×
Ad

ದಲಿತರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಬದ್ಧ: ದಿನೇಶ್ ಗುಂಡೂರಾವ್

Update: 2018-12-27 19:11 IST

ಬೆಂಗಳೂರು, ಡಿ.27: ಕರ್ನಾಟಕದಲ್ಲಿ ದಲಿತ ಸಮುದಾಯದಲ್ಲಿ ಮುಖ್ಯಮಂತ್ರಿಯಾಗಲು ಅರ್ಹತೆಯುಳ್ಳವರು ಹಲವರಿದ್ದು, ಮುಂದಿನ ದಿನಗಳಲ್ಲಿ ದಲಿತರನ್ನು ಸಿಎಂ ಮಾಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಗುರುವಾರ ನಗರದ ಗಾಂಧೀ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದಿಂದ ಆಯೋಜಿಸಿದ್ದ ಮಾಜಿ ಸಚಿವ ಬಿ.ಬಸವಲಿಂಗಪ್ಪ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಲಿತ ಸಮುದಾಯಕ್ಕಾಗಿ ನಿರಂತರವಾಗಿ ಶ್ರಮಿಸಿದ ಬಸವಲಿಂಗಪ್ಪನವರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಇತ್ತು. ಆದರೆ, ಅಂದು ಅವರಿಗೆ ಅವಕಾಶ ಸಿಗಲಿಲ್ಲ ಎಂದ ದಿನೇಶ್, ರಾಜ್ಯದಲ್ಲಿ ಡಿಸಿಎಂ ಪರಮೇಶ್ವರ್, ಸಂಸದ ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಸಿಎಂ ಆಗುವ ಅರ್ಹತೆಯಿರುವವರಾಗಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಅವಕಾಶ ಸಿಗಬಹುದು. ಕರ್ನಾಟಕದಲ್ಲಿ ದಲಿತರು ಸಿಎಂ ಆಗಬೇಕಾದ ಅಗತ್ಯವಿದೆ ಎಂದು ನುಡಿದರು.

ದಲಿತರಿಗೆ ಕಾಂಗ್ರೆಸ್‌ನೊಳಗೆ ಸ್ಥಾನಮಾನ ನೀಡಲು ಯಾವುದೇ ಹಿಂಜರಿಕೆ ಇಲ್ಲ. ಪರಿಶಿಷ್ಟ ಜಾತಿ ವಿಭಾಗ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ, ಸಂಘಟಿಸುವವರನ್ನು ಶಿಫಾರಸ್ಸು ಮಾಡಿದರೆ ಉನ್ನತ ಮಟ್ಟದ ಸಭೆಗಳಲ್ಲಿ ಈ ಬಗ್ಗೆ ಚರ್ಚಿಸಿ ಬೇರೆ ಬೇರೆ ವಿಭಾಗಗಳಿಗೆ ಆಯ್ಕೆ ಮಾಡಲಾಗುತ್ತದೆ. ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿದಾಗ ಅಷ್ಟೇ ದಲಿತರಿಗೆ ನ್ಯಾಯ ಸಿಗಲು ಸಾಧ್ಯ. ಬೇರೆ ಪಕ್ಷಗಳಿಂದ ಅದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಕ್ಕಿದರೆ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಪರಿಶಿಷ್ಟ ಭಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿ ಮಾಡಲು ಸಾಕಷ್ಟು ಪರಿಶ್ರಮ ಹಾಕಲಾಗಿದೆ. ಆದರೆ, ಅದು ಸಂಪೂರ್ಣವಾಗಿ ಜಾರಿಯಾಗದೇ ಇರುವುದಕ್ಕೆ ಬೇಸರವಿದೆ. ಸಮ್ಮಿಶ್ರ ಸರಕಾರ ಇರುವುದರಿಂದ ಅದಕ್ಕೆ ಹಿನ್ನೆಡೆಯಾಗುತ್ತಿದೆ. ಹೀಗಾಗಿ, ಎಲ್ಲರೂ ಪಕ್ಷವನ್ನು ಕಟ್ಟಲು ಶ್ರಮವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ದಲಿತ ನಾಯಕರು ಧೈರ್ಯದಿಂದ ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಾರೆ. ಒಳಗೆ ಒಂದು ಮಾತನಾಡಿದರೆ, ಹೊರಗಡೆ ಎಲ್ಲವನ್ನೂ ಮಾತನಾಡುವುದಿಲ್ಲ. ಆದರೆ, ಬಸವಲಿಂಗಪ್ಪ ಧೈರ್ಯವಾಗಿ ಎಲ್ಲವನ್ನೂ ತಮ್ಮ ನೇರ ಮಾತುಗಳ ಮೂಲಕ ಖಂಡಿಸುತ್ತಿದ್ದರು ಎಂದು ಅವರು ತಿಳಿಸಿದರು.

ಇಂದಿಗೂ ಸಮಾಜದಲ್ಲಿ ಮೇಲ್ಜಾತಿ-ಕೆಳಜಾತಿ ಎಂಬ ತಾರತಮ್ಯವಿದೆ. ಅದು ನಿವಾರಣೆಯಾಗದ ಹೊರತು ಸಮಾಜ ಬದಲಾವಣೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಸವಲಿಂಗಪ್ಪ ಅವರ ಆದರ್ಶಗಳು ಸ್ಪೂರ್ತಿಯಾಗಬೇಕು. ಬಸವಲಿಂಗಪ್ಪ ಎಲ್ಲರಿಗೂ ಪ್ರೇರಣಾಶಕ್ತಿಯಾಗಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಫ್.ಎಚ್.ಜಕ್ಕಪ್ಪ, ವಿಭಾಗದ ಮುಖಂಡರಾದ ಅಶೋಕ್, ಎಂ.ಡಿ.ಜಯರಾಂ, ಕದಿರಾಮ್ ರಾಥೋಡ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News