ನನ್ನ ತಪ್ಪಲ್ಲ, ಹಗರಣಕ್ಕೆ ಬ್ಯಾಂಕ್ ಕಾರಣ ಎಂದ ಮೆಹುಲ್ ಚೋಕ್ಸಿ

Update: 2018-12-25 10:33 GMT

ಹೊಸದಿಲ್ಲಿ, ಡಿ.25: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಂಬಂಧಿಸಿದ 13,500 ಕೋಟಿ ರೂ. ಹಗರಣದಲ್ಲಿ ಬೇಕಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಈ ಹಗರಣಕ್ಕೆ ``ಸಾರ್ವಜನಿಕ ರಂಗದ ಬ್ಯಾಂಕಿನ ಕೆಟ್ಟ ನಿರ್ವಹಣೆಯೇ ಕಾರಣ'' ಎಂದು ಜಾರಿ ನಿರ್ದೇಶನಾಲಯಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

ಚೋಕ್ಸಿಯನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದೇ ಆದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಅವರ ಒಡೆತನದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಬಹುದಾಗಿದೆ. ಮುಂದಿನ ವಿಚಾರಣೆಯನ್ನು ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯನ್ವಯ ಸ್ಥಾಪಿಸಲಾದ ವಿಶೇಷ ನ್ಯಾಯಾಲಯ ಮುಂದಿನ ತಿಂಗಳು ನಡೆಸಲಿದೆ.

“ಬ್ಯಾಂಕನ್ನು ವಂಚಿಸುವ ಉದ್ದೇಶ ನನಗೆ ಯಾವತ್ತೂ ಇರಲಿಲ್ಲ. ಲೆಟರ್ಸ್ ಆಫ್ ಅಂಡರ್ ಟೇಕಿಂಗ್ ಗಳನ್ನು 2011ರಿಂದ ನೀಡಲಾಗಿತ್ತು ಹಾಗೂ ಅಂತಿಮ ದಿನಾಂಕದಂದು ಹಣ ಪಾವತಿಸಲಾಗಿತ್ತು. ಪಿಎನ್‍ ಬಿಯ ಆಂತರಿಕ ಕೆಟ್ಟ ನಿರ್ವಹಣೆಯೇ ಈ ಸಂಪೂರ್ಣ ಹಗರಣಕ್ಕೆ ಕಾರಣ'' ಎಂದು ತಮ್ಮ ವಕೀಲ ರಾಹುಲ್ ಅಗರ್ವಾಲ್ ಮೂಲಕ ಚೋಕ್ಸಿ ಸಲ್ಲಿಸಿದ 36 ಪುಟಗಳ ಉತ್ತರ ತಿಳಿಸಿದೆ.

“ನನಗೆ ವಿವರಣೆ ನೀಡಲು ಅವಕಾಶ ಕೊಡದೆ ನನ್ನ ವಿರುದ್ಧ ಬ್ಯಾಂಕ್ ಪ್ರಕರಣ ದಾಖಲಿಸಿದೆ. ಮೂರು ಕಂಪೆನಿಗಳಾದ ಗೀತಾಂಜಲಿ ಜೆಮ್ಸ್, ಗಿಲಿ ಇಂಡಿಯಾ ಲಿ. ಹಾಗೂ ನಕ್ಷತ್ರ ಬ್ರಾಂಡ್ ಇವುಗಳ ಖಾತೆಗಳನ್ನು ಎನ್‍ಪಿಎ ಎಂದು ಘೋಷಿಸಲಾಗಿರಲಿಲ್ಲ. ಈ ಪ್ರಕರಣದಲ್ಲಿ ಆರೋಪಿಯೆಂದು ಗುರುತಿಸಲಾಗಿರುವವರು ಸಾವಿರಾರು ಕೊಟಿ ಮೌಲ್ಯದ ಆಸ್ತಿಗಳನ್ನು ಭಾರತದಲ್ಲಿಯೇ ಬಿಟ್ಟಿರುವುದರಿಂದ ದೇಶ ಬಿಟ್ಟು ಪಲಾಯನಗೈಯ್ಯುವ ಯಾವುದೇ ಉದ್ದೇಶ ಇರಲಿಲ್ಲ ಎಂಬುದು ಸ್ಪಷ್ಟ” ಎಂದು ಚೊಕ್ಸಿಯ ಉತ್ತರ ತಿಳಿಸಿದೆ.

“ಬಾಕಿ ಪಾವತಿಸುವ ಕುರಿತಂತೆ ಬ್ಯಾಂಕಿನ ಜತೆ ಹಲವು ಬಾರಿ ಸಂಪರ್ಕ ಸಾಧಿಸಿದ್ದರೂ ಇವುಗಳನ್ನು ತನಿಖಾಧಿಕಾರಿಗಳು ಗಣನೆಗೆ ತೆಗೆದುಕೊಂಡಿಲ್ಲ, ಸಿಬಿಐ ತನಿಖೆಯ ಆಧಾರದಲ್ಲಿ ಇಡಿ ಕಾರ್ಯಾಚರಣೆ ಆಧಾರರಹಿತ, ಎಫ್‍ಐಆರ್ ಗಳಲ್ಲಿ ನಮೂದಿತವಾಗಿರುವ ಮೂರು ಕಂಪೆನಿಗಳಲ್ಲಿ ನನ್ನ ಪಾತ್ರವೇನೂ ಇಲ್ಲ'' ಎಂದೂ ಚೋಕ್ಸಿಯ ಉತ್ತರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News