ದ.ಕ.: ಕ್ಷಯರೋಗ ಪತ್ತೆಗೆ 2ನೇ ಹಂತದ ಆಂದೋಲನ

Update: 2018-12-25 07:00 GMT

ಮಂಗಳೂರು, ಡಿ.24: ಭಾರತವನ್ನು ಕ್ಷಯ ರೋಗ ಮುಕ್ತ ಮಾಡುವ ಸಂಕಲ್ಪದೊಂದಿಗೆ ದ.ಕ. ಜಿಲ್ಲೆಯ ವಿವಿಧೆಡೆ 2ನೇ ಸುತ್ತಿನ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ (ಎಸಿಎಫ್)ವನ್ನು 2019ರ ಜ.2ರಿಂದ 12ರವರೆಗೆ ಹಮ್ಮಿಕೊಳ್ಳಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.

ಕ್ಷಯರೋಗ ಪತ್ತೆ ಮತ್ತು ಸೂಕ್ತ ಚಿಕಿತ್ಸೆ ಇಂದಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಾಗೃತಿ ಕೊರತೆ ಮತ್ತು ನಿರ್ಲಕ್ಷದಿಂದ ಲಕ್ಷಾಂತರ ಜನ ಪ್ರತಿವರ್ಷ ಕ್ಷಯ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕಾಗಿ ಸಕ್ರಿಯ ಕ್ಷಯ ರೋಗ ಪತ್ತೆ ಮತ್ತು ಜಾಗೃತಿಗೆ ಯೋಜನೆ ರೂಪಿಸಲಾಗಿದೆ. 2018ರ ಜು.2ರಿಂದ 13ರವರೆಗೆ ದ.ಕ. ಜಿಲ್ಲೆಯಲ್ಲಿ ಮೊದಲನೇ ಹಂತದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕೈಗೊಳ್ಳಲಾಗಿತ್ತು. 11 ದಿನಗಳ ಕಾಲ ನಡೆದ ಈ ಆಂದೋಲನದಲ್ಲಿ 2,85,150 ಮಂದಿ ಯನ್ನು ತಪಾಸಣೆಗೊಳಪಡಿಸಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ 44 ಕ್ಷಯ ರೋಗ ಪ್ರಕರಣ ಪತ್ತೆಯಾಗಿದ್ದವು ಎಂದು ಸರಕಾರಿ ಅಂಕಿಅಂಶಗಳು ತಿಳಿಸಿವೆ.

2ನೇ ಸುತ್ತಿನ ಆಂದೋಲನದಲ್ಲಿ ಕೊರಗ, ಮಲೆಕುಡಿಯ ಜನಾಂಗ ಸೇರಿದಂತೆ ಆದಿವಾಸಿ ಜನಾಂಗಗಳನ್ನು ಪ್ರಧಾನವಾಗಿಟ್ಟುಕೊಂಡು, ಕ್ಷಯರೋಗದಿಂದ ಬಳಲುತ್ತಿರುವ ರೋಗಿಗಳಿರುವ ಪ್ರದೇಶ, ಕಲ್ಲುಕೋರೆ ಕಾರ್ಮಿಕರು, ವಲಸೆಗಾರರು, ಆಶ್ರಮಗಳು, ಹಾಸ್ಟೆಲ್, ಕೊಳಚೆ ಪ್ರದೇಶ, ಬೀಡಿ ಕಾರ್ಮಿಕರು, ನೇಕಾರರ ಸಮುದಾಯ, ಎಚ್‌ಐವಿ ಸೋಂಕಿತರು ಮಧುಮೇಹದಿಂದ ಬಳಲುತ್ತಿರುವ ಹೈರಿಸ್ಕ್ ಪ್ರದೇಶಗಳನ್ನು ಆಯ್ದುಕೊಂಡು ರೋಗದ ಬಗ್ಗೆ ಜಾಗೃತಿ ಮೂಡಿಸಿ, ಪರೀಕ್ಷೆಗೆ ಒಳಪಡಿಸುವ ಉದ್ದೇಶವನ್ನು ಹೊಂದಲಾಗಿದೆ.

ತಪಾಸಣಾ ಪ್ರಕ್ರಿಯೆ: ಹೈರಿಸ್ಕ್ ಏರಿಯಾಗಳಲ್ಲಿನ ಜನರನ್ನು ತಪಾಸಣೆಗೊಳಪಡಿಸಲಾಗುವುದು. ಕ್ಷಯ ರೋಗದ ಲಕ್ಷಣ ದೃಢಪಟ್ಟಲ್ಲಿ ರೋಗಿಗಳ ಕಫದ ಮಾದರಿಯನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡ ಲಾಗುವುದು. ಕ್ಷಯ ದೃಢಪಡದೇ ಇದ್ದರೆ ಎಕ್ಸ್-ರೇ ವಿಭಾಗಕ್ಕೆ ಹಸ್ತಾಂತರಿಸಲಾಗುತ್ತದೆ. ಎಕ್ಸ್-ರೇಯಲ್ಲಿ ಅಸಹಜ ಪ್ರಕರಣ ಪತ್ತೆಯಾದಲ್ಲಿ ಸಿಬಿನ್ಯಾಟ್ ಪರೀಕ್ಷೆಗೆ ಕಳುಹಿಸಿಕೊಡಲಾಗುವುದು. ಸಿಬಿನ್ಯಾಟ್ ಪರೀಕ್ಷೆಯಲ್ಲಿ ರೋಗದ ಬಗ್ಗೆ ನಿಖರ ಮಾಹಿತಿ ತಿಳಿದುಬರಲಿದೆ.

32 ಕ್ಷಯ ಕಫ ಪರೀಕ್ಷಾ ಕೇಂದ್ರ: ಜಿಲ್ಲೆಯಲ್ಲಿ 32 ಕ್ಷಯ ಕಫ ಪರೀಕ್ಷಾ ಕೇಂದ್ರಗಳಿದ್ದು, 8 ಕಫ ಪರೀಕ್ಷಾ ಘಟಕ ಗಳಿವೆ. ವೆನ್ಲಾಕ್ ಮತ್ತು ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಎರಡು ಸಿಬಿನ್ಯಾಟ್ ಕ್ಷಯ ಯಂತ್ರಗಳನ್ನು ಅಳವಡಿಸಲಾಗಿದೆ.

‘ಒಬ್ಬ ಕ್ಷಯ ರೋಗಿಯಿಂದ ಕನಿಷ್ಠ 15ರಿಂದ 20 ಮಂದಿಗೆ ರೋಗ ಹರಡಬಲ್ಲದು. ಆಂದೋಲನದಲ್ಲಿ ಕಂಡುಬಂದ ಕ್ಷಯರೋಗಿಗಳಿಗೆ ಚಿಕಿತ್ಸೆಯನ್ನು ನಿರಂತರವಾಗಿ ಮುಂದುವರಿಸಲಾಗುತ್ತದೆ ಎಂದು ಹಿರಿಯ ಆರೋಗ್ಯ ಸಹಾಯಕ ಅಧಿಕಾರಿ ವೆಂಕಟೇಶ್ ಹುದ್ದಾರ್ ಮಾಹಿತಿ ನೀಡಿದರು.

ದ.ಕ. ಜಿಲ್ಲೆಯಲ್ಲಿ ನಡೆಯಲಿರುವ 2ನೇ ಹಂತದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದಲ್ಲಿ ಒಟ್ಟು 575 ತಂಡಗಳು ಕಾರ್ಯನಿರ್ವ ಹಿಸಲಿವೆ. ಇದರಲ್ಲಿ ಎನ್‌ಜಿಒಗಳು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಗಳ ಶುಶ್ರೂಷಕರು, ಕಿರಿಯ ಆರೋಗ್ಯ ಸಹಾಯಕರು ಸೇರಿ ಒಟ್ಟು 1,150 ಆರೋಗ್ಯ ಕಾರ್ಯಕರ್ತರು ಭಾಗವಹಿಸ ಲಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಸುಮಾರು 22 ಲಕ್ಷ ಜನಸಂಖ್ಯೆ ಇದ್ದಾರೆ. ಈ ಪೈಕಿ ಗುರುತಿಸಿದ ಪ್ರದೇಶಗಳಲ್ಲಿನ 2,80,107 ಜನರನ್ನು 2ನೇ ಹಂತದ ಕ್ಷಯರೋಗ ಪತ್ತೆ ಅಭಿಯಾನದಲ್ಲಿ ಆರೋಗ್ಯ ಕಾರ್ಯಕರ್ತರು ಭೇಟಿ ಮಾಡಿ, ಅವರ ಆರೋಗ್ಯ ಸಮಸ್ಯೆ ಕುರಿತು ಚರ್ಚಿಸಲಿದ್ದಾರೆ. ಈ ವೇಳೆ ಕ್ಷಯ ರೋಗ ಕಂಡುಬಂದಲ್ಲಿ ಸೂಕ್ತ ರೀತಿಯ ತಿಳುವಳಿಕೆ ಮತ್ತು ಚಿಕಿತ್ಸೆ ನೀಡಲಾಗುವುದು.

ಡಾ.ಎಂ.ಎಸ್.ಬದ್ರುದ್ದೀನ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ

► ಕ್ಷಯರೋಗ ಲಕ್ಷಣಗಳು

  • ಎರಡು ವಾರಕ್ಕಿಂತ ಹೆಚ್ಚು ಕೆಮ್ಮು
  • ಸಂಜೆ ಹೊತ್ತು ಹಗುರ ಜ್ವರ ಬರುವುದು
  • ಹೊಟ್ಟೆ ಹಸಿವು ಆಗದಿರುವುದು
  • ದೇಹದ ತೂಕ ಗಣನೀಯ ಇಳಿಕೆ
  • ಎದೆ, ಕುತ್ತಿಗೆ ಹಿಡಿತ, ಸಂಧುಗಳು ನೋವು
  • ಕಫದಲ್ಲಿ ರಕ್ತ ಬೀಳುವುದು

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News