ಲೋಕಸಭಾ ಚುನಾವಣೆ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆ: ದಿನೇಶ್ ಗುಂಡೂರಾವ್
ಬೆಂಗಳೂರು, ಡಿ.24: ಮುಂದಿನ ಸಾಲಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಬಳಿಕ ಸಚಿವರ ಮೌಲ್ಯಮಾಪನ ನಡೆಯಲಿದ್ದು, ಆನಂತರ ಸಂಪುಟದಲ್ಲಿ ಬದಲಾವಣೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ, ಎಲ್ಲ ಸಮುದಾಯಗಳಿಗೆ ಆದ್ಯತೆ ನೀಡುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಿದ್ದೇವೆ ಎಂದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ನಮ್ಮ ಪಕ್ಷದ ಹಿರಿಯ ನಾಯಕರು. ಪಕ್ಷಕ್ಕಾಗಿ ಅವರ ಕೊಡುಗೆ ಅಪಾರ. ಸಮ್ಮಿಶ್ರ ಸರಕಾರದಲ್ಲಿ ಕೆಲವರಿಗೆ ಮಾತ್ರ ಅವಕಾಶಗಳನ್ನು ನೀಡಲು ಸಾಧ್ಯವಿರುವುದರಿಂದ, ಅವರಿಗೆ ಅವಕಾಶ ಸಿಕ್ಕಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗುತ್ತದೆ ಎಂದು ಅವರು ಹೇಳಿದರು.
ಸಚಿವ ಸಂಪುಟದಲ್ಲಿ ಅವಕಾಶ ಸಿಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆಯೇ ಹೊರತು, ಪಕ್ಷದ ವಿರುದ್ಧ ಹೇಳಿಕೆಯನ್ನು ನೀಡಿಲ್ಲ. ಅವರ ಜೊತೆ ನಾನು ಚರ್ಚೆ ಮಾಡುತ್ತೇನೆ. ಎಲ್ಲ ಅಸಮಾಧಾನಗಳು ಶೀಘ್ರವೇ ಬಗೆಹರಿಯಲಿವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಸಂಪುಟದಿಂದ ಕೈಬಿಟ್ಟು, ಅವರ ಸಹೋದರ ಸತೀಶ್ ಜಾರಕಿಹೊಳಿಯನ್ನು ಸಚಿವರನ್ನಾಗಿ ಮಾಡಲಾಗಿದೆ. ಅವರ ವೈಯಕ್ತಿಕ ಕಾರಣಗಳಿಂದ ಸಚಿವ ಸಂಪುಟ ಸಭೆಗೆ ಬರುತ್ತಿರಲಿಲ್ಲ. ರಾಜ್ಯ ಪ್ರವಾಸ ಮಾಡಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರಗತಿ ಪರಿಶೀಲನೆಯನ್ನು ಮಾಡಿರಲಿಲ್ಲ ಎಂದು ಅವರು ಹೇಳಿದರು.
ನಾನು ಹಾಗೂ ರಮೇಶ್ ಜಾರಕಿಹೊಳಿ ಯುವ ಕಾಂಗ್ರೆಸ್‌ನಿಂದ ಸಹದ್ಯೋಗಿಗಳು. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಸಚಿವರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲವನ್ನೂ ನೀಡಿದೆ. ಪಕ್ಷದಿಂದ ಅವರಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಅವರ ಜೊತೆಯೂ ನಾನು ಚರ್ಚೆ ಮಾಡುತ್ತೇನೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಶನಿವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಚಿವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ಚರ್ಚೆ ನಡೆಸಿ, ಖಾತೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಪಕ್ಷ ವಿರೋಧಿ ಚಟುವಟಿಕೆ 9 ಮಂದಿ ಉಚ್ಛಾಟನೆ: ಇತ್ತೀಚೆಗೆ ನಡೆದಂತಹ ವಿಧಾನಸಭಾ/ವಿಧಾನಪರಿಷತ್ ಚುನಾವಣಾ ಸಂದರ್ಭದಲ್ಲಿ ಹಲವು ನಾಯಕರು, ಕಾರ್ಯಕರ್ತರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಬಗ್ಗೆ ಬಂದ ದೂರಿನ ವಿಚಾರಣೆ ನಡೆಸುವ ಸಲುವಾಗಿ ವಿ.ಆರ್.ಸುದರ್ಶನ್ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಈವರೆಗೆ 16 ಸಭೆಗಳನ್ನು ಮಾಡಿದೆ ಎಂದು ಅವರು ತಿಳಿಸಿದರು.
ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯು ನಮಗೆ ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ 9 ಮಂದಿಯನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟಣೆಗೊಳಿಸಲಾಗಿದೆ. ಈ ಸಮಿತಿಯು ಇನ್ನು ಮುಂದೆ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಲಿದ್ದು, ಯಾವ ಕಾರ್ಯಕರ್ತರು ಬೇಕಾದರೂ ಬಂದು ದೂರು ನೀಡಬಹುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಪಕ್ಷ ವಿರೋಧಿ ಚಟುವಟಿಕೆ ಸಾಬೀತಾಗಿ ಬೆಂಗಳೂರು ಗ್ರಾಮಾಂತರ ಜಿ.ಪಂ. ಸದಸ್ಯ ಎಂ.ಮಂಜುನಾಥ್, ಮೈಸೂರು ಗ್ರಾಮಾಂತರ ಜಿ.ಪಂ. ಸದಸ್ಯರಾದ ಎಂ.ಸುಧೀರ್, ಮಧುಸುಬ್ಬಣ್ಣ, ನಂಜನಗೂಡು ತಾ.ಪಂ.ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ಸದಸ್ಯರಾದ ಶಿವಣ್ಣ, ಗೀತಾ, ದೇವಮ್ಮ, ಮಾದಪ್ಪ ಹಾಗೂ ಮೂಡಿಗೆರೆ ವಿಧಾನಸಭಾಕ್ಷೇತ್ರದ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಸಿ.ನಾಗೇಶ್‌ರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ವಿ.ಆರ್.ಸುದರ್ಶನ್ ಮಾತನಾಡಿ, ನಮ್ಮ ಸಮಿತಿ ಎದುರು ಒಟ್ಟು 44 ದೂರುಗಳು ಬಂದಿದ್ದವು. 2018ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ 39 ದೂರುಗಳು, ವಿಧಾನಪರಿಷತ್ ಚುನಾವಣೆ ಸಂಬಂಧ 1 ದೂರು., ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಶಿಸ್ತು ಉಲ್ಲಂಘನೆ ಸಂಬಂಧ 4 ದೂರುಗಳು ಬಂದಿವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ, ವಿಧಾನಪರಿಷತ್ ಸದಸ್ಯ ರಿಝ್ವನ್ ಅರ್ಶದ್, ಶಿಸ್ತು ಪಾಲನಾ ಸಮಿತಿ ಸದಸ್ಯರಾದ ಗೋಪಾಲ ಭಂಡಾರಿ, ಡಿ.ಆರ್.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.