ರಾಹುಲ್ ಗಾಂಧಿ ತಮ್ಮ ನಾಯಕತ್ವ ಸಾಬೀತು ಮಾಡಿದ್ದಾರೆ : ಸಿದ್ದರಾಮಯ್ಯ

Update: 2018-12-23 17:10 GMT

ಬಾಗಲಕೋಟೆ, ಡಿ.23: ಹಿಂದಿ ಮಾತನಾಡುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸಗಢದಲ್ಲಿ ಕಾಂಗ್ರೆಸ್ ಗೆದ್ದಿದೆ. ರಾಹುಲ್ ಗಾಂಧಿ ತಮ್ಮ ನಾಯಕತ್ವ ಸಾಬೀತು ಮಾಡಿದ್ದಾರೆ. ಮೊನ್ನೆ ನಡೆದ ಗೆಲುವು ಸಣ್ಣ ವಿಕ್ಟರಿಯಲ್ಲ. ಅದು ದೊಡ್ಡ ಗೆಲುವು ಎಂದು ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಜಮಖಂಡಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆನಂದ ನ್ಯಾಮಗೌಡ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮಿತ್ ಶಾ, ನರೇಂದ್ರ ಮೋದಿ ವರ್ಚಸ್ಸು ಹಿಮಾಲಯ ಪರ್ವತದಷ್ಟಿದೆ. ಅದನ್ನು ಜನರು ಹುಸಿಗೊಳಿಸಿದ್ದಾರೆ. ನರೇಂದ್ರ ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿ ಈವರೆಗೂ ಯಾರೂ ಬಂದಿಲ್ಲ. ನಾನೂ ಅನೇಕ ಪ್ರಧಾನಿಗಳನ್ನು ನೋಡಿದ್ದೇನೆ. ಆದರೆ, ಮೋದಿಯಂತೆ ಸುಳ್ಳು ಹೇಳುವ ಪ್ರಧಾನಿ ನೋಡಿಲ್ಲ ಎಂದು ಲೇವಡಿ ಮಾಡಿದರು.

ಮನ್ ಕಿ ಬಾತ್‌ನಿಂದ ಜನರನ್ನು ಮರಳು ಮಾಡುತ್ತೇನೆಂದು ಕೊಂಡಿದ್ದರು. ಮನ್ ಕಿ ಬಾತ್ ಈಗ ಠುಸ್ ಆಗಿದೆ. ನೋಟ್ ಬ್ಯಾನ್ ವಿಚಾರ ಇಟ್ಟುಕೊಂಡು ಶ್ರೀಮಂತರ, ಕಪ್ಪುಹಣವುಳ್ಳವರ ನಿದ್ದೆಗೆಡಿಸ್ತೀನಿ ಅಂದರು. ಆದರೆ ನಿದ್ದೆಗೆಟ್ಟವರು ಬಡವರು, ರೈತರು. ನೋಟ್ ಬ್ಯಾನ್‌ನಿಂದ ಸತ್ತವರು ರೈತರು, ಬಡವರು, ಬೀದಿ ವ್ಯಾಪಾರಿಗಳು. ಮೋದಿಯಂತಹ ಪ್ರಧಾನಿ ಇರಬೇಕಾ ಎಂದು ಪ್ರಶ್ನಿಸಿದರು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸಷ್ಟಿ ಎಂದರು ಮೋದಿ. ಹತ್ತು ಲಕ್ಷವಾದರೂ ಮಾಡಲಿಲ್ಲ. ಕಪ್ಪು ಹಣ ತಂದು ಪ್ರತಿಯೊಬ್ಬರ ಅಕೌಂಟ್‌ಗೆ 15 ಲಕ್ಷ ಹಾಕುತ್ತೀವಿ ಅಂದರು. 15 ರೂಪಾಯಿ ಕೂಡ ಹಾಕಲಿಲ್ಲ. ಮೋದಿಯವರನ್ನು ರಾಷ್ಟ್ರೀಕತ ಬ್ಯಾಂಕ್ ಸಾಲಮನ್ನಾ ಮಾಡಿ ಎಂದೆ. ಜಪ್ಪಯ್ಯ ಎನ್ನಲಿಲ್ಲ. ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸಗಢಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 1 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡಿದರು. ರಾಹುಲ್ ಗಾಂಧಿ ಪ್ರಧಾನಿ ಆದ ನಂತರ ದೇಶದ ರೈತರ ಸಾಲಮನ್ನಾ ಮಾಡುತ್ತಾರೆ. ರಾಹುಲ್ ಗಾಂಧಿ ನುಡಿದಂತೆ ನಡೆದಿದ್ದಾರೆ. ಯಡಿಯೂರಪ್ಪ ಇದ್ದಾರಲ್ಲ. ರೈತರ ಸಾಲ ಮನ್ನಾ ಮಾಡಿ ಅಂದರೆ, ದುಡ್ಡು ಎಲ್ಲಿಂದ ತರಲಿ, ನಮ್ಮ ಸರಕಾರದಲ್ಲಿ ನೋಟ್ ಪ್ರಿಂಟ್ ಮಾಡೋ ಮಷಿನ್ ಇಲ್ಲ ಅಂದರು.

ಯಡಿಯೂರಪ್ಪ ಹಸಿರು ಟವಲ್ ಹಾಕೊಂಡು, ನಾನು ಮಣ್ಣಿನ ಮಗ, ರೈತನ ಮಗ ಅಂತ ಅಂದ್ಕೊಂಡು ತಿರುಗುತ್ತಾರೆ. ಯಡಿಯೂರಪ್ಪಗೆ ಸಿಎಂ ಆಗುವುದು ಕನಸು, ಎಷ್ಟೇ ತಿಪ್ಪರಲಾಗಾ ಹಾಕಿದರೂ ಯಡಿಯೂರಪ್ಪ ಮುಖ್ಯಮಂತ್ರಿ ಆಗಲ್ಲ. ಹಿಂದೂ-ಮುಸ್ಲಿಂ ನಡುವೆ ಎತ್ತಿಕಟ್ಟುತ್ತಾರೆ. ಚುನಾವಣೆ ಬಂದಾಗ ಮಾತ್ರ ರಾಮಮಂದಿರ ಕಟ್ಟುತ್ತೇವೆ ಅಂತಾರೆ. 1992ರಲ್ಲೇ ರಾಮಮಂದಿರ ಕಟ್ತೀವಿ ಅಂದಿದ್ದಿರಿ, ಯಾಕೆ ಕಟ್ಟಲಿಲ್ಲ. ಈಗ ಮೋದಿ ಬಂದಿದ್ದಾರೆ ರಾಮ ಮಂದಿರ ಯಾಕೆ ಕಟ್ಟೋಕೆ ಆಗಲಿಲ್ಲಾ? ಯಾರಾದರೂ ಅವರನ್ನು ಹಿಡ್ಕೊಂಡಿದ್ದರಾ, ಇಟ್ಟಿಗೆ ತಕೊಂಡಿದ್ದೂ ಆಯ್ತು, ಕೊಟ್ಟಿದ್ದೂ ಆಯ್ತು, ಜೇಬಲ್ಲಿ ದುಡ್ಡು ಹಾಕಿದ್ದಾಯ್ತು. ಈವರೆಗೂ ಕಟ್ಟೋಕೆ ಆಗಲೇ ಇಲ್ಲ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News