ಜ.15 ರಿಂದ ಕುಂಭಮೇಳ: ಉ.ಪ್ರದೇಶ ಸಚಿವ ಸಿದ್ಧಾರ್ಥನಾಥ ಸಿಂಗ್

Update: 2018-12-26 16:08 GMT

ಬೆಂಗಳೂರು, ಡಿ.26: ಉತ್ತರ ಪ್ರದೇಶದ ಪ್ರಯಾಗದಲ್ಲಿ ಜ.15 ರಿಂದ ಮಹಾಕುಂಭ ಮೇಳ ನಡೆಯಲಿದ್ದು, ರಾಜ್ಯದ ಜನತೆ ಅದರಲ್ಲಿ ಪಾಲ್ಗೊಳ್ಳಲು ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರ ಪ್ರದೇಶದ ಸಚಿವ ಸಿದ್ಧಾರ್ಥನಾಥ ಸಿಂಗ್ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಡೆಯುವ ಅತಿದೊಡ್ಡ ಕುಂಭ ಮೇಳವು ಜ.15 ರಿಂದ ಮಾ.31ರವರೆಗೆ ನಡೆಯಲಿದೆ. ಸರಕಾರ ಈ ಮೇಳಕ್ಕೆ ಬರುವ ಯಾತ್ರಾರ್ಥಿಗಳಿಗೆ ಅತ್ಯಗತ್ಯವಾದ ಮೂಲ ಸೌಕರ್ಯ ಒದಗಿಸಲು ಸುಮಾರು 15 ಕೋಟಿ ಜನರಿಗೆ ವಸತಿ ಕಲ್ಪಿಸಲು 4,200 ಕೋಟಿ ರೂ.ಗಳನ್ನು ವ್ಯಯಿಸಿದೆ. ಭಾರತೀಯ ರೈಲ್ವೇ ಇಲಾಖೆಯು ವಿವಿಧ ಭಾಗಗಳಿಂದ ಪ್ರಯಾಗರಾಜ್ ಜಿಲ್ಲೆಗೆ ಸಂಚರಿಸುವ ಅನುಕೂಲ ಕಲ್ಪಿಸಲು ಸುಮಾರು 800 ವಿಶೇಷ ರೈಲು ಸೌಲಭ್ಯವನ್ನು ಒದಗಿಸಲಿದೆ ಎಂದು ಹೇಳಿದರು.

ಸುಮಾರು 5 ಸಾವಿರ ಯಾತ್ರಾರ್ಥಿಗಳನ್ನು ಪ್ರಯಾಗರಾಜ್‌ಗೆ ತಲುಪಿಸುವ ಸಾಮರ್ಥ್ಯವುಳ್ಳ ವಿಶೇಷ ರೈಲುಗಳು ಪ್ರಯಾಗರಾಜ್ ಮತ್ತು ದೆಹಲಿಯ ಮಧ್ಯೆ ಸಂಚರಿಸಲಿವೆ. ಮೇಳದ 3.200 ಹೆಕ್ಟೇರ್ ಪ್ರದೇಶವನ್ನು ಈಗಾಗಲೇ ಸ್ಮಾರ್ಟ್ ಸಿಟಿಯನ್ನಾಗಿ ಪರಿವರ್ತಿಸಿದ್ದು, ಸ್ವಚ್ಛ ಭಾರತ ಅಭಿಯಾನದಡಿ 1.22 ಲಕ್ಷ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಿದೆ. ಸರಳ ಮಲಗುವ ಕೋಣೆಯಿಂದ ಐಷಾರಾಮಿ 5 ಸ್ಟಾರ್ ಟೆಂಟ್‌ಗಳು ಇಲ್ಲಿ ಲಭ್ಯವಿವೆ ಎಂದು ಮಾಹಿತಿ ನೀಡಿದರು.

ಸೂಕ್ತ ಭದ್ರತೆ: ಯಾತ್ರಾರ್ಥಿಗಳು ಹೋಟೆಲ್ ಮತ್ತು ಲಾಡ್ಜ್‌ಗಳನ್ನು ಕಾಯ್ದಿರಿಸಲು, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಕುಂಭ ಮೇಳ ನಡೆಯುವ ಸ್ಥಳಗಳಿಗೆ ರಸ್ತೆಯನ್ನು ಹುಡುಕಾಡಲು ಪರದಾಡುವುದುನ್ನು ತಪ್ಪಿಸಲು ಮೊಬೈಲ್‌ನಲ್ಲಿ ಅನುಕೂಲ ಕಲ್ಪಿಸಲಾಗಿದೆ. ಮಕ್ಕಳು ನಾಪತ್ತೆಯಾದರೆ, ಮೊಬೈಲ್ ಹಾಗೂ ಬೆಲೆಬಾಳುವ ವಸ್ತುಗಳು ಕಳುವಾದರೆ ಮೊಬೈಲ್ ಮೂಲಕವೇ ದೂರು ದಾಖಲಿಸಬಹುದು. ಇಂತಹ ಘಟನೆಗಳನ್ನು ತಪ್ಪಿಸುವ ಉದ್ದೇಶದಿಂದ 1000 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು 20 ಸಾವಿರ ಪೊಲೀಸರು, 20 ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. 80 ಭಯೋತ್ಪಾದಕ ನಿಗ್ರಹ ದಳಗಳು ಜತೆಗೆ ಇತರೆ ರಕ್ಷಣಾ ದಳಗಳನ್ನು ನಿಯೋಜಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News