ಶಿಕ್ಷಣದ ಮಹತ್ವವನ್ನು ಸಾರಿದ ಅಂಬೇಡ್ಕರ್

Update: 2018-12-25 18:33 GMT

ಅಂಬೇಡ್ಕರ್‌ರವರ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೆ ಆದರ್ಶವಾಗಬೇಕು, ಅವರು ಜ್ಞಾನಾರ್ಜನೆಗೆ ತೋರಿದ ಆಸಕ್ತಿ, ಸಂಪನ್ಮೂಲಗಳನ್ನು ಬಳಸಿಕೊಂಡ ಬಗೆ, ಸಮಾಜದ ಬೆಳವಣಿಗೆಗೆ ಶಿಕ್ಷಣವನ್ನು ಉಪಯೋಗಿಸಿ ಕೊಂಡ ರೀತಿ, ದೇಶಕ್ಕೆ ತೋರಿದ ಗೌರವ ಮತ್ತು ದೇಶಪ್ರೇಮ ಹಾಗೂ ಇಡೀ ಭಾರತವನ್ನು ಸಮಗ್ರವಾಗಿ ನೋಡಿದ ಪರಿ ಎಲ್ಲವೂ ಅನುಕರಣೀಯ ಮತ್ತು ಆದರ್ಶ. ಅಂತಹ ಮಹಾನ್ ಸ್ಫೂರ್ತಿಯ, ಮಾನವತಾವಾದಿಯ ಜನ್ಮದಿನಾಚರಣೆ ಪ್ರತಿ ವಿದ್ಯಾರ್ಥಿ ಬದುಕಿನ ಆದ್ಯ ಭಾಗವಾಗಬೇಕು.


ಈ ದೇಶದಲ್ಲಿ ಎಲ್ಲವೂ ಚುನಾವಣೆ ಆಧಾರಿತವಾಗಿ, ಚುನಾವಣೆ ಗೆಲ್ಲುವುದೇ ಎಲ್ಲಾ ಚಟುವಟಿಕೆಗಳ ಅಡಿಪಾಯವಾಗಿರುವ ಸಂಧರ್ಭದಲ್ಲಿ, ವಿದ್ಯಾವಂತರು ವೈಚಾರಿಕ ನಿಲುವಿನಿಂದ ಯೋಚಿಸದೇ ಜಾತಿ, ಧರ್ಮ, ಮತ, ಪಕ್ಷ, ಪ್ರಾಂತ, ಲಿಂಗ ಎಂಬ ಸ್ವಯಂ ಸ್ಥರಗಳ ಮಧ್ಯ ಸಿಲುಕಿಕೊಂಡು, ಪ್ರಜಾಪ್ರಭುತ್ವವನ್ನು ಚುನಾವಣೆಗಳಲ್ಲಿ ಮಾತ್ರ ಕಾಣ ಬಯಸುತ್ತಿರುವ ನಾಗರಿಕ ಸಮಾಜದ ಪರಿಸ್ಥಿತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರನ್ನು ನೆನಪಿಸಿಕೊಳ್ಳುವುದು ಮತ್ತು ಅವರು ರಚಿಸಿದ ಸಂವಿಧಾನದ ಅರಿವಿನೊಂದಿಗೆ ದೇಶದ ಸಮಸ್ಯೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳುವ ಪ್ರಯತ್ನ ಸದ್ಯದ ಅತೀ ದೊಡ್ಡ ಸವಾಲು. ಆ ಸವಾಲು ಏದುರಿಸಬೇಕಾದರೆ ಈ ದೇಶದ ಭಾವಿ ಪ್ರಜೆಗಳಾದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಅಂಬೇಡ್ಕರ್‌ರವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಂವಿಧಾನದಡಿಯಲ್ಲಿ ಜೀವನ ಸಾಗಿಸುವ ಮತ್ತು ದೇಶವನ್ನು ಮುನ್ನಡೆಸುವ ತಿಳುವಳಿಕೆ ಶಕ್ತಿ ಸಾಮರ್ಥ್ಯಗಳನ್ನು ಹೊಂದಬೇಕಾಗಿರುವುದು ಅತ್ಯವಶ್ಯ.

ಡಾ.ಬಿ.ಆರ್.ಅಂಬೇಡ್ಕರ್‌ರವರು ದಾರ್ಶನಿಕ ಭಾರತೀಯ ಸುಧಾರಕ, ಗುಲಾಮಗಿರಿಯನ್ನು ತೊಡೆದು ಹಾಕಲು ಶಿಕ್ಷಣವೇ ಒಂದು ಅಸ್ತ್ರವೆಂದು ನಂಬಿದ್ದರು. ಇದು ಶೋಷಿತರಲ್ಲಿ ಜಾಗೃತಿಯನ್ನು ಮೂಡಿಸಿ ಅವರ ಸಾಮಾಜಿಕ ಸ್ಥಿತಿ, ಆರ್ಥಿಕ ಸುಧಾರಣೆ ಮತ್ತು ಅವರು ರಾಜಕೀಯ ಸ್ವಾತಂತ್ರ್ಯ ಪಡೆಯಬೇಕೆಂಬುದು ಅವರ ಅಭಿಲಾಷೆಯಾಗಿತ್ತು. ಅಂಬೇಡ್ಕರ್‌ರವರ ಪ್ರಕಾರ ಸಮಾಜಕ್ಕೆ ಅನನ್ಯ ಕೊಡುಗೆ ನೀಡುವಂತೆ ಮಾಡುವ, ಪ್ರತಿ ವ್ಯಕ್ತಿಯಲ್ಲಿ ಅನನ್ಯ ಸಾಮರ್ಥ್ಯವನ್ನು ಸಾಧಿಸಲು ನೆರವಾಗುವುದೇ ಶಿಕ್ಷಣದ ಗುರಿಯಾಗಬೇಕು, ಶಿಕ್ಷಣವು ಮಕ್ಕಳ ಗುರಿಯನ್ನು ರೂಪಿಸುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವಂತೆ ‘‘ಶಿಕ್ಷಣದಿಂದ ಯಾರನ್ನೂ ಸಹ ವಂಚಿತರನ್ನಾಗಿ ಮಾಡಬಾರದು, ಇದು ಈ ದೇಶದ ಎಲ್ಲಾ ಜನರನ್ನು ತಲುಪಬೇಕು ಮತ್ತು ಶೋಷಿತ ವರ್ಗದವರು ಅದನ್ನು ಕನಿಷ್ಠ ವೆಚ್ಚದಲ್ಲಿ ಪಡೆಯುವಂತಿರಬೇಕು.’’ ಆದ್ದರಿಂದ ಅವರು ಸಂವಿಧಾನದಲ್ಲಿ ಶಿಕ್ಷಣವನ್ನು ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿ ನೀಡಿದರು.

ಶಿಕ್ಷಣ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮೇಲೆತ್ತಲು ಇರುವ ಸಾಧನವಾಗಿದೆ. ಶಿಕ್ಷಣದಿಂದ ಒಬ್ಬ ವ್ಯಕ್ತಿ ಜೀವನದಲ್ಲಿ ಉತ್ತಮ ಬೆಳಕು ಕಾಣಬಹುದು. ಶಿಕ್ಷಣ ದೂರ ದೃಷ್ಟಿಕೋನ ಮತ್ತು ಬುದ್ಧಿವಂತಿಕೆಯನ್ನು ಬೆಳೆಸುತ್ತದೆ. ಶಿಕ್ಷಣ ಕೇವಲ ಜ್ಞಾನಕ್ಕಾಗಿ ಅಲ್ಲ, ಮಾನವನಲ್ಲಿ ಜ್ಞಾನ ವೃದ್ಧಿಯ ಜೊತೆಗೆ ನೀತಿ, ಸನ್ನಡತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ಶಿಕ್ಷಣ. ಪ್ರತಿಯೊಬ್ಬ ವ್ಯಕ್ತಿ ಪ್ರಜ್ಞಾವಂತನಾಗಿರಬೇಕು, ಪಡೆದ ಶಿಕ್ಷಣ ಒಬ್ಬ ವ್ಯಕ್ತಿಯನ್ನು ಮುಕ್ತ ಮನಸ್ಸಿನಿಂದ ತಾರ್ಕಿಕವಾಗಿ ಹಾಗೂ ಮುಕ್ತವಾಗಿ ಆಲೋಚಿಸುವಂತೆ ಮಾಡುವುದೇ ಆಗಿದೆ. ಶಿಕ್ಷಣ ಪಡೆದು ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಬೆಳವಣಿಗೆ ಸಾಧ್ಯವಾಗುವುದು, ಇದರಿಂದ ಸದೃಢ ಸಮಾಜ, ರಾಷ್ಟ್ರವನ್ನು ಕಟ್ಟುವುದು ಸಾಧ್ಯವಾಗುವುದು ಅಂಬೇಡ್ಕರ್ ಅವರ ನಿಲುವಾಗಿತ್ತು. ಅಂಬೇಡ್ಕರ್ ಅವರ ಬದುಕು ಮತ್ತು ಬರಹವು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ತಳಹದಿಯಲ್ಲಿದೆ. ಅವರ ಚಿಂತನೆಯ ಮೊದಲ ಮೆಟ್ಟಿಲು ಶಿಕ್ಷಣ, ಈ ಶಿಕ್ಷಣ ಪದ್ಧತಿಯ ಬಗ್ಗೆ ಅವರು ಹೇಳುವುದು ಹೀಗೆ: ‘‘ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಿ ಆರ್ಥಿಕ ಸುಧಾರಣೆ ಹೊಂದಿ, ರಾಜಕೀಯ ಸ್ವ್ವಾತಂತ್ರ್ಯವನ್ನು ಪಡೆದು ಮತ್ತು ಪ್ರತಿ ವ್ಯಕ್ತಿಯೂ ಸಮಾಜಕ್ಕೆ ಅನನ್ಯ ಕೊಡುಗೆಯನ್ನು ನೀಡುವಂತೆ ಮಾಡುವುದೇ ಶಿಕ್ಷಣ. ಶಿಕ್ಷಣದಲ್ಲಿ ಜ್ಞಾನವು ಅನುಕಂಪ ಮತ್ತು ಸ್ನೇಹಪರತೆಗಳೊಡನೆ ಮಿಶ್ರಣವಾಗಬೇಕು, ಕಲಿಕಾರ್ಥಿಗಳಲ್ಲಿ ಅಥವಾ ವಿದ್ಯಾವಂತರಲ್ಲಿ ನಿಸ್ವಾರ್ಥ, ನಿಷ್ಪಕ್ಷಪಾತ ಮತ್ತು ಹೃದಯವಂತಿಕೆಗಳು ತುಂಬಿರಬೇಕು. ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಅತ್ಯಂತ ಅಪಾಯಕಾರಿ ಆದ್ದರಿಂದ ಉತ್ತಮ ನಡತೆಯ ಬೆಳವಣಿಗೆಯು ಶಿಕ್ಷಣದ ಗುರಿಯಾಗಬೇಕು ಮತ್ತು ಸಮಾಜದ ಸುಧಾರಣೆಗಾಗಿ ಕೆಲಸ ನಿರ್ವಹಿಸುವುದು ವಿದ್ಯಾವಂತರ ಪ್ರಮುಖ ಗುರಿಯಾಗಿರಬೇಕು. ಜೀವನ ನಿರ್ವಹಣೆಗಾಗಿ ಗಳಿಕೆ ಮಾಡುವುದಷ್ಟೇ ಜೀವನವಲ್ಲ, ಸಮಾಜದ ಜನರ ಮತ್ತು ಸಮಾಜದ ಸುಧಾರಣೆಗಾಗಿ ಕೊಡುಗೆ ನೀಡುವುದಕ್ಕಾಗಿ ಸ್ವಲ್ಪಸಮಯವನ್ನು ಮೀಸಲಾಗಿರಿಸಿ’’ ಎಂಬುದು ಅಂಬೇಡ್ಕರ್ ಅವರ ಕರೆಯಾಗಿತ್ತು.

 ಅಂಬೇಡ್ಕರ್‌ರವರು ಪ್ರಜಾಪ್ರಭುತ್ವಕ್ಕಾಗಿ ಶಿಕ್ಷಣ ಎಂಬುದನ್ನು ಪ್ರತಿಪಾದಿಸಿದ್ದಾರೆ ಹಾಗೂ ಇದು ಶಿಕ್ಷಣದ ಪ್ರಮುಖ ಗುರಿಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಏಕೆಂದರೆ ಇದು ವ್ಯಕ್ತಿಗೆ ಪ್ರಜಾಪ್ರಭುತ್ವ ಸಮಾಜದ ಪರಿಣಾಮಕಾರಿ ಸದಸ್ಯನಾಗಲು ಸಹಾಯ ಮಾಡುತ್ತದೆ. ಶಿಕ್ಷಣ ಮಾನವನಲ್ಲಿರುವ ಆಗಾಧ ಶಕ್ತಿ ಸಾಮರ್ಥ್ಯ ಮತ್ತು ಪ್ರಯತ್ನಗಳ ಬಗ್ಗೆ ಅಪಾರ ನಂಬಿಕೆಯನ್ನು ಬೆಳೆಸಬೇಕು. ವ್ಯಕ್ತಿಯು ತನ್ನ ಸುತ್ತಮುತ್ತಲಿನ ಪರಿಸರವನ್ನು ಅನುಕೂಲತೆಯಡೆಗೆ ಪರಿವರ್ತನೆ ಮಾಡಿ, ಸಮಾಜದ ಏಳಿಗೆಗಾಗಿ ಶ್ರಮಿಸುವಂತಿರಬೇಕು. ಶಿಕ್ಷಣ ಒಬ್ಬ ವ್ಯಕ್ತಿಯನ್ನು ಮುಕ್ತ ಮನಸ್ಸಿನಿಂದ ತಾರ್ಕಿಕವಾಗಿ ಹಾಗೂ ಮುಕ್ತವಾಗಿ ಆಲೋಚಿಸುವಂತೆ ಮಾಡುವುದೇ ಆಗಿದೆ. ಶಿಕ್ಷಣ ಪಡೆದ ವ್ಯಕ್ತಿಯಿಂದ ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಬೆಳವಣಿಯಾಗಿ ಸದೃಡ ಸಮಾಜ ಮತ್ತು ರಾಷ್ಟ್ರ ನಿರ್ಮಾಣವಾಗುವುದು. ಶಿಕ್ಷಣ ಪಡೆಯದೆ ಹೋರಾಡುವುದು ಸರಿಯಾದ ಕ್ರಮವಲ್ಲ. ಶಿಕ್ಷಣ ಪಡೆದು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಿದೆ. ಹೋರಾಟದಿಂದ ಸಂಘಟನೆಯ ಶಕ್ತಿ ಬೆಳೆಯುವುದು. ಶಿಕ್ಷಣ, ಹೋರಾಟ ಮತ್ತು ಸಂಘಟನೆ ಒಂದಕ್ಕೊಂದು ಪರಸ್ಪರ ತನ್ನ ಶಕ್ತಿಯನ್ನು ವೃದ್ಧಿಸುವ ಮುಖ್ಯ ತತ್ವಗಳಾಗಿವೆ. ಸಮಾಜದ ಪ್ರತಿ ಪ್ರಜೆ ಶಿಕ್ಷಣ ಪಡೆದು ತನ್ನ ಸ್ವಯಂ ಅಭಿವೃದ್ಧಿಯ ಜೊತೆಗೆ ಸಮಾಜದ ಒಳಿತಿಗಾಗಿ ಹೋರಾಟ, ಹೋರಾಟಕ್ಕಾಗಿ ಸಂಘಟನೆ ಮಾಡುವುದು ಅಗತ್ಯವಾಗಿದೆ. ಶಿಕ್ಷಣ, ಹೋರಾಟ ಮತ್ತು ಸಂಘಟನೆಗಳ ಮೂಲಕ ಸಮಾನತೆಯ, ಸದೃಡ, ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಾಧ್ಯ.

ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳು ಅನುಷ್ಠಾನ ಗೊಳ್ಳದಿರಲು ಕಾರಣಗಳೇನೆಂದರೆ: * ಅಂಬೇಡ್ಕರ್ ಅವರ ಶೈಕ್ಷಣಿಕ ಚಿಂತನೆಗಳನ್ನು ಗ್ರಹಿಸುವಲ್ಲಿ ವಿಫಲರಾಗಿದ್ದೇವೆ.
* ಪೂರ್ವಾಗ್ರಹ ಪೀಡಿತ ಮನಸ್ಸುಗಳು ಅವರನ್ನು ಶಿಕ್ಷಣ ತಜ್ಞರಾಗಿ ಪರಿಗಣಿಸದಿರುವುದು ದುರಂತವಾಗಿದೆ.
* ಅವರ ವಿಚಾರಧಾರೆ ಸೀಮಾತೀತವಾದುದು ಎಂಬುದನ್ನು ಅರ್ಥೈಸಿಕೊಳ್ಳುವಲ್ಲಿ ಸೋತಿದ್ದೇವೆ.
* ವೈಚಾರಿಕತೆಯನ್ನು ಬೆಳೆಸುವಲ್ಲಿ ವಿಫಲರಾಗಿದ್ದೇವೆ.
* ಸಂಶೋಧನಾ ಮನೋಧರ್ಮವನ್ನು ಬೆಳೆಸುವಲ್ಲಿ ಸೋತಿದ್ದೇವೆ.
* ಸಮಾನತೆಯ ಶಿಕ್ಷಣ ಪದ್ಧತಿ ಜಾರಿಯಾಗದಿರುವುದು. (ಏಕರೂಪ ಶಿಕ್ಷಣವನ್ನು ನೀಡದೆ ಇರುವುದು ಈ ಹೊತ್ತಿನ ಹಲವು ಸಮಸ್ಯೆಗಳಿಗೆ ಮೂಲವಾಗಿದೆ.)
ಇಂತಹ ಮಹಾನ್ ಶಿಕ್ಷಣ ತಜ್ಞ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‌ರವರ ಜನ್ಮದಿನವನ್ನು ಪ್ರತಿ ವರ್ಷ ಎಪ್ರಿಲ್ 14ರಂದು ದೇಶಾದ್ಯಾಂತ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ಇತ್ತೀಚೆಗೆ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯ ಕೂಡ ಡಾ. ಬಿ. ಆರ್.ಅಂಬೇಡ್ಕರ್‌ರವರಿಗೆ ವಿಶ್ವಜ್ಞಾನಿ ಎಂಬ ಬಿರುದು ನೀಡಿರುವುದು ಭಾರತೀಯರೆಲ್ಲರಿಗೂ ಅಭಿಮಾನದ ಸಂಗತಿ. ಅಂತಹ ಮಹಾನ್ ಸಾಧಕನ ವಿದ್ಯಾರ್ಥಿಜೀವನ, ಹೋರಾಟ ಮತ್ತು ಎಲ್ಲಾ ಭಾರತೀಯರಿಗೆ ನೀಡಿದ ಕೊಡುಗೆ ಶಾಲಾ-ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿಗೆ ತಿಳಿಯಪಡಿಸಬೇಕಿರುವುದು ಎಲ್ಲಾ ಶಿಕ್ಷಕರ ಆದ್ಯ ಕರ್ತವ್ಯ ಮತ್ತು ಆವಶ್ಯಕತೆ. ಆದರೆ, ಪ್ರತೀ ವರ್ಷ ಎಪ್ರಿಲ್ 10 ರಂದು ಶಾಲಾ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟಿಸುವ ದಿನ ಹಾಗೂ ಶೈಕ್ಷಣಿಕ ವರ್ಷದ ಕೊನೆಯ ದಿನವೂ ಸಹ. ಹಾಗಾಗಿ ಶಾಲೆಗಳಲ್ಲಿ ಆಚರಿಸುವ ಡಾ. ಬಿ. ಆರ್. ಅಂಬೇಡ್ಕರ್ ಜನ್ಮ ದಿನಾಚರಣೆಗೆ ವಿದ್ಯಾರ್ಥಿಗಳು ಅಲಭ್ಯವಾಗುವುದು ಕಳೆದ ಐದಾರು ದಶಕಗಳಿಂದ ನಡೆದು ಬರುತ್ತಿದೆ.

ಎಪ್ರಿಲ್ 10ರ ಬದಲು 14ರಂದು ಶಾಲಾ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟಿಸುವ ದಿನವಾದರೆ, ಶಾಲೆಗೆ ಹೋಗುವ ಪ್ರತೀ ಮಗು ಹಾಗೂ ಮಗುವಿನ ಪಾಲಕರೂ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಅವರ ಆದರ್ಶಗಳನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ಇದೇ ವಿಚಾರವಾಗಿ ಸಾಕಷ್ಟು ಬಾರಿ ಬೇರೆ ಬೇರೆ ಸಂದರ್ಭಗಳಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರು ಹಾಗೂ ರಾಜಕೀಯ ನಾಯಕರೂ ಸಹ ತಮ್ಮ ಸಹಮತವನ್ನು ವ್ಯಕ್ತಪಡಿಸಿರುವುದು ಆಚರಣೆಯ ಮಹತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

ಅಂಬೇಡ್ಕರ್‌ರವರ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೆ ಆದರ್ಶವಾಗ ಬೇಕು, ಅವರು ಜ್ಞಾನಾರ್ಜನೆಗೆ ತೋರಿದ ಆಸಕ್ತಿ, ಸಂಪನ್ಮೂಲಗಳನ್ನು ಬಳಸಿಕೊಂಡ ಬಗೆ, ಸಮಾಜದ ಬೆಳವಣಿಗೆಗೆ ಶಿಕ್ಷಣವನ್ನು ಉಪಯೋಗಿಸಿ ಕೊಂಡ ರೀತಿ, ದೇಶಕ್ಕೆ ತೋರಿದ ಗೌರವ ಮತ್ತು ದೇಶಪ್ರೇಮ ಹಾಗೂ ಇಡೀ ಭಾರತವನ್ನು ಸಮಗ್ರವಾಗಿ ನೋಡಿದ ಪರಿ ಎಲ್ಲವೂ ಅನುಕರಣೀಯ ಮತ್ತು ಆದರ್ಶ. ಅಂತಹ ಮಹಾನ್ ಸ್ಫೂರ್ತಿಯ, ಮಾನವತಾವಾದಿಯ ಜನ್ಮದಿನಾಚರಣೆ ಪ್ರತಿ ವಿದ್ಯಾರ್ಥಿ ಬದುಕಿನ ಆದ್ಯ ಭಾಗವಾಗಬೇಕು.

ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ಹಾಗೂ ಸಮಾಜಕಲ್ಯಾಣ ಸಚಿವರಿಗೆ ಪತ್ರದ ಮುಖಾಂತರ ಮನವಿ ಮಾಡಿಕೊಂಡಿದ್ದು ಎಲ್ಲರೂ ಸರಕಾರದ ಗಮನಕ್ಕೆ ತರಲು ಪ್ರಯತ್ನಿಸಿ, ಮುಂದಿನ ವರ್ಷದ 2019 ಎಪ್ರಿಲ್ 14ರ ಜನ್ಮದಿನಾಚರಣೆಯನ್ನು ವಿದ್ಯಾರ್ಥಿಗಳು ಆಯಾ ಶಾಲೆಗಳಲ್ಲಿ ಆಚರಿಸುವಂತಾಗಲಿ ಎಂದು ಎಲ್ಲರೂ ಆಶಿಸೋಣ.

Writer - ಡಾ. ಜಗನ್ನಾಥ ಕೆ. ಡಾಂಗೆ

contributor

Editor - ಡಾ. ಜಗನ್ನಾಥ ಕೆ. ಡಾಂಗೆ

contributor

Similar News