ಶಿವರಾಂ ಕಾರಂತ ಬಡಾವಣೆ ಯೋಜನೆ ಕೈಬಿಡಲು ಆಗ್ರಹ
ಬೆಂಗಳೂರು, ಡಿ.26: ಶಿವರಾಂ ಕಾರಂತ ಬಡಾವಣೆಯ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಜ.8 ರಂದು ಸಹಕಾರ ನಗರದಿಂದ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಶಿವರಾಂ ಕಾರಂತ ಬಡಾವಣೆ ನಿರ್ಮಾಣಕ್ಕೆ 2008 ರಲ್ಲಿ ರಾಜ್ಯಸರಕಾರ ಬೆಂಗಳೂರಿಗೆ ಹೊಂದಿಕೊಂಡಿರುವ 17 ಗ್ರಾಮಗಳಲ್ಲಿ 3,456.12 ಎಕರೆ ಪ್ರದೇಶವನ್ನು ಸ್ವಾಧೀನಕ್ಕೆ ಆದೇಶ ಹೊರಡಿಸಿತ್ತು. ನಂತರ ಐದಾರು ವರ್ಷ ಬಿಡಿಎ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಹೇಳಿದರು.
ಈ ಸಂಬಂಧ ರೈತರು ಮತ್ತು ಗ್ರಾಮಸ್ಥರು 2014-15ರಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹಾಕಿದರು. ಹೈಕೋಟ್ ಅಧಿಸೂಚನೆ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಬಳಿಕ 1,300 ಎಕರೆಗಳಿಗೆ ಬಿಡಿಎ ಭೂ ಮಾಲಕರಿಗೆ ನಿರಾಪೇಕ್ಷಣಾ ಪತ್ರ ನೀಡಿ, ಈಗಾಗಲೇ ಶೇ.65ರಷ್ಟು ಪ್ರದೇಶ ಅಭಿವೃದ್ಧಿಯಾಗಿದ್ದು, ನಿವೇಶನ, ಮನೆ, ರಸ್ತೆ, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗಿದೆ. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ಭೂ ಸ್ವಾಧೀನಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆಗೆ ಒತ್ತಾಯಿಸಿ ಜ.8 ರಂದು ಬೆಳಗ್ಗೆ 10 ಗಂಟೆಗೆ ಸಹಕಾರ ನಗರದ ಗಣೇಶ ದೇವಸ್ಥಾನದ ಹಿಂಭಾಗದ ಮೈದಾನದಿಂದ ಸುಮಾರು 50 ಸಾವಿರ ಮಂದಿಯ ಪಾದಯಾತ್ರೆ ಮೂಲಕ ಸ್ವಾತಂತ್ರ ಉದ್ಯಾನವನ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಗುವುದು. ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರೈತರರಾದ ಕೃಷ್ಣಪ್ಪ, ನಂಜುಂಡಪ್ಪ, ಶಂಕರ್ ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದರು.