×
Ad

ಬೆಂಗಳೂರಿಗೆ ಆಗಮಿಸಿದ ಡಿಗ್ನಿಟಿ ಮಾರ್ಚ್

Update: 2018-12-26 21:42 IST

ಬೆಂಗಳೂರು, ಡಿ.26: ಮಕ್ಕಳು ಮತ್ತು ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ವಿರುದ್ಧ ಮುಂಬೈನಿಂದ ಗರೀಮ ಅಭಿಯಾನ ವೇದಿಕೆ ವತಿಯಿಂದ ಆರಂಭವಾದ ಡಿಗ್ನಿಟಿ ಮಾರ್ಚ್ ಇಂದು ಬೆಂಗಳೂರಿಗೆ ಆಗಮಿಸಿತ್ತು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಆಶಿಫ್ ಶೇಖ್, ಲೈಂಗಿಕ ಅಪರಾಧಗಳಿಗೆ ದಾರಿ ಮಾಡಿಕೊಡುವ ನ್ಯಾಯಾಂಗ, ವೈದ್ಯಕೀಯ ಮತ್ತು ಪೊಲೀಸ್ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸುವುದು. ಕುಟುಂಬದಲ್ಲಿ, ಸಮುದಾಯದಲ್ಲಿ, ಸಮಾಜದಲ್ಲಿ ಲೈಂಗಿಕ ಶೋಷಣೆಯ ಬಗೆಗಿರುವ ಮನೋವೃತ್ತಿಯನ್ನು ಬದಲಾಯಿಸುವುದು. ಅತ್ಯಾಚಾರಿಗಳ ವಿರುದ್ಧ ದೂರು ದಾಖಲಿಸುವಂತೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಇತರರನ್ನು ಹುರಿದುಂಬಿಸುವುದು ಈ ಜಾಥಾದ ಉದ್ದೇಶವಾಗಿದೆ ಎಂದು ಹೇಳಿದರು.

ಡಿ.20 ರಿಂದ ಆರಂಭವಾದ ಈ ಜಾಥ ದೇಶದಾದ್ಯಂತ 65 ದಿನಗಳ ಕಾಲ ಸಂಚಾರ ಮಾಡಲಿದ್ದು, 24 ರಾಜ್ಯಗಳ 200 ಕ್ಕೂ ಅಧಿಕ ಜಿಲ್ಲೆಗಳಿಗೆ ಭೇಟಿ ನೀಡುತ್ತದೆ. ಸುಮಾರು 10 ಸಾವಿರ ಕಿ.ಮೀ.ಜಾಥ ಪ್ರಯಾಣ ಮಾಡಲಿದೆ. ಜಾಥದ ಮೂಲಕ ಅತ್ಯಾಚಾರ, ದೌರ್ಜನ್ಯಕ್ಕೊಳಗಾದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಅತ್ಯಾಚಾರದ ಪರಿಣಾಮಕ್ಕಿಂತ ಜನರ ದೂಷಣೆಯಿಂದ ನಾನು ಹೆಚ್ಚು ನಲುಗಿದೆ. ಇದರಿಂದಾಗಿಯೇ ನಾನು ಮನೆಯನ್ನು, ಕುಟುಂಬವನ್ನು ಬಿಟ್ಟು ಬಂದಿದ್ದೇನೆ. ನಮ್ಮ ಸೋದರಿಯರನ್ನು, ಮಕ್ಕಳನ್ನು ಅತ್ಯಾಚಾರದಿಂದ ರಕ್ಷಿಸುವುದು ನಮ್ಮ ಕರ್ತವ್ಯ. ಈ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ಭಾಗವಹಿಸುವಂತೆ, ಧ್ವನಿಯೇರಿಸುವಂತೆ ನಮ್ಮ ಸೋದರಿಯರಲ್ಲಿ ವಿನಂತಿಸುತ್ತೇವೆ ಎಂದು ವೇದಿಕೆಯ ಕಾರ್ಯಕರ್ತೆ ಭನ್ವಾರಿ ದೇವಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News