1 ತಿಂಗಳ ಹಸುಗೂಸು ಹತ್ಯೆ ಪ್ರಕರಣ: ಇಬ್ಬರು ವಶಕ್ಕೆ
ಬೆಂಗಳೂರು, ಡಿ.23: ಒಂದು ತಿಂಗಳ ಹಸುಗೂಸನ್ನು ಹತ್ಯೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಇಲ್ಲಿನ ಅಶೋಕ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಗುವಿನ ತಂದೆ ಕಾರ್ತಿಕ್ ಎನ್ನುವವರು, ತನ್ನ ಸಹೋದರ ಹಾಗೂ ತಂದೆ ನನ್ನ ಒಂದು ತಿಂಗಳ ಮಗುವನ್ನು ಹತ್ಯೆ ಮಾಡಿದ್ದಾರೆಂದು ಆರೋಪಿಸಿ ಅಶೋಕ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ಸಂಬಂಧ ಕ್ರಮಕ್ಕೆ ಮುಂದಾಗಿರುವ ಪೊಲೀಸರು ಆರೋಪಿ ಅರವಿಂದ್ ಹಾಗೂ ಚಿತ್ತರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ವಿವೇಕಾ ನಗರ ನಿವಾಸಿಗಳಾದ ಕಾರ್ತಿಕ್ ದಂಪತಿಗಳಿಗೆ ಅವಳಿ ಮಕ್ಕಳು ಜನಿಸಿದ್ದವು. ಡಿ.21ರಂದು 1 ಮಗುವಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆ ಔಷಧಿ ತರಲು ಕಾರ್ತಿಕ್ ಮಗುವನ್ನು ಮನೆಯಲ್ಲೇ ಬಿಟ್ಟು ಹೊರಗೆ ತೆರಳಿದ್ದರು.
ಈ ವೇಳೆ ಅಳುತ್ತಿದ್ದ ಮತ್ತೊಂದು ಮಗುವನ್ನು ಕಾರ್ತಿಕ್ ಪತ್ನಿ ಸಂತೈಸುತ್ತಿದ್ದರು ಎನ್ನಲಾಗಿದ್ದು, ಕಾರ್ತಿಕ್ ವಾಪಸ್ಸು ಬಂದ ನಂತರ ಜ್ವರದಿಂದ ಬಳಲುತ್ತಿದ್ದ ಮಗು ನಾಪತ್ತೆಯಾಗಿತ್ತು. ನಂತರ ಕಾರ್ತಿಕ್ ಮಗುವನ್ನು ಮನೆಯಲ್ಲಿ ಹುಡುಕಾಡಿದರೂ ಸಹ ಮಗು ಪತ್ತೆಯಾಗಿರಲಿಲ್ಲ. ಪ್ರಸ್ತುತ ಮಗು ಮನೆಯ ಮಂಚದ ಕೆಳಗೆ ಬಟ್ಟೆ ಸುತ್ತಿದ ಸ್ಥಿತಿಯಲ್ಲಿ ಶವವಾಗಿ ದೊರೆತಿದೆ ಎನ್ನಲಾಗಿದೆ.
ಈ ಸಂಬಂಧ ಕಾರ್ತಿಕ್ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.