ಜೇನಿನ ಹಲವು ಆರೋಗ್ಯಲಾಭಗಳ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಿ

Update: 2018-12-23 15:56 GMT

ನಿಸರ್ಗದ ಅದ್ಭುತ ಕೊಡುಗೆಯಾಗಿರುವ ಜೇನು ಅನಾದಿಕಾಲದಿಂದಲೂ ಔಷಧಿ ಮತ್ತು ಆಹಾರವಾಗಿ ಬಳಕೆಯಾಗುತ್ತಿದೆ. ಸಕ್ಕರೆ ಜನಪ್ರಿಯವಾಗುವ ಮೊದಲೇ ಜೇನು ಅತ್ಯಂತ ಪ್ರಾಚೀನ ಮತ್ತು ನೈಸರ್ಗಿಕ ಸಿಹಿಕಾರಕಗಳಲ್ಲೊಂದಾಗಿತ್ತು.

ಹೂವುಗಳಿಂದ ಮಕರಂದವನ್ನು ಸಂಗ್ರಹಿಸಿ ಜೇನುಹುಳಗಳು ತಯಾರಿಸುವ ಜೇನು ಅತ್ಯಂತ ಶುದ್ಧವಾಗಿದ್ದು ಹಲವಾರು ಪೌಷ್ಟಿಕಾಂಶಗಳನ್ನು ಒಳಗೊಂಡಿದೆ. ಆದರೆ ನಾವು ಇಂದು ಹೆಚ್ಚಾಗಿ ಸಂಸ್ಕರಿತ ಜೇನನ್ನು ಬಳಸುತ್ತಿದ್ದು, ಸಂಸ್ಕರಣೆಯಿಂದಾಗಿ ಅದರಲ್ಲಿಯ ಕೆಲವು ಪೌಷ್ಟಿಕಾಂಶಗಳು ನಷ್ಟವಾಗಿರುತ್ತವೆ.

 ಶುದ್ಧ ಜೇನಿನಲ್ಲಿರುವ ಖನಿಜಗಳು,ವಿಟಾಮಿನ್‌ಗಳು,ಉತ್ಕರ್ಷಣ ನಿರೋಧಕಗಳು ಮತ್ತು ಕಿಣ್ವಗಳು ಸಂಸ್ಕರಿತ ಜೇನಿನಲ್ಲಿರುವುದಿಲ್ಲ. ಶುದ್ಧಜೇನಿನ ಆರೋಗ್ಯಲಾಭಗಳು ಹೀಗಿವೆ....

►ದೇಹತೂಕವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ

ಜೇನು ಹೆಚ್ಚುವರಿ ದೇಹತೂಕದಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ಸಕ್ಕರೆಯ ಬದಲಾಗಿ ಜೇನನ್ನು ಬಳಸಿದರೆ ಅದು ದೇಹದ ತೂಕ ಹೆಚ್ಚುವುದನ್ನು ತಡೆಯುತ್ತದೆ,ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ ಮತ್ತು ಸಿರಮ್ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆಗೊಳಿಸುತ್ತದೆ. ಶುದ್ಧಜೇನಿನಲ್ಲಿ ಹಸಿವನ್ನು ಕಡಿಮೆ ಮಾಡುವ ಹಾರ್ಮೋನ್ ಗಳಿರುವುದರಿಂದ ತಿನ್ನುವುದು ಕಡಿಮೆಯಾಗುತ್ತದೆ ಮತ್ತು ದೇಹದ ತೂಕ ಹೆಚ್ಚುವುದನ್ನು ತಡೆಯುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಎರಡು ಚಮಚ ಜೇನು ಸೇವಿಸಿದರೆ ಅದು ನಾವು ನಿದ್ರೆಯಲ್ಲಿದ್ದಾಗಲೂ ಶರೀರದಲ್ಲಿಯ ಕೊಬ್ಬನ್ನು ದಹಿಸುತ್ತದೆ.

►ದೀರ್ಘ ಕಾಲಿಕ ರೋಗಗಳನ್ನು ತಡೆಯುತ್ತದೆ

ಜೇನು ಪ್ರಮುಖ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದ್ದು ಇವು ಹೃದ್ರೋಗಗಳು,ಪಾರ್ಶ್ವವಾಯು ಮತ್ತು ಕೆಲವು ವಿಧಗಳ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆಗೊಳಿಸುತ್ತವೆ. ಜೇನು ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುವ ಜೊತೆಗೆ ರೋಗಗಳ ವಿರುದ್ಧ ಹೋರಾಡುವ ರಕ್ತದಲ್ಲಿಯ ಉತ್ಕರ್ಷಣ ನಿರೋಧಕಗಳನ್ನೂ ಹೆಚ್ಚಿಸುತ್ತದೆ. ನಾವು ಜೇನನ್ನು ಹೆಚ್ಚು ಸೇವಿಸಿದಷ್ಟೂ ರಕ್ತದಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚುತ್ತವೆ.

►ಕೆಮ್ಮನ್ನು ಗುಣಪಡಿಸುತ್ತದೆ

ಜೇನು ಗಂಟಲಿನ ಕಿರಿಕಿರಿಯನ್ನು ಶಮನಗೊಳಿಸಲು ನೆರವಾಗುತ್ತದೆ ಮತ್ತು ಕೆಮ್ಮನ್ನು ತಡೆಯುತ್ತದೆ. ರಾತ್ರಿವೇಳೆ ಕೆಮ್ಮಿನಿಂದ ನರಳುತ್ತಿರುವ 1ರಿಂದ 5 ವರ್ಷ ಪ್ರಾಯದ ಮಕ್ಕಳಿಗೆ ಮಲಗುವ ಅರ್ಧ ಗಂಟೆ ಮೊದಲು ಎರಡು ಚಮಚ ಜೇನು ಕುಡಿಸಿದರೆ ಕೆಮ್ಮವುದು ಕಡಿಮೆಯಾಗುತ್ತದೆ. ಜೇನು ಸಾಮಾನ್ಯ ಕೆಮ್ಮಿನ ಔಷಧಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಅದು ಕೆಮ್ಮಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ರಾತ್ರಿ ಒಳ್ಳೆಯ ನಿದ್ರೆಯನ್ನು ನೀಡುತ್ತದೆ.

►ಗಾಯಗಳಿಗೆ ಚಿಕಿತ್ಸೆ ನೀಡುತ್ತದೆ

ನೈಸರ್ಗಿಕ ಪ್ರತಿಜೀವಕವಾಗಿರುವ ಜೇನು ಬ್ಯಾಕ್ಟೀರಿಯಾ ನಿರೋಧಕ ಮತ್ತು ಶಿಲೀಂಧ್ರ ನಿರೋಧಕ ಗುಣಗಳನ್ನು ಹೊಂದಿರುವುದರಿಂದ ಗಾಯಗಳು ಮತ್ತು ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಸೂಕ್ತವಾಗಿದೆ. ಜೇನು ಶರೀರದಲ್ಲಿಯ ದ್ರವಗಳೊಂದಿಗೆ ಪ್ರತಿವರ್ತಿಸುವ ಮೂಲಕ ಹೈಡ್ರೋಜನ್ ಪೆರಾಕ್ಸೈಡ್‌ನ್ನು ಉತ್ಪಾದಿಸುತ್ತದೆ ಮತ್ತು ಇದು ಬ್ಯಾಕ್ಟೀರಿಯಾಗಳು ಬೆಳೆಯಲು ಅವಕಾಶ ನೀಡುವುದಿಲ್ಲ. ಮಧುಮೇಹಿಗಳ ಕಾಲುಗಳ ಹುಣ್ಣುಗಳಿಗೆ ಚಿಕಿತ್ಸೆ ನೀಡಲೂ ಜೇನನ್ನು ಬಳಸಬಹುದಾಗಿದೆ.

►ಶಕ್ತಿಯನ್ನು ಹೆಚ್ಚಿಸುತ್ತದೆ

ಶರೀರದಲ್ಲಿ ಶಕ್ತಿ ಕುಂದಿದಂತೆ ಅನಿಸಿದರೆ ಒಂದು ಟೇಬಲ್‌ಸ್ಪೂನ್ ಜೇನು ಸೇವಿಸುವುದರಿಂದ ತಕ್ಷಣವೇ ಚೇತರಿಕೆಯುಂಟಾಗುತ್ತದೆ. ಅದರಲ್ಲಿರುವ ಫ್ರುಕ್ಟೋಸ್ ಮತ್ತು ಗ್ಲುಕೋಸ್ ತಕ್ಷಣವೇ ರಕ್ತವನ್ನು ಸೇರುವುದರಿಂದ ದಿಢೀರ್ ಶಕ್ತಿ ದೊರೆಯುತ್ತದೆ. ಅತ್ಯುತ್ತಮ ಶಕ್ತಿ ಇಂಧನವಾಗಿರುವ ಜೇನನ್ನು ವ್ಯಾಯಾಮದ ಮೊದಲು ಅಥವಾ ನಂತರ ಸೇವಿಸಬಹುದಾಗಿದೆ.

►ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಜೇನು ಹೃದಯದಲ್ಲಿನ ಅಪಧಮನಿಗಳನ್ನು ಹಿಗ್ಗಿಸುತ್ತದೆ ಮತ್ತು ಇದರಿಂದ ಹೃದಯಕ್ಕೆ ರಕ್ತದ ಪೂರೈಕೆ ಹೆಚ್ಚುತ್ತದೆ. ಇದು ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಮೂಲಕ ಹೃದಯ ರೋಗಗಳ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಜೇನು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನೂ ತಗ್ಗಿಸುತ್ತದೆ.

►ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ

 ಜೇನು ಟೈಪ್ 2 ಮಧುಮೇಹದಿಂದ ನರಳುತ್ತಿರುವವರಲ್ಲಿ ಹೃದಯ ರೋಗಗಳ ಅಪಾಯವನ್ನು ಕಡಿಮೆಗೊಳಿಸುತ್ತದೆ. ಅದು ಮಧುಮೇಹಿಗಳಲ್ಲಿ ಟ್ರೈಗ್ಲಿಸರೈಡ್‌ಗಳನ್ನು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಸಕ್ಕರೆಯ ಬಬದಲಾಗಿ ಜೇನು ಸೇವಿಸಿದರೆ ರಕ್ತದಲ್ಲಿಯ ಗ್ಲುಕೋಸ್ ಮಟ್ಟ ಹೆಚ್ಚುವದಿಲ್ಲ, ಅದರಲ್ಲಿಯ ಫ್ರುಕ್ಟೋಸ್ ಮತ್ತು ಗ್ಲುಕೋಸ್ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಕ್ರಮಬದ್ಧಗೊಳಿಸಲು ಶರೀರಕ್ಕೆ ನೆರವಾಗುತ್ತವೆ ಮತ್ತು ಅದನ್ನು ಸ್ಥಿರವಾಗಿಸುತ್ತವೆ.

►ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ

ಜೇನು ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಅದು ಚಯಾಪಚಯ ಒತ್ತಡವನ್ನು ತಡೆಯುವ ಮೂಲಕ ಮಿದುಳನ್ನು ಶಾಂತವಾಗಿರಿಸುತ್ತದೆ. ಋತುಬಂಧವಾದ ಮಹಿಳೆಯರು ಪ್ರತಿದಿನ ಒಂದು ಚಮಚ ಜೇನನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ಉತ್ತಮಗೊಳ್ಳುತ್ತದೆ. ಜೇನಿನಲ್ಲಿಯ ಉತ್ಕರ್ಷಣ ನಿರೋಧಕಗಳು ಗ್ರಹಣ ಶಕ್ತಿ ಕಡಿಮೆಯಾಗುವುದನ್ನು ಮತ್ತು ಬುದ್ಧಿಮಾಂದ್ಯತೆಯನ್ನು ತಡೆಯುತ್ತವೆ.

►ಪರಾಗದ ಅಲರ್ಜಿಗಳನ್ನು ನಿವಾರಿಸುತ್ತದೆ

ಪರಾಗದ ಅಲರ್ಜಿ ಹೊಂದಿರುವವರು ಜೇನು ಸೇವಿಸುವುದರಿಂದ ಅದರಿಂದ ಪಾರಾಗಬಹುದಾಗಿದೆ. ಶುದ್ಧ ಜೇನಿನಲ್ಲಿರುವ ಜೇನುಹುಳ ಪರಾಗ ಮತ್ತು ಜೊಲ್ಲು ಹೂವುಗಳ ಪರಾಗದ ಸಂಪರ್ಕಕ್ಕೆ ಬಂದಾಗ ಉಂಟಾಗುವ ಅಲರ್ಜಿಗಳ ವಿರುದ್ಧ ರಕ್ಷಣೆ ನೀಡುತ್ತವೆ. ಕಣ್ಣುಗಳಲ್ಲಿ ನೀರು,ತುರಿಕೆ,ಸೀನುವಿಕೆ ಮತ್ತು ಇಂತಹುದೇ ಇತರ ಅಲರ್ಜಿ ಲಕ್ಷಣಗಳಿಂದ ಜೇನು ಮುಕ್ತಿ ನಿಡುತ್ತದೆ.

►ನಿದ್ರೆಗೆ ಸಹಕರಿಸುತ್ತದೆ

ನಿದ್ರೆಯ ಕೊರತೆಯಿಂದ ಬಳಲುತ್ತ್ತಿರುವವರು ರಾತ್ರಿ ಮಲಗುವ ಮುನ್ನ ಜೇನು ಬೆರೆಸಿದ ಬೆಚ್ಚಗಿನ ಹಾಲನ್ನು ಸೇವಿಸಿದರೆ ಒಳ್ಳೆಯ ನಿದ್ರೆ ಬರುತ್ತದೆ. ಜೇನು ಸೆರೊಟೋನಿನ್ ಅನ್ನು ಬಿಡುಗಡೆಗೊಳಿಸುತ್ತದೆ ಮತ್ತು ಇದು ಬಳಿಕ ಮೆಲಾಟೋನಿನ್‌ಗೆ ಪರಿವರ್ತನೆಗೊಂಡು ಚೆನ್ನಾಗಿ ನಿದ್ರೆ ಮಾಡಲು ನೆರವಾಗುತ್ತದೆ.

►ಅತಿಸಾರವನ್ನು ಗುಣಪಡಿಸುತ್ತದೆ

ಜೇನು ಪೊಟ್ಯಾಷಿಯಂ ಮತ್ತು ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿರುವುದರಿಂದ ಅತಿಸಾರದ ಸಂದರ್ಭದಲ್ಲಿ ಅದನ್ನು ಸೇವಿಸಿದರೆ ಶಮನಗೊಳ್ಳುತ್ತದೆ. ಜೇನಿನಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣವು ಅತಿಸಾರವನ್ನುಂಟು ಮಾಡುವ ಪ್ಯಾಥೊಜೆನ್‌ಗಳನ್ನು ನಿಷ್ಕ್ರಿಯಗೊಳಿಸುತ್ತದೆ.

►ಹಲ್ಲುಗಳು ಮತ್ತು ಒಸಡುಗಳನ್ನು ಆರೋಗ್ಯಯುತವಾಗಿರಿಸುತ್ತದೆ

ಜೇನು ಪಾಚಿಗಳ ಬೆಳವಣಿಗೆಯನ್ನು ತಡೆಯುವ ಮೂಲಕ ಹಲ್ಲುಗಳು ಮತ್ತು ವಸಡುಗಳಿಗೆ ರಕ್ಷಣೆಯನ್ನು ನೀಡುತ್ತದೆ. ಗಾಯಗಳನ್ನು ವಾಸಿಗೊಳಿಸುವ ಜೇನಿನ ಗುಣವು ವಸಡುಗಳಲ್ಲಿ ರಕ್ತಸ್ರಾವದಂತಹ ಸೋಂಕುಗಳನ್ನು ನಿವಾರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News