×
Ad

ಗಂಭೀರ ಅಪರಾಧ ಪ್ರಕರಣ: ರೌಡಿ ಮುಲಾಮ ಸೆರೆ

Update: 2018-12-26 21:48 IST

ಬೆಂಗಳೂರು, ಡಿ.26: ಗಂಭೀರ ಅಪರಾಧ ಪ್ರಕರಣ ಸಂಬಂಧ ಕುಖ್ಯಾತ ರೌಡಿ ಮುಲಾಮನನ್ನು ಬುಧವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮುಲಾಮ ವಿರುದ್ಧ ರಾಜರಾಜೇಶ್ವರಿ ಹಾಗೂ ಬನ್ನೇರುಘಟ್ಟ ಪೊಲೀಸ್ ಠಾಣೆಗಳಲ್ಲಿ ಜೀವ ಬೆದರಿಕೆ ಆರೋಪದಡಿ ಮೊಕದ್ದಮೆ ದಾಖಲಾಗಿತ್ತು. ಆದರೆ, ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ವಿಮಾನದ ಮೂಲಕ ಮುಂಬೈಗೆ ತೆರಳುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ರೌಡಿ ಮುಲಾಮನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಯಾರು ರೌಡಿ?: ರೌಡಿ ಬಲರಾಮನ ಬಲಗೈ ಸಹಚರ ಮುಲಾಮ ಎನ್ನಲಾಗಿದ್ದು, ಕೊಲೆ ಯತ್ನ, ದೊಂಬಿ, ಹೊಡೆದಾಟ, ಅಪಹರಣ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.

ಬಲರಾಮನ ಮರಣದ ನಂತರ ತನ್ನದೇ ಗುಂಪು ಕಟ್ಟಿಕೊಂಡಿದ್ದ ಮುಲಾಮನ ವಿರುದ್ಧ 3 ಕೊಲೆ, 3 ಕೊಲೆಯತ್ನ, 5 ದರೋಡೆ, 4 ಅಪಹರಣ ಸೇರಿದಂತೆ 19 ಮೊಕದ್ದಮೆ ದಾಖಲಾಗಿವೆ. ಇದಾದ ನಂತರ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಎಂದು ಹೇಳಲಾಗುತ್ತಿದೆ.

1985ರಲ್ಲಿ ರಾಜಾಜಿನಗರ ಪೊಲೀಸ್ ಠಾಣೆ, ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲೂ ರೌಡಿಶೀಟರ್ ಪಟ್ಟಿಯಲ್ಲಿದ್ದಾನೆ. ಇತ್ತೀಚೆಗಷ್ಟೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರು ಇನ್ನೊಮ್ಮೆ ಈ ರೀತಿ ದಂಧೆಯಲ್ಲಿ ಭಾಗಿಯಾದರೆ ಕೋಕಾ ಕಾಯ್ದೆ ಅಡಿ ಬಂಧನ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೂ, ತನ್ನ ಚಾಳಿ ಬಿಡದ ಮುಲಾಮ ಮತ್ತದೇ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News