ಆರು ತಿಂಗಳಿಗೊಮ್ಮೆ ನಗರ ಯೋಜನಾ ಮಂಡಳಿ ಸಭೆ: ಉಪಮುಖ್ಯಮಂತ್ರಿ ಪರಮೇಶ್ವರ್
ಬೆಂಗಳೂರು, ಡಿ. 27: ನಿಯಮಗಳನ್ವಯ ರಾಜ್ಯ ನಗರ ಯೋಜನಾ ಮಂಡಳಿಯು ಪ್ರತಿ ಆರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಆದರೆ, ಎರಡು ವರ್ಷದ ಬಳಿಕ ಸಭೆ ನಡೆಸುತ್ತಿರುವುದು ಸರಿಯಲ್ಲ. ಇನ್ನು ಮುಂದೆ ಪ್ರತಿ ಆರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿರ್ದೇಶನ ನೀಡಿದ್ದಾರೆ.
ಗುರುವಾರ ಇಲ್ಲಿನ ಬಿಎಂಆರ್‌ಡಿಎ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ರಾಜ್ಯ ನಗರ ಯೋಜನಾ ಮಂಡಳಿಯ 68ನೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯ ನಗರ ಯೋಜನಾ ಮಂಡಳಿಯ ಆದಾಯ ಪ್ರತಿವರ್ಷ ಏರಿಕೆ ಕಾಣಬೇಕು ಎಂದು ಸೂಚಿಸಿದರು.
2016-17 ರಲ್ಲಿ 21ಕೋಟಿ ರೂ., 2017-18ರಲ್ಲಿ 19 ಕೋಟಿ ರೂ., ಹಾಗೂ 2018-19ನೇ ಸಾಲಿನಲ್ಲಿ 14 ಕೋಟಿ ರೂಗೆ ಇಳಿಕೆಯಾಗಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಪ್ರತಿವರ್ಷ ಆದಾಯ ಸಂಗ್ರಹ ಕನಿಷ್ಠ ಶೇ.10ರಷ್ಟು ಹೆಚ್ಚಳ ಆಗಬೇಕು. ಮುಂದಿನ ವರ್ಷದಿಂದ ಹೆಚ್ಚಳವಾಗುವಂತೆ ಕ್ರಮ ವಹಿಸಿ ಎಂದರು.
ನಾಲ್ಕು ವರ್ಷದಲ್ಲಿ ನಗರ ಯೋಜನೆಗೆ ಸಂಬಂಧಿಸಿದಂತೆ ಅಂತರ್‌ರಾಷ್ಟ್ರೀಯ ತರಬೇತಿಗಾಗಿ ಹಲವರನ್ನು ಹೊರ ದೇಶಗಳಿಗೆ ಕಳುಹಿಸಿದ್ದೀರಿ. ಆದರೆ, ತರಬೇತಿ ಪಡೆದ ಬಳಿಕ ಇದರ ಉಪಯೋಗವಾಗಿದೆಯಾ? ಎಂದು ಪ್ರಶ್ನಿಸಿದ ಅವರು, ತರಬೇತಿ ಹೆಸರಿನಲ್ಲಿ ಅನಗತ್ಯವಾಗಿ ಹಣ ವ್ಯರ್ಥವಾಗುವುದು ಬೇಡ. ತರಬೇತಿ ಪಡೆದವರು ಅದನ್ನು ಇಲ್ಲಿ ಚಾಲ್ತಿಗೆ ತರುವಂತೆ ನೋಡಿಕೊಳ್ಳಿ ಎಂದರು.
ಪ್ರತಿ ಇಲಾಖೆಯಲ್ಲಿ ನೇಮಕಾತಿ ವಿಚಾರದಲ್ಲಿ ಇರುವ ಪ್ರತ್ಯೇಕ ನಿಯಮದಿಂದ ನೇಮಕಾತಿ ತಡವಾಗುತ್ತಿದೆ. ಹೀಗಾಗಿ ವೃಂದ ಮತ್ತು ನೇಮಕಾತಿ ನಿಯಮ ಎಲ್ಲ ಇಲಾಖೆಗೂ ಅನ್ವಯವಾಗುವಂತೆ ಕ್ರಮಕೈಗೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ ನೇಮಕಾತಿ ಪ್ರಕ್ರಿಯೆ ತಡವಾಗುತ್ತದೆ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.
ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯನ್ನು ಕನಕಪುರ ಸ್ಥಳೀಯ ಯೋಜನಾ ಪ್ರದೇಶಗಳ ವ್ಯಾಪ್ತಿಗೆ ಒಪ್ಪಿಸದೇ, ಈ ಯೋಜನೆಯನ್ನು ಬಿಎಂಐಸಿಎಪಿಎ ವ್ಯಾಪ್ತಿಯಲ್ಲಿಯೇ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ರಾಜ್ಯ ನಗರ ಯೋಜನಾ ಮಂಡಳಿಗೆ ಪ್ರತ್ಯೇಕ ಆಡಿಟರ್ ನೇಮಕಕ್ಕೆ ತೀರ್ಮಾನಿಸಲಾಯಿತು. ಈವರೆಗೂ ಇತರೆ ಇಲಾಖೆಯಿಂದ ಆಡಿಟರ್ ಮೂಲಕ ಮಾಡಲಾಗುತ್ತಿತ್ತು ಎಂದು ತಿಳಿಸಲಾಗಿದೆ.
ಸಾಲ: ಅರಸೀಕೆರೆ ಯೋಜನಾ ಪ್ರಾಧಿಕಾರ, ಉಡುಪಿ ಜಿಲ್ಲೆ ಕಾಪು ಮಂಡಳಿ ಸೇರಿ ಇತರೆ ಹೊಸ ಮಂಡಳಿಗಳಿಗೆ ರಾಜ್ಯ ನಗರ ಯೋಜನಾ ಮಂಡಳಿ ವತಿಯಿಂದ ಶೇ.6ರಷ್ಟು ಬಡ್ಡಿಗೆ 25ಲಕ್ಷ ರೂ.ಸಾಲ ನೀಡಲಾಗಿದೆ ಎಂದು ಅಧಿಕಾರಿಗಳು, ಡಿಸಿಎಂ ಪರಮೇಶ್ವರ್ ಅವರಿಗೆ ಮಾಹಿತಿ ನೀಡಿದರು.