ಬೆಂಗಳೂರು: ಈಶಾನ್ಯ ವಿಭಾಗದ ಪೊಲೀಸರ ಕಾರ್ಯಾಚರಣೆ; ಕೋಟ್ಯಾಂತರ ರೂ. ಮೌಲ್ಯದ ಮಾಲು ಜಪ್ತಿ
ಬೆಂಗಳೂರು, ಡಿ.24: ಕನ್ನ ಕಳವು, ವಾಹನ ಕಳವು, ಸುಲಿಗೆ ಆರೋಪದಡಿ 12 ಆರೋಪಿಗಳನ್ನು ಬಂಧಿಸಿರುವ ಈಶಾನ್ಯ ವಿಭಾಗದ ಪೊಲೀಸರು, 2.5 ಕೆ.ಜಿ. ತೂಕದ ಚಿನ್ನ, 6 ಕಾರುಗಳು, 4 ಬೈಕ್ ಸೇರಿ 1.60 ಕೋಟಿ ರೂ. ಮೌಲ್ಯದ ಮಾಲು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆ ಕುರಿತು ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಅಮೃತಹಳ್ಳಿ ಠಾಣಾ ಪೊಲೀಸರು ಕನಕಪುರದ ರಾಹುಲ್ ನಾಯಕ್(20), ಅನಿಲ್ ಕುಮಾರ್(19) ಎಂಬವರನ್ನು ಬಂಧಿಸಿ 30 ಲಕ್ಷ ಮೌಲ್ಯದ 1 ಕೆ.ಜಿ. ಚಿನ್ನಾಭರಣಗಳನ್ನು ವಶಪಡಿಸಿಕೊಂಡು 8 ಕನ್ನ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ ಎಂದರು.
ವಿದ್ಯಾರಣ್ಯಪುರ ಠಾಣಾ ಪೊಲೀಸರು ಮಂಜುನಾಥ್(25) ಎಂಬಾತನನ್ನು ಬಂಧಿಸಿ 20 ಲಕ್ಷ ಮೌಲ್ಯದ 600 ಗ್ರಾಂ ಚಿನ್ನಾಭರಣ, ಕಾರನ್ನು ವಶಪಡಿಸಿಕೊಂಡು 8 ಕಳವು ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.
ಅದೇ ರೀತಿ, ಮನೆ ಕಳ್ಳತನ ಮಾಡುತ್ತಿದ್ದ ಡಿ.ಜೆ.ಹಳ್ಳಿಯ ಇರ್ಷಾದ್(38), ಶಿವಾಜಿನಗರದ ಉಮರ್ ಅಹ್ಮದ್(42)ನನ್ನು ಬಂಧಿಸಿ, 9 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡರೆ, ಮತ್ತೊಬ್ಬ ಆರೋಪಿ ಇರ್ಷಾದ್‌ನಿಂದ 4 ಲಕ್ಷ ಮೌಲ್ಯದ 120 ಗ್ರಾಂ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಶಿವಾಜಿನಗರದ ವೇಲು(40) ಎಂಬಾತನನ್ನು ಬಂಧಿಸಿ 8 ಲಕ್ಷ ಮೌಲ್ಯದ 250 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ದೇವನಹಳ್ಳಿ ಠಾಣಾ ಪೊಲೀಸರು ದೊಡ್ಡಬಳ್ಳಾಪುರದ ನಾರಾಯಣಸ್ವಾಮಿ(48) ಎಂಬಾತನನ್ನು ಬಂಧಿಸಿ 5.75 ಲಕ್ಷ ರೂ. ಮೌಲ್ಯದ 230 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡು 4 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಕೊಡಿಗೇಹಳ್ಳಿ ಠಾಣಾ ಪೊಲೀಸರು ಶಿವಮೊಗ್ಗ ಮೂಲದ ಶೇಕ್ ಶಾಹಿದ್(21), ಹಮೀದ್(22), ಮುಹಮ್ಮದ್ ಹುಸೇನ್(28) ಎಂಬವರನ್ನು ಬಂಧಿಸಿ 40 ಸಾವಿರ ನಗದು, 52 ಗ್ರಾಂ ಚಿನ್ನ. 2 ಕಾರು, 22 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ 6 ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ಆಯುಕ್ತರು ತಿಳಿಸಿದರು.
ವಿದ್ಯಾರಣ್ಯಪುರ ಠಾಣಾ ಪೊಲೀಸರು ಶ್ರೀನಾಥ್(29) ಎಂಬಾತನನ್ನು ಕಾರು ಕಳವು ಆರೋಪದಡಿ ಬಂಧಿಸಿ 15 ಲಕ್ಷ ಮೌಲ್ಯದ ಮೂರು ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಬೈಕ್ ಕಳವು ಆರೋಪದಡಿ ಪಶುಪತಿ(24) ಎಂಬಾತನನ್ನು ಬಂಧಿಸಿ 2.5 ಲಕ್ಷ ರೂ. ಮೌಲ್ಯದ 3 ಬೈಕ್ ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ ಎಂದು ವಿವರಿಸಿದರು.
ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಗಳಿಗೆ 1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾವಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.