ಗ್ರಾಮ ಲೆಕ್ಕಾಧಿಕಾರಿ ಕುಟುಂಬಕ್ಕೆ 6 ತಿಂಗಳೊಳಗೆ ಸರಕಾರಿ ಸೌಲಭ್ಯ: ಸಚಿವ ನಾಡಗೌಡ
ರಾಯಚೂರು, ಡಿ.24: ಮೃತ ಗ್ರಾಮ ಲೆಕ್ಕಾಧಿಕಾರಿಯ ಕುಟುಂಬಕ್ಕೆ 6 ತಿಂಗಳೊಳಾಗಿ ಸಿಗಬೇಕಾದ ಸರಕಾರಿ ಸೌಲಭ್ಯಗಳನ್ನು ನೀಡಲಾಗುವುದು. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗುವ ವೆಚ್ಚವನ್ನು ಸರಕಾರದಿಂದ ಭರಿಸಲಾಗುತ್ತದೆ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡರವರು ಮೃತರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಸೋಮವಾರ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ಮೃತರ ಕುಟುಂಬದ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಲವೆಡೆ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿರುವುದು ನಿಜ. ಕೃಷ್ಣ ಮತ್ತು ತುಂಗಭದ್ರ ನದಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ದೊಡ್ಡ ಮರಳು ದಂಧೆಕೋರರು ಸಿಗುತ್ತಿಲ್ಲ. ಸಣ್ಣ ಪುಟ್ಟ ಮನೆ ಕಟ್ಟಿಸಿಕೊಳ್ಳೋಕೆ ಮರಳು ಒಯ್ಯುವವರನ್ನು ಪತ್ತೆ ಹಚ್ಚಿ ಕೇಸ್ ಹಾಕಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ದಂಧೆಯಲ್ಲಿ ಶಾಮಿಲಾಗಿರುವವರ ವಿರುದ್ಧ ಸಾಕ್ಷಾಧಾರಗಳು ದೊರೆತರೆ ಎಲ್ಲರ ಮೇಲು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ. ಟಿಪ್ಪರ್ ಹರಿಸಿ ಅಧಿಕಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನ ಬಂಧಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಲಿಂಗಸೂಗೂರು ಸಹಾಯಕ ಆಯುಕ್ತರಾದ ಮಾರುತಿ, ಸಿಂಧನೂರು ತಹಶೀಲ್ದಾರ ಶಿವಾನಂದ್ ಸಾಗರ್, ಮಾನ್ವಿ ತಹಶೀಲ್ದಾರ ಬಿರಾದರ ಸೇರಿ ಇನ್ನಿತರರು ಉಪಸ್ಥಿತರಿದ್ದರು.