ಫೇಸ್ಬುಕ್ ಪ್ರೀತಿಯನ್ನು ವಿರೋಧಿಸಿದ ತಾಯಿಯನ್ನು ಕೊಚ್ಚಿ ಕೊಂದ 19ರ ಯುವತಿ

Update: 2018-12-26 09:30 GMT

ತಿರುವಲ್ಲೂರ್, ಡಿ.26: ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನೊಂದಿಗಿನ ಪ್ರೇಮ ವ್ಯವಹಾರವನ್ನು ವಿರೋಧಿಸಿದ ತಾಯಿಯನ್ನು ಪ್ರಿಯಕರನ ಸಹಾಯದಿಂದ ಕೊಂದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಪ್ರಿಯಕರ ಹಾಗೂ ಕೊಲೆಗೆ ಸಹಾಯ ಮಾಡಿದ್ದಾರೆನ್ನಲಾದ ಇಬ್ಬರು ಅಪ್ರಾಪ್ತರನ್ನು ಕೂಡ ಪೊಲೀಸರು ಸೆರೆ ಹಿಡಿದಿದ್ದಾರೆ.

ಆರೋಪಿ ವಿದ್ಯಾರ್ಥಿನಿ ಎಸ್. ದೇವಿಪ್ರಿಯಾ ತಿರುವಲ್ಲೂರಿನ ಆಂಜನೇಯಪುರಂ ನಿವಾಸಿಯಾಗಿದ್ದು, ಅವದಿ ಎಂಬಲ್ಲಿನ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯಾಗಿದ್ದಾಳೆ. ಬಂಧಿತ ಆಕೆಯ ಪ್ರಿಯಕರ ಸುರೇಶ್ ನಿಗೆ ಕೂಡ 19 ವರ್ಷ ವಯಸ್ಸಾಗಿದ್ದು, ಇತರ ಇಬ್ಬರು ಆರೋಪಿಗಳ ವಯಸ್ಸು 16 ಹಾಗೂ 17 ಎಂದು ಹೇಳಲಾಗಿದೆ.

ಮೃತ ಮಹಿಳೆಯನ್ನು ಭಾನುಮತಿ (50) ಎಂದು ಗುರುತಿಸಲಾಗಿದೆ. ಕುಂಭಕೋಣಂ ನಿವಾಸಿ ಸುರೇಶ್ ಪರಿಚಯ ದೇವಿಪ್ರಿಯಾಳಿಗೆ ಕಳೆದ ವರ್ಷ ಫೇಸ್ ಬುಕ್ ಮುಖಾಂತರ ಆಗಿತ್ತು. ಇಬ್ಬರೂ ಪರಸ್ಪರ ಭೇಟಿಯಾಗಿರದೇ ಇದ್ದರೂ ಪ್ರೇಮಿಸುತ್ತಿದ್ದರು. ತಾನು ಮೈಸೂರಿನಲ್ಲಿ ಐಟಿ ಉದ್ಯೋಗಿ ಎಂದೂ ಸುರೇಶ್ ಹೇಳಿಕೊಂಡಿದ್ದ. ಆತನ ಜತೆಗಿನ ಗೆಳೆತನದ ಬಗ್ಗೆ ದೇವಿಪ್ರಿಯಾ ತಾಯಿಯಲ್ಲಿ ಹೇಳಿಕೊಂಡಾಗ ಆಕೆ ಅದನ್ನು ವಿರೋಧಿಸಿ ಕಲಿಕೆಯತ್ತ ಗಮನ ನೀಡುವಂತೆ ಮಗಳಿಗೆ ಬುದ್ಧಿವಾದ ಹೇಳಿದ್ದಳಲ್ಲದೆ ಮಗಳ ಮೊಬೈಲ್ ಫೋನ್ ಬಳಕೆಯ ಮೇಲೂ ನಿಯಂತ್ರಣ ಹೇರಿದ್ದಳು.

ಇದರಿಂದ ಸಿಟ್ಟಿಗೆದ್ದ ದೇವಿಪ್ರಿಯಾ ತಾಯಿಯನ್ನು ಕೊಲ್ಲಲು ಗೆಳೆಯನ ಸಹಾಯ ಕೋರಿದ್ದು, ಆತ ಶಾಲೆಯನ್ನು ಅರ್ಧದಲ್ಲಿಯೇ ಬಿಟ್ಟ ತನ್ನ ಪರಿಚಯದ ಇಬ್ಬರು  ಅಪ್ರಾಪ್ತರನ್ನು ಕಳುಹಿಸಿಕೊಟ್ಟಿದ್ದ. ಅವರನ್ನು ತನ್ನ ಗೆಳೆಯರೆಂದು ದೇವಿಪ್ರಿಯಾ ತಾಯಿಗೆ ಪರಿಚಯಿಸಿದ್ದಳು. ಸೋಮವಾರ ಭಾನುಮತಿಯನ್ನು ಮೂವರೂ ಕುಡುಗೋಲಿನಿಂದ ಹೊಡೆದು ಸಾಯಿಸಿದ್ದರು. ಕೊಲೆ ನಡೆಸಿದ ಕೂಡಲೇ ಅಲ್ಲಿಂದ ಪರಾರಿಯಾದ ಅಪ್ರಾಪ್ತರಿಬ್ಬರನ್ನೂ ಸ್ಥಳೀಯರು ಸೆರೆ ಹಿಡಿದಿದ್ದು, ನಂತರ ಅವರು ನೀಡಿದ ಮಾಹಿತಿಯನ್ವಯ ಸುರೇಶ್ ನನ್ನೂ ಬಂಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News