ್ದು, ದೂರದ ಪಾಕ್ತಿಸ್ತಾನ, ಬಾಂಗ್ಲಾದೇಶ, ಮಲೇಶಿಯಾ, ನೇಪಾಳ, ಆಸ್ಟ್ರಿಯಾ, ನ್ಯೂಝಿಲ್ಯಾಂಡ್, ಅಘ್ಘಾನಿಸ್ತಾನ, ಲಡಾಖ್, ಭೂತಾನ್, ಮ್ಯಾನ್ಮಾರ್, ಟಿಬೆಟ್, ಸೈಬೀರಿಯಾ, ಜಮ್ಮು ಕಾಶ್ಮೀರ ಹಾಗೂ ಹಿಮಾಲಯ ಸರೋವರಗಳಿಂದ ಬಾನಾಡಿಗಳು ಆಗಮಿಸುತ್ತವೆ.

 ಪಕ್ಷಿ ತಜ್ಞರ ಪ್ರಕಾರ ಇಂತಹ ಪಕ್ಷಿಗಳು ತಾವು ವಾಸಿಸುವ ಪ್ರದೇಶಗಳಲ್ಲಿ ಹೆಪ್ಪುಗಟ್ಟುವಂತಹ ಶೀತದಿಂದಾಗಿ ವಲಸೆ ಹೊರಟು ಉಷ್ಣ ಪ್ರದೇಶಗಳತ್ತ ಪಯಣಿಸುತ್ತವಂತೆ. ತಮ್ಮ ಪ್ರವಾಸ ಕಾಲದಲ್ಲಿ ಸೂಕ್ತವೆನಿಸುವ ತಾಣವನ್ನು ಆಯ್ದುಕೊಂಡು ಅಲ್ಲಿ ಕೆಲ ಕಾಲ ಇದ್ದು ಮರಳಿ ಮಾರ್ಚ್ ಹೊತ್ತಿಗೆ ತಮ್ಮ ಗೂಡಿಗೆ ಸೇರುತ್ತವೆ. ಹೀಗೆ ಇವುಗಳು ಆಯ್ದುಕೊಂಡ ಸಮಶೀತೋಷ್ಣ ಸ್ಥಳವೇ ಮಾಗಡಿ ಕೆರೆ.

 ನಮ್ಮ ದೇಶದ ಬಾತುಕೋಳಿಗಳಿಗಿಂತ ಚಿಕ್ಕ ಗಾತ್ರದಲ್ಲಿರುವ ಹಂಸಗಳ ಜಾತಿಗೆ ಸೇರುವ ಈ ಪಕ್ಷಿಗಳ ಒಡನಾಟದಿಂದ ಮಾಗಡಿ ಕೆರೆ ಕಂಗೊಳಿಸುತ್ತದೆ. ಈಗಾಗಲೇ ಸಾವಿರಾರು ಪಕ್ಷಿಗಳು ಕೆರೆಗೆ ಅತಿಥಿಗಳಾಗಿ ಆಗಮಿಸಿವೆ. ಇಲ್ಲಿಗೆ ವಲಸೆ ಬರುವ ಈ ವೈವಿಧ್ಯಮಯ ಪಕ್ಷಿಗಳ ಪ್ರಭೇದ ಸಹ ಸಾಕಷ್ಟಿದೆ. ಸಾಮಾನ್ಯವಾಗಿ ನವೆಂಬರ್ ಮೊದಲ ವಾರದಲ್ಲಿ ವಲಸೆ ಬಂದು ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ಸ್ವದೇಶಕ್ಕೆ ತೆರಳುತ್ತವೆ.

130 ಜಾತಿಯ ಬಾನಾಡಿಗಳು:

ಮಾಗಡಿ ಕೆರೆಯಲ್ಲಿ 130ಕ್ಕೂ ಹೆಚ್ಚು ಜಾತಿಯ ಪ್ರಭೇದದ ಹಕ್ಕಿಗಳು ಸುಮಾರು 10-12 ಸಾವಿರಕ್ಕೂ ಹೆಚ್ಚಿ ನ ಸಂಖ್ಯೆಯಲ್ಲಿ ಬರುತ್ತಿದ್ದು, ಅವುಗಳ ಪೈಕಿ ಗೀರು ತಲೆಯ ಬಾತುಕೋಳಿಗಳ (ಬಾರ್ ಹೆಡೆಡ್ ಗೂಸ್) ಸಂಖ್ಯೆ ಅಧಿಕವಾಗಿದ್ದು, ನಂತರದ ಸ್ಥಾನಗಳಲ್ಲಿ ವೈಟ್ ಐಬಿಸ್, ಹೆರಾನ್, ಕೂಟ್, ಪಾಮಿಂಗೊ ಅತಿ ವಿರಳವಾದ ಪಕ್ಷಿ, ಸ್ಪೂನ್‌ನೆಕ್, ಬ್ರಾಹ್ಮಿಣಿ ಡಕ್, ಬ್ಲಾಕ್ ಐಬಿಸ್, ಪೈಂಟೆಡ್ ಸ್ಟಾರ್ಕ್ ಹಾಗೂ ಸ್ಪೂನ್ ಬಿಲ್ ಜಾತಿಯ ಹಕ್ಕಿಗಳು ಈ ಕೆರೆಯನ್ನು ಆಶ್ರಯಿಸುತ್ತವೆ. ನಾವು ಕಾಣದ, ಕೇಳದ ನಾರ್ದನ್ ಶೆಲ್ವರ್, ಲಿಟ್ಲ್ ಕಾರ್ಪೋರಲ್ಸ್, ಅಟಲ್‌ರಿಂಗ್ ಪ್ಲೋವರ್, ಲೊಮನ್ ಡೇಲ್, ವುಡ್ ಸ್ಟಾಂಡ್, ಪೈಪರ, ಗ್ರಿವನ್ ಟೇಲ್, ಬ್ಲಾಕ್ ಡ್ರಾಂಗೋ , ರೆಡ್ ಥ್ರೋಟ್, ಪೆಡ್ಡಿ ಪ್ರೀಪೆಟ್ ಹೀಗೆ ಅನೇಕ ಜಾತಿಯ ಪಕ್ಷಿಗಳು ಕೆರೆಗೆ ವಲಸೆ ಬಂದಿರುವುದನ್ನು ಗುರುತಿಸಲಾಗಿದೆ.

ಪಕ್ಷಿಧಾಮಕ್ಕೆ ಭೇಟಿ ನೀಡುವುದು ಹೇಗೆ?

ಮಾಗಡಿ ಪಕ್ಷಿಧಾಮದಲ್ಲಿ ಒಮ್ಮೆ ಸುತ್ತಾಡಿ ಬಾನಾಡಿಗಳ ದಿನಚರಿ ಅರಿತುಕೊಳ್ಳಬೇಕೆಂದರೆ ಗದಗದಿಂದ ಹಾವೇರಿಗೆ ತೆರಳುವ ಮಾರ್ಗದಲ್ಲಿ 26 ಕಿ.ಮೀ., ಶಿರಹಟ್ಟಿಯಿಂದ ಕೇವಲ 8 ಕಿ.ಮೀ. ಹಾಗೂ ಇತಿಹಾಸ ಪ್ರಸಿದ್ಧ ಲಕ್ಷ್ಮೇಶ್ವರದಿಂದ 11 ಕಿ.ಮೀ. ಪಯಣಿಸಿದರೆ ಮಾಗಡಿ ಕೆರೆ ದೊರೆಯುತ್ತದೆ. ಈ ಕೆರೆಯ ಒಟ್ಟು ವಿಸ್ತೀರ್ಣ 134.15 ಎಕರೆ ಪ್ರದೇಶಲ್ಲಿ ವಿಶಾಲವಾಗಿ ವ್ಯಾಪಿಸಿಕೊಂಡಿದೆ. ಮಾಗಡಿ ಹಾಗೂ ಹೊಳಲಾಪುರ ಗ್ರಾಮದಲ್ಲಿ ಮೈಚಾಚಿದ ಈ ಕೆರೆಯ ಜಲಾನಯನ ಪ್ರದೇಶ ಪಕ್ಷಿಗಳ ಬಿಡಾರಕ್ಕೆ ಹೇಳಿ ಮಾಡಿಸಿದಂತಿದೆ.

ಪಕ್ಷಿ ವೀಕ್ಷಣೆ ಸಮಯ:

ಪಕ್ಷಿಗಳು ಹೆಚ್ಚಾಗಿರುವ ಸ್ಥಳದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗಿದ್ದು, ಪಕ್ಷಿಗಳ ಮಾಹಿತಿಗಳನ್ನು ಫಲಕಗಳಿಂದ ಪಡೆಯ ಬಹುದು. ಬೆಳಗ್ಗೆ ಎಳೆ ಬಿಸಿಲು ಆರಂಭವಾಗುವ 8 ರಿಂದ 9 ಗಂಟೆ ಹಾಗೂ ಸಂಜೆ 6 ರವರೆಗೆ ರಾತ್ರಿ ಚಿಕ್ಕ ಜಲಚರಗಳನ್ನು ಹೆಕ್ಕಿ ತಿನ್ನುವ ಈ ಪಕ್ಷಿಗಳು ರಾತ್ರಿ ಕೆರೆಯಲ್ಲಿ ತಂಗುತ್ತವೆ.

ಆಹಾರಕ್ಕಾಗಿ 50 ಕಿ.ಮೀ. ಹಾರಾಟ:

ಕೆರೆಯಲ್ಲಿ ವಾಸವಾಗುವ ಈ ವಲಸೆ ಹಕ್ಕಿಗಳು ವಾಕಿಂಗ್ ಪ್ರವೀಣರೆಂದರೆ ತಪ್ಪಾಗಲಾರದು. ಇವುಗಳ ದೈನಂದಿನ ಚಟುವಟಿಕೆ ಬಹು ವಿಶಿಷ್ಟವಾದದ್ದು. ಪ್ರತಿದಿನ ನಸುಕಿನ ವೇಳೆಗೆ ಆಹಾರ ಅರಸುತ್ತ ಸುತ್ತಲಿನ ಪ್ರದೇಶಗಳತ್ತ ಸುಮಾರು 40-50 ಕಿ.ಮೀ. ದೂರ ಸಂಚರಿಸುವ ಈ ಪಕ್ಷಿಗಳು ಎಳೆ ಬಿಸಿಲು ಆರಂಭವಾಗುವ ಹೊತ್ತಿಗೆ ಕೆರೆ ಅಂಗಳಕ್ಕೆ ವಿಮಾನಗಳಂತೆ ಕಾಲಿಡುತ್ತವೆ. ಸಂಜೆಯವರೆಗೆ ಕೆರೆಯಲ್ಲಿ ಸ್ವಚ್ಛಂದವಾಗಿ ವಿಹರಿಸಿ, ವಿರಮಿಸುವ ಈ ಸಂಕುಲ, ಸಂಜೆ 6ರ ಹೊತ್ತಿಗೆ ಪುನಃ ಆಹಾರ ಅರಸುತ್ತ ಮತ್ತೊಮ್ಮೆ ವಾಕಿಂಗ್ ಪ್ರಾರಂಭಿಸುತ್ತವೆ. ಒಕ್ಕಲಾದ ಹೊಲದಲ್ಲಿಯ ಅಳಿದುಳಿದ ಕಾಳು, ಕೆರೆಯಲ್ಲಿರುವ ಚಿಕ್ಕ ಜಲಚರಗಳನ್ನು ಹೆಕ್ಕಿ ತಿನ್ನುವ ಇವು ರಾತ್ರಿ ಕೆರೆಯಲ್ಲಿ ತಂಗುತ್ತವೆ.

ಕೆರೆಯಲ್ಲಿ ಹಕ್ಕಿಗಳ ರಂಗೋಲಿ:

‘ಕೆರೆಯಲ್ಲಿ ಗುಂಪು ಗುಂಪಾಗಿ ವಿಹರಿಸುವ ಬಣ್ಣ ಬಣ್ಣದ ಈ ಹಕ್ಕಿಗಳನ್ನು ಕಂಡಾಗ ನೀರಲ್ಲಿ ರಂಗೋಲಿ ಹಾಕಿದಂತೆ ಭಾಸವಾಗುತ್ತದೆ. ಬಂಗಾರ ವರ್ಣದ ಬ್ರಾಹ್ಮಿಣಿ ಡಕ್, ಬೂದು ಕೆಂಪು ನೇರಳೆ, ಕಪ್ಪುಬಣ್ಣದ ಕುತ್ತಿಗೆ ಕೊಕ್ಕರೆಗಳು, ಹೊಟ್ಟೆ ಭಾಗದಲ್ಲಿ ಬಿಳಿ ಹಾಗೂ ಬೂದು ಬಣ್ಣದ ರೆಕ್ಕೆಗಳು, ಕೇಸರಿ ಬಣ್ಣದ ನೀಳ ಕಾಲುಗಳನ್ನು ಹೊಂದಿರುವ ಈ ಪಕ್ಷಿಗಳು ನೀರಲ್ಲಿ ಗಂಭೀರವಾಗಿ ಚಲಿಸುವುದನ್ನು ಕಂಡಾಗ ಮೈಯೆಲ್ಲಾ ಪುಳಕಗೊಂಡು ಸ್ಮರಣೀಯ ಅನುಭವವಾಗುತ್ತದೆ’ ಎಂದು ಪ್ರತ್ಯಕ್ಷದರ್ಶಿ ಚಂದ್ರಶೇಖರ ಸೋಮಣ್ಣವರ್, ಸುರೇಶ ದಾಸಳ್ಳಿ ಹೇಳುತ್ತಾರೆ.

 ಅಳಿವಿನಂಚಿನಲ್ಲಿರುವ ಬಾತುಕೋಳಿ:

‘ಜಗತ್ತಿನಲ್ಲಿ ಕೇವಲ 30 ಸಾವಿರ ಬಾತುಕೋಳಿಗಳ (ಬಾರ್ ಹೆಡೆಡ್ ಗೂಸ್) ಸಂತತಿ ಮಾತ್ರ ಇದ್ದು,  ಪ್ರತಿ ವರ್ಷ ಮಾಗಡಿಕೆರೆಗೆ ಸುಮಾರು 12 ಸಾವಿರ ಬಾತುಕೋಳಿಗಳು ವಿದೇಶದಿಂದ ಬಂದು ಸುಮಾರು 5 ತಿಂಗಳು ವಾಸ್ತವ್ಯ ಹೂಡಿ ಪುನಃ ಮರಳಿ ಸ್ವದೇಶಕ್ಕೆ ಹೊರಡುತ್ತವೆ. ಲಡಾಖ್, ಬಾಂಗ್ಲಾ, ಪಾಕಿಸ್ತಾನ, ಚೀನಾ ದೇಶಗಳಲ್ಲಿ ಬಾತುಕೋಳಿಗಳ ಸಂತತಿ ಉಳಿವಿಗೆ ಸಾಕಷ್ಟು ಅನುದಾನವನ್ನು ಖರ್ಚು ಮಾಡುತ್ತಿದ್ದು, ನಮ್ಮ ದೇಶದಲ್ಲೂ ಬಾತುಕೋಳಿ ಸಂತತಿ ಉಳಿವಿಗೆ ಕೇಂದ್ರ ಸರಕಾರ ಪ್ರತ್ಯೇಕ ಅನುದಾನವನ್ನು ಬಿಡುಗಡೆ ಮಾಡಬೇಕು. ಅಂದರೆ ಮಾತ್ರ ಬಾತುಕೋಳಿಗಳ ಉಳಿವು ಸಾಧ್ಯ’ ಎಂದು ಸ್ಥಳೀಯರಾದ ಬಿ.ಎಸ್.ಪಾಟೀಲ ಹೇಳುತ್ತಾರೆ.

Writer - ಕೆ.ಎಂ.ಪಾಟೀಲ

contributor

Editor - ಕೆ.ಎಂ.ಪಾಟೀಲ

contributor

Similar News