ಡಾ.ರಾಜ್‌ಕುಮಾರ್‌ಗೆ ಭಾರತರತ್ನ ಪ್ರಶಸ್ತಿ ನೀಡಿ: ವಾಟಾಳ್ ನಾಗರಾಜ್

Update: 2018-12-27 13:44 GMT

ಬೆಂಗಳೂರು, ಡಿ.27: ಕನ್ನಡ ಚಲನಚಿತ್ರ ರಂಗದಲ್ಲಿ ಅಪಾರ ಸೇವೆ ಸಲ್ಲಿಸಿರುವ ಡಾ.ರಾಜ್‌ ಕುಮಾರ್‌ರವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಬೇಕು. ಸಂಸತ್ ಭವನದ ಮುಂದೆ ಅವರ ಪುತ್ಥಳಿ ಸ್ಥಾಪಿಸಬೇಕೆಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ರಾಜ್‌ ಕುಮಾರ್ ಅದ್ಭುತ ನಟನೆಯಿಂದಲೇ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುವ ವ್ಯಕ್ತಿಯಾಗಿದ್ದು, ಅನೇಕ ಸಾಮಾಜಿಕ ಚಿತ್ರಗಳ ಮೂಲಕ ಜನರಲ್ಲಿ ಅರಿವನ್ನು ಮೂಡಿಸಿದ್ದಾರೆ. ಇಂತಹ ಸರಳ ಸಜ್ಜನಿಕೆಯ ವ್ಯಕ್ತಿಗೆ ಭಾರತರತ್ನ ಪ್ರಶಸ್ತಿಯ ನೀಡಿ, ಸಂಸತ್ ಭವನದ ಮುಂದೆ ಅವರ ಪುತ್ಥಳಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಇದುವರೆಗೂ ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಭಾರತ ರತ್ನ ಕೊಡಿಸುವ ಬಗ್ಗೆ ಎಲ್ಲೂ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಈಗಲಾದರೂ ರಾಜ್ಯದ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಸರಕಾರ ಕೇಂದ್ರದ ಮೇಲೆ ತೀವ್ರ ಒತ್ತಡ ಹೇರಬೇಕು. ಅಲ್ಲದೆ, ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ರಾಷ್ಟ್ರಪತಿ ಹಾಗೂ ಪ್ರಧಾನಿಯನ್ನು ಭೇಟಿ ಮಾಡಿ ಈ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ತಿಳಿಸಿದರು.

ಡಾ.ರಾಜ್‌ಗೆ ಪ್ರಶಸ್ತಿ ದೊರೆತರೆ ಅದು ರಾಜ್ಯಕ್ಕೆ ಸಲ್ಲುವ ಗೌರವವಾಗುತ್ತದೆ. ಜನವರಿ 26ರೊಳಗೆ ತೀರ್ಮಾನ ಕೈಗೊಳ್ಳಬೇಕು. ಒಂದು ಪಕ್ಷ ರಾಜ್ಯ ಸರಕಾರ ಪ್ರಶಸ್ತಿ ನೀಡುವಂತೆ ಒತ್ತಡ ತರದಿದ್ದರೆ. ಸಿನೆಮಾ ನಟರು, ಸಾಹಿತಿಗಳು, ನಾಡಿನ ಜನತೆ, ಹೋರಾಟಗಾರರು, ಸಂಘ-ಸಂಸ್ಥೆಗಳು ಹೋರಾಟಕ್ಕೆ ಇಳಿಯಲಿವೆ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News