ಈಗ ಬಂಡಾಯ ಕಾರ್ಯಕ್ರಮ : ಪ್ರಸ್ತುತ ಪಡಿಸುತ್ತಿರುವವರು ನಿತಿನ್ ಗಡ್ಕರಿ, ಪ್ರಾಯೋಜಿಸುತ್ತಿರುವವರು ಆರೆಸ್ಸೆಸ್ !

Update: 2018-12-26 18:36 GMT
Editor : ನೋಡುಗ

ನಿತಿನ್ ಗಡ್ಕರಿ ಯವರ ಧ್ವನಿಪೆಟ್ಟಿಗೆ ಇದ್ದಕ್ಕಿದ್ದಂತೆ ರಿಪೇರಿಯಾಯಿತೇ ? ಅದು ಇಷ್ಟರವರೆಗೆ ಹಾಳಾಗಿದ್ದು ಹೇಗೆ ? ಈಗ ಹಠಾತ್ತನೆ ಅದು ಸರಿಯಾಗಿ ಓತಪ್ರೋತವಾಗಿ ಧ್ವನಿ ಹೊರಡಿಸಲು ಕಾರಣವೇನು ?

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬಿಜೆಪಿ, ಅದರ ಮೈತ್ರಿಕೂಟ ಎನ್ ಡಿ ಎ ಹಾಗು ಅದರ ನೇತೃತ್ವದ ಕೇಂದ್ರ ಸರಕಾರ ನಡೆದು ಬಂದ ರೀತಿಯನ್ನು ಗಮನಿಸಿದವರನ್ನು ಕಾಡುತ್ತಿರುವ ಬಹುಮುಖ್ಯ ಪ್ರಶ್ನೆ ಇದು. ಆದರೆ ಈ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಕಷ್ಟ ಅಲ್ಲ ಎಂಬುದು ಈಗ ಸ್ಪಷ್ಟವಾಗುತ್ತಿದೆ. 

ಡಿಸೆಂಬರ್  23 ರಂದು ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು " ನಾಯಕತ್ವ ಸೋಲು ಹಾಗು ವೈಫಲ್ಯಗಳ ಹೊಣೆ ಹೊತ್ತುಕೊಳ್ಳುವ ನೈತಿಕತೆ ತೋರಿಸಬೇಕು. ಸಂಘಟನೆಗೆ ನಾಯಕತ್ವದ ನಿಷ್ಠೆ ಗೊತ್ತಾಗುವುದು ಅದು ಸೋಲಿನ ಹೊಣೆ ಹೊತ್ತುಕೊಂಡಾಗ" ಎಂದು ಹೇಳಿದರು. ಅಷ್ಟಕ್ಕೇ ನಿಲ್ಲದೆ "ಯಶಸ್ಸಿಗೆ ಬಹಳ ಮಂದಿ ತಂದೆಯರು. ವೈಫಲ್ಯ ಮಾತ್ರ ಯಾವಾಗಲೂ ಅನಾಥ. ನಾಯಕತ್ವ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು" ಎಂದೂ ಸೇರಿಸಿದರು ಗಡ್ಕರಿ ಸಾಹೇಬರು.

ಸದ್ಯದ ಬಿಜೆಪಿಯಲ್ಲಿ ಇಷ್ಟು ಮಾತಾಡಬೇಕಾದರೆ ಅವರು ನಾಗಪುರದ ಸಂಸದ, ಆರೆಸ್ಸೆಸ್ ನ ಅತ್ಯಾಪ್ತ , ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೇ ಆಗಿರಬೇಕು. 2014ರ ಬಳಿಕದ ಬಿಜೆಪಿ ನಡೆದು ಬಂದ ಹಾದಿಯನ್ನು ಅವಲೋಕಿಸಿದರೆ ಗಡ್ಕರಿಯ ಗುರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಆಗಿರಬೇಕು ಎಂದು ಹೇಳಲು ವಿಶೇಷ ಜಾಣರಾಗಿರಬೇಕಾಗಿಲ್ಲ. ಹಾಗೆಯೇ, ಇವರಿಬ್ಬರ ವಿರುದ್ಧ ಈಗ ಹೀಗೆ ಗಡ್ಕರಿಯವರ ಧ್ವನಿ ಪೆಟ್ಟಿಗೆಗೆ ಶಕ್ತಿ ತುಂಬಿರುವುದು ಆರೆಸ್ಸೆಸ್  ಎಂಬುದು ಇನ್ನು ಗುಟ್ಟಲ್ಲ.

ಪುಣೆ ಹೇಳಿಕೆಯ ಬೆನ್ನಿಗೇ , ನನ್ನ ಹೇಳಿಕೆಯನ್ನು ಕೆಲವು ಮಾಧ್ಯಮಗಳು ತಿರುಚಿವೆ ಎಂದು ಗಡ್ಕರಿ ಸಮಜಾಯಿಷಿ ನೀಡಿದರು. ಇದು ನನ್ನ ಹಾಗು ಬಿಜೆಪಿ ನಾಯಕತ್ವದ ನಡುವೆ ಭಿನ್ನಮತ ಮೂಡಿಸುವ ಕುತಂತ್ರ ಎಂದೂ ಸೇರಿಸಿದರು. ಮುಂದಿನ ಚುನಾವಣೆಗೆ ಪ್ರಧಾನಿ ಮೋದಿಯವರದ್ದೇ ನೇತೃತ್ವ ಎಂದೂ ತೇಪೆ ಹಚ್ಚಿದರು. ಆದರೆ ... 

ಎರಡೇ ದಿನಗಳಲ್ಲಿ ಗಡ್ಕರಿ ಧ್ವನಿ ಮತ್ತೆ ಮಾತನಾಡಿತು. ಈ ಬಾರಿ ವೇದಿಕೆ ದಿಲ್ಲಿಯದ್ದು. " ನಾನು ಪಕ್ಷಾಧ್ಯಕ್ಷ ಆಗಿದ್ದು ಪಕ್ಷದ ಸಂಸದರು, ಶಾಸಕರು ಸರಿಯಾಗಿ ಕೆಲಸ ಮಾಡದಿದ್ದರೆ ಅದಕ್ಕೆ ಯಾರು ಹೊಣೆ ? ನಾನೇ " ಎಂದು ಬಿಟ್ಟರು ಗಡ್ಕರಿ. 

ಈ ಎರಡನೇ ಹೇಳಿಕೆ ಇದ್ದ ಅಲ್ಪಸ್ವಲ್ಪ ಗೊಂದಲವನ್ನೂ ನಿವಾರಣೆ ಮಾಡಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬಿಜೆಪಿಯ ಪ್ರತಿ ಚುನಾವಣಾ ಗೆಲುವಿನ ಶ್ರೇಯ ತಲುಪುತ್ತಿರುವುದು ಮೋದಿ ನಾಯಕತ್ವ ಹಾಗು ಶಾ ತಂತ್ರಗಾರಿಕೆಗೆ. ಪ್ರತಿ ಗೆಲುವಿನ ಬೆನ್ನಿಗೇ ಪತ್ರಿಕಾಗೋಷ್ಠಿ ಮಾಡಲು ಶಾ ಮರೆಯುತ್ತಿರಲಿಲ್ಲ. ಆದರೆ ಡಿಸೆಂಬರ್ 11 ರ ಪಂಚರಾಜ್ಯ ಚುನಾವಣಾ ಫಲಿತಾಂಶದ ದಿನ ಮಾತ್ರ ಶಾ ನಾಪತ್ತೆ . ಹಾಗೆ ಮಾಯವಾದವರು ಮತ್ತೆ ಪ್ರತ್ಯಕ್ಷರಾಗಿದ್ದು ಮೂರು ದಿನಗಳ ಬಳಿಕ ಸುಪ್ರೀಂ ಕೋರ್ಟ್ ನಲ್ಲಿ ರಫೇಲ್ ಕುರಿತು ಕೇಂದ್ರದ ಪರ ತೀರ್ಪು ಬಂದಾಗ.

ಒಂದು ಕುಟುಂಬದ ನಿಯಂತ್ರಣದಲ್ಲಿರುವ ಕಾಂಗ್ರೆಸ್ ಗಿಂತ ತಾನು ಭಿನ್ನ ಎಂದು ಬಿಜೆಪಿ ತನ್ನ ಬೆನ್ನು ತಟ್ಟಿಕೊಳ್ಳುತ್ತಲೇ ಇತ್ತು. ಅದರಲ್ಲಿ ವಿವಿಧ ಹಂತಗಳಲ್ಲಿ ನಾಯಕತ್ವ ಬೆಳೆಸುವ ವ್ಯವಸ್ಥೆ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಸಂಪೂರ್ಣ ಬದಲಾಗಿದೆ. ಅಲ್ಲಿ ಈಗ ಏನಿದ್ದರೂ ಮೋದಿ - ಶಾ ಅವರದ್ದೇ ಆಟ. ಪಕ್ಷವನ್ನು ಬೆಳೆಸಿ ಇಲ್ಲಿವರೆಗೆ ತಂದ ಹಿರಿಯರನ್ನು ವೃದ್ಧಾಶ್ರಮದಂತಹ ಮಾರ್ಗದರ್ಶಕ ಮಂಡಲಿಗೆ ದೂಡಿ ಬಿಡಲಾಗಿದೆ. ಅವರಿಗೆ ಕೆಲಸ ಇಲ್ಲ. ಇನ್ನು ಈ ಗುಜರಾತಿನ ಭಲೇ ಜೋಡಿಯ ವಿರುದ್ಧ ಸೊಲ್ಲೆತ್ತುವ ಧೈರ್ಯ ಪಕ್ಷದಲ್ಲಿ ಯಾರಿಗೂ ಇರಲಿಲ್ಲ. ಆದರೆ ... 

ಈಗ ಪರಿಸ್ಥಿತಿ ಬದಲಾಗುತ್ತಿದೆ. ಬದಲಾಗಿದೆ. ಮೂರು ಪ್ರಮುಖ ಹಿಂದಿ ರಾಜ್ಯಗಳಲ್ಲಿ ಪಕ್ಷ ಸೋಲುಂಡ ಬಳಿಕ ಪಕ್ಷದೊಳಗಿನ ನಾಯಕರ ಧ್ವನಿ ಪೆಟ್ಟಿಗೆಗೆ ಬಲ ಬಂದಿದೆ. ಸಂಸದರು ಅಲ್ಲಲ್ಲಿ ಗೊಣಗುಟ್ಟಲು ಪ್ರಾರಂಭಿಸಿದ್ದಾರೆ. ಮೈತ್ರಿ ಪಕ್ಷಗಳ ನಾಯಕರಿಗೆ ಇದ್ದಕ್ಕಿದ್ದಂತೆ ಬಿಜೆಪಿ ಮೇಲೆ ಸವಾರಿ ಮಾಡುವ ಮನಸ್ಸು ಬಂದಿದೆ. ಬಿಹಾರದಲ್ಲಿ ತಾನು ಕಳೆದ ಬಾರಿ ಗೆದ್ದದ್ದಕ್ಕಿಂತ ( 22) ಕಡಿಮೆ ಸ್ಥಾನಗಳಿಗೆ ( 17) ಸ್ಪರ್ಧಿಸಲು ಬಿಜೆಪಿ ಒಪ್ಪಿಕೊಂಡಿರುವುದೇ ಮೋದಿ - ಶಾ ಜೋಡಿ ಮೆತ್ತಗಾಗಿದೆ ಎಂಬುದಕ್ಕೆ ಬಹುದೊಡ್ಡ ಸಾಕ್ಷಿ. 

ಇನ್ನು ಬಿಜೆಪಿಯಲ್ಲಿ ಮೋದಿ - ಶಾ ವಿರುದ್ಧ ಗಟ್ಟಿಯಾಗಿ ಮಾತನಾಡಿ ಅದನ್ನು ಜೀರ್ಣಿಸಿಕೊಳ್ಳಬಲ್ಲ ನಾಯಕ ಗಡ್ಕರಿ ಮಾತ್ರ. ಗಡ್ಕರಿ ಮತ್ತು ಆರೆಸ್ಸೆಸ್ ಬಂಧ ಬಹಳ ಹಳೆಯದು. ಇನ್ನು ಗಡ್ಕರಿ ಮತ್ತು ಮೋದಿ ನಡುವಿನ ಸಂಬಂಧ ಅಷ್ಟಕ್ಕಷ್ಟೆ. ಗಡ್ಕರಿ ಪಕ್ಷದ ಅಧ್ಯಕ್ಷರಾಗಿದ್ದಾಗ ಮೋದಿ ವಿರೋಧಿ ಸಂಜಯ್ ಜೋಶಿಗೆ ಪೂರ್ಣ ಬೆಂಬಲ ನೀಡಿದ್ದು ಇದೇ ಗಡ್ಕರಿ. ಮೋದಿ ಪಕ್ಷದ ಪ್ರಶ್ನಾತೀತ ನಾಯಕನಾಗಿ ಬೆಳೆದು ಬಂದ ಮೇಲೂ ಅವರಿಬ್ಬರು ಎಂದೂ ಬಹಳ ಆತ್ಮೀಯರಾಗಿರಲಿಲ್ಲ. ಈ ಹಿಂದೆ ಅಕ್ಟೊಬರ್ ನಲ್ಲೂ ಗಡ್ಕರಿ " ಬಿಜೆಪಿ ದೊಡ್ಡ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂತು " ಎಂದು ಹೇಳುವ ಮೂಲಕ ಮೋದಿಯನ್ನು ಕುಟುಕಿದ್ದರು.

ಡಿಸೆಂಬರ್ 11 ರ ಆಘಾತಕಾರಿ ಸೋಲಿನ ಬಳಿಕ ಬಿಜೆಪಿಯನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆ " ಮಹಾಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಬಾರದಿದ್ದರೆ ಏನು ಮಾಡುವುದು ?" ಎಂಬುದು. ಏನೇ ಆದರೂ ಬಿಜೆಪಿ ಕಳೆದ ಬಾರಿ ಪಡೆದಷ್ಟು ಸ್ಥಾನಗಳನ್ನು ಹಿಂದಿ ರಾಜ್ಯಗಳಲ್ಲಿ ಗೆಲ್ಲುವುದಿಲ್ಲ ಎಂದು ಆ ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ. ಹಾಗಾದರೆ ಬಹುಮತ ಬಾರದಿದ್ದರೆ ಸರಕಾರ ರಚಿಸುವುದು ಹೇಗೆ ಎಂಬ ಪ್ರಶ್ನೆಗೆ ಸದ್ಯದ ಉತ್ತರ ನಿತಿನ್ ಗಡ್ಕರಿ !

ಅಂತಹ ಪರಿಸ್ಥಿತಿ ಬಂದರೆ ಎನ್ ಡಿ ಎ ಮೈತ್ರಿ ಪಕ್ಷಗಳಿಗೆ ಸ್ವೀಕೃತವಾಗುವ ಬಿಜೆಪಿಯ ನಾಯಕ ಗಡ್ಕರಿ ಎಂಬುದು ಈಗ ಕೇಳಿ ಬರುತ್ತಿರುವ ಮಾತು. ಈಗಾಗಲೇ ಮೋದಿ - ಶಾ ವಿರುದ್ಧ ಮಾತನಾಡುತ್ತಿರುವ ಎನ್ ಡಿ ಎ ಮೈತ್ರಿ ಪಕ್ಷಗಳು ಗಡ್ಕರಿಯನ್ನು ಒಪ್ಪಿಕೊಳ್ಳುತ್ತವೆ ಎಂಬುದು ಆರೆಸ್ಸೆಸ್ ಅಂದಾಜು. ಹಾಗಾಗಿ ... 

ಮೋದಿ - ಶಾ ವಿರುದ್ಧ ಗಡ್ಕರಿಯ ಹೇಳಿಕೆ ಆರಂಭ ಮಾತ್ರ. ಅವರು ಉದ್ಘಾಟನೆ ಮಾತ್ರ ಮಾಡಿದ್ದಾರೆ. ನೋಡ್ತಾ ಇರಿ .. ಏನೇನ್ ಆಗುತ್ತೆ ಅಂತಾ ! 

Writer - ನೋಡುಗ

contributor

Editor - ನೋಡುಗ

contributor

Similar News