ವಿಜ್ಞಾನಿ ಯು.ಆರ್.ರಾವ್ ಮನೆಯಲ್ಲಿ ಕಳವು
Update: 2018-12-26 20:42 IST
ಬೆಂಗಳೂರು, ಡಿ.26: ಇಸ್ರೋ ಮಾಜಿ ಅಧ್ಯಕ್ಷ ದಿವಂಗತ ಯು.ಆರ್.ರಾವ್ ಅವರ ಮನೆಗೆ ದುಷ್ಕರ್ಮಿಗಳು ನುಗ್ಗಿ ಕಳವು ಯತ್ನ ನಡೆಸಿ ಪರಾರಿಯಾಗಿರುವ ಘಟನೆ ಇಲ್ಲಿನ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಜ್ಞಾನಿ ಯು.ಆರ್.ರಾವ್ ಅವರ ನಿಧನ ಬಳಿಕ ಅವರ ಪುತ್ರ ಬೇರೆ ಕಡೆ ವಾಸಿಸುತ್ತಿದ್ದು ಒಂದು ವರ್ಷದಿಂದ ಮನೆ ಖಾಲಿ ಇತ್ತು. ಮನೆ ಆವರಣದ ಶೆಡ್‌ನಲ್ಲಿ ಕಾರು ಚಾಲಕ ವಾಸಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಬುಧವಾರ ಬೆಳಗ್ಗೆ ಮನೆಯ ಬಾಗಿಲು ಮುರಿದಿರುವುದನ್ನು ಗಮನಿಸಿದ ಚಾಲಕ ರಾವ್ ಅವರ ಪುತ್ರನಿಗೆ ವಿಷಯ ತಿಳಿಸಿದಾಗ ಅವರು ಒಳ ಹೋಗಿ ನೋಡಿದಾಗ ಸಣ್ಣ ಪುಟ್ಟ ವಸ್ತುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಧಾವಿಸಿದ ಜೀವನ್ ಭೀಮಾನಗರ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.