ಮೂರನೇ ಟೆಸ್ಟ್‌ಗೆ ಜಡೇಜ ಲಭ್ಯ

Update: 2018-12-23 18:57 GMT

ಮೆಲ್ಬೋರ್ನ್, ಡಿ.23: ಆಸ್ಟ್ರೇಲಿಯ ವಿರುದ್ಧ ಪ್ರತಿಷ್ಠಿತ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಮೊದಲು ಭಾರತಕ್ಕೆ ಸಿಹಿ ಸುದ್ದಿಯೊಂದು ಲಭಿಸಿದೆ. ಗಾಯದ ಸಮಸ್ಯೆ ಎದುರಿಸುತ್ತಿದ್ದ ಆಲ್‌ರೌಂಡರ್ ರವೀಂದ್ರ ಜಡೇಜ ಮೂರನೇ ಟೆಸ್ಟ್‌ಗೆ ಫಿಟ್ ಆಗಿದ್ದು, ಆಯ್ಕೆಗೆ ಲಭ್ಯವಿದ್ದಾರೆ ಎಂದು ಬಿಸಿಸಿಐ ರವಿವಾರ ಘೋಷಿಸಿದೆ. ಈಗ ನಡೆಯುತ್ತಿರುವ 4 ಪಂದ್ಯಗಳ ಟೆಸ್ಟ್ ಸರಣಿಯು 1-1 ರಿಂದ ಸಮಬಲದಲ್ಲಿದೆ. ಭಾರತ ಮೊದಲ ಪಂದ್ಯವನ್ನು ಜಯಿಸಿದರೆ, ಆಸೀಸ್ 2ನೇ ಪಂದ್ಯವನ್ನು ಗೆದ್ದುಕೊಂಡಿತ್ತು.

 ವೆಸ್ಟ್‌ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ದೀರ್ಘ ಬೌಲಿಂಗ್ ಸ್ಪೆಲ್ ಎಸೆದ ಬಳಿಕ ಆಲ್‌ರೌಂಡರ್ ಜಡೇಜ ಎಡಭುಜದ ನೋವಿರುವುದಾಗಿ ಹೇಳಿದ್ದರು. ನ.2 ರಂದು ಮುಂಬೈನಲ್ಲಿ ಅವರಿಗೆ ಇಂಜೆಕ್ಷನ್ ನೀಡಲಾಗಿತ್ತು. ಇದರಿಂದ ಅವರು ನೆಮ್ಮದಿ ಪಡೆದಿದ್ದರು. ನ.12ರಿಂದ 15ರ ತನಕ ಸೌರಾಷ್ಟ್ರದ ಪರ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು. ಯಾವುದೇ ಸಮಸ್ಯೆಯಿಲ್ಲದೆ 64 ಓವರ್‌ಗಳ ಬೌಲಿಂಗ್ ಮಾಡಿದ್ದರು. ಹೀಗಾಗಿ ಅವರು ಫಿಟ್ ಇದ್ದಾರೆಂದು ಪರಿಗಣಿಸಿ ಆಸ್ಟ್ರೇಲಿಯ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು ಎಂದು ಬಿಸಿಸಿಐ ತಿಳಿಸಿದೆ. ಜಡೇಜ ಆಸ್ಟ್ರೇಲಿಯಕ್ಕೆ ಬಂದ ಬಳಿಕ ನ.30 ರಂದು ಭುಜನೋವು ಕಾಣಿಸಿಕೊಂಡಿತ್ತು. ಆದಿನವೇ ಅವರಿಗೆ ಮತ್ತೊಂದು ಇಂಜೆಕ್ಷನ್ ನೀಡಲಾಗಿತ್ತು. ಪುನಶ್ಚೇತನ ಶಿಬಿರದ ಜೊತೆಗೆ ಇಂಜೆಕ್ಷನ್ ನೀಡಿದ ಕಾರಣ ಅವರು ಚೇತರಿಸಿಕೊಂಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News