ಹಿಂದಿನ ಯಡಿಯೂರಪ್ಪ ನಮಗೆ ಬೇಕು: ಡಿ.ವಿ.ಸದಾನಂದಗೌಡ

Update: 2018-12-24 15:01 GMT

ಬೆಂಗಳೂರು, ಡಿ.24: ನಮ್ಮ ಬೆಂಗಳೂರಿನವರ ತಪ್ಪಿನಿಂದ ಸರಕಾರ ರಚನೆಯ ಅವಕಾಶವನ್ನು ನಾವು ಕಳೆದುಕೊಂಡೆವು. ಒಬ್ಬ ಕೇಂದ್ರ ಸಚಿವನಾಗಿ ನಾನು ಇದನ್ನು ಒಪ್ಪಿಕೊಳ್ಳುತ್ತೇನೆ. ಹಾಗಾಗಿ ಹಿಂದಿನ ಯಡಿಯೂರಪ್ಪನವರು ನಮಗೆ ಬೇಕು, ಅವರ ಮಾರ್ಗದರ್ಶನ ಇನ್ನಷ್ಟು ಹೆಚ್ಚಾಗಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. 

ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಳೆದ ಶನಿವಾರದಿಂದ ಪ್ರತಿ ಲೋಕಸಭಾ ಕ್ಷೇತ್ರಗಳ ಸಿದ್ಧತೆ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸರಣಿ ಸಭೆಗಳು ಆರಂಭವಾಗಿದ್ದು, ಸೋಮವಾರ ಕೂಡ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಸಿದ್ಧತೆಗಳ ಬಗ್ಗೆ ಸಭೆ ನಡೆಯಿತು.

ಮುಂದಿನ ಲೋಕಸಭಾ ಚುನಾವಣೆಗೆ ಈ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವಂತಾಗಲು ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ನಾಯಕರು ಚರ್ಚೆ ನಡೆಸಿದರು. ಅಲ್ಲದೆ, ಈ ಎಲ್ಲ ಕ್ಷೇತ್ರಗಳಲ್ಲಿ ಸಂಭವನೀಯ ಅಭ್ಯರ್ಥಿಗಳ ಆಯ್ಕೆ ಹಾಗೂ ಈ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡುವ ಬಗ್ಗೆಯೂ ಚರ್ಚೆಗಳು ನಡೆದವು. ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಮೊದಲು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಯಿತು. ನಂತರ ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ಸಿದ್ಧತೆ, ಪಕ್ಷವನ್ನು ಬಲಪಡಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಸರಣಿ ಸಭೆಗಳ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ನಾವು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕಿಸಿಲ್ಲ, ಪಕ್ಷಕ್ಕೆ ಆಹ್ವಾನವನ್ನೂ ನೀಡಿಲ್ಲ, ಯಾವಾಗ ಅವರು ತಮ್ಮ ಪಕ್ಷಕ್ಕೆ ರಾಜೀನಾಮೆ ಕೊಡುತ್ತಾರೋ ಆಗ ಮಾತ್ರ ನಾವು ಮಾತನಾಡಿಸುತ್ತೇವೆ ಎಂದರು.

ರಮೇಶ್ ಜಾರಕಿಹೊಳಿ ನೋವಿನ ಮಾತುಗಳು ಕಾಂಗ್ರೆಸ್ ಆಂತರಿಕ ಭಾವನೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಇದರಿಂದಲೇ ಗೊತ್ತಾಗುತ್ತಿದೆ. ಸಚಿವ ಸ್ಥಾನ ನೀಡುವ ಕುರಿತು ಹಲವು ಶಾಸಕರ ಮೂಗಿಗೆ ತುಪ್ಪಸವರಿ ಈಗ ಅವರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಾರೆ. ಈ ಸರಕಾರದ ಮೇಲೆ ಕಾಂಗ್ರೆಸ್ ಶಾಸಕರಿಗೇ ವಿಶ್ವಾಸವಿಲ್ಲ, ಎಲ್ಲವನೂ ಬಿಜೆಪಿ ಅವಲೋಕಿಸುತ್ತಿದೆ. ಕಾದು ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದರು.

ನಾವು ಆಪರೇಷನ್ ಕಮಲ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಅವರ ಪಕ್ಷದ ಆಂತರಿಕ ಸಮಸ್ಯೆಗೆ ಬಿಜೆಪಿ ಕಡೆ ಬೆರಳು ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಲೋಕಸಭಾ ಕ್ಷೇತ್ರಗಳ ಸಿದ್ಧತೆಯ ಸಭೆಯಲ್ಲಿ ಮಾಜಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ವಿ.ಸೋಮಣ್ಣ ಗೈರು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News