ಉಮೇಶ್ ಕತ್ತಿ ಕ್ಷಮಾಪಣೆಗೆ ದಿನೇಶ್ ಗುಂಡೂರಾವ್ ಆಗ್ರಹ

Update: 2018-12-27 13:58 GMT

ಬೆಂಗಳೂರು, ಡಿ.27: ಮುಂದಿನ 24 ಗಂಟೆಯೊಳಗೆ ಸಮ್ಮಿಶ್ರ ಸರಕಾರ ಪತನವಾಗುತ್ತದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಉಮೇಶ್ ಕತ್ತಿ ಇದೀಗ ಪ್ರತಿಕ್ರಿಯಿಸಬೇಕು ಅಥವಾ ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ನಗರದ ಗಾಂಧೀ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ 24 ಗಂಟೆಗಳೊಳಗೆ ಸಮ್ಮಿಶ್ರ ಸರಕಾರ ಬೀಳುತ್ತದೆ ಎಂದಿದ್ದರು. ಈಗ 24 ಗಂಟೆಯಾಗಿದೆ. ಸರಕಾರವೂ ಸುಭದ್ರವಾಗಿದೆ. ಆದರೆ, ಸುಮ್ಮನೇ ಅನಾವಶ್ಯಕ ಮಾತುಗಳಿಂದ ಕಾಲಹರಣ ಮಾಡುವುದು ಬಿಡಬೇಕು ಎಂದು ತಿಳಿಸಿದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಮೇಶ ಜಾರಕಿಹೊಳಿ ಆರಾಮವಾಗಿದ್ದಾರೆ. ಎರಡು ಮೂರು ದಿನಗಳ ನಂತರ ಹೊರಗಡೆ ಬಂದು ಪ್ರತಿಕ್ರಿಯೆ ನೀಡುತ್ತಾರೆ. ನಾನೇ ಅವರೊಂದಿಗೆ ಮಾತನಾಡಬೇಕು ಎಂದಿಲ್ಲ. ಸ್ನೇಹಿತರು ಎಲ್ಲರೂ ಮಾತನಾಡಿದ್ದಾರೆ ಎಂದರು.

ನೂತನ ಸಚಿವರಿಗೆ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಪರಮೇಶ್ವರ್ ನಡುವೆ ಮಾತಿನ ಚಕಮಕಿ ನಡೆದಿದೆ ಎಂಬ ಸುದ್ದಿ ಸುಳ್ಳು. ಸಭೆಯಲ್ಲಿ ಅವರ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಪತ್ರಿಕೆಗಳು ಸುಳ್ಳು ಸುದ್ದಿ ವರದಿ ಮಾಡಿವೆ. ತಪ್ಪಾಗಿ ಒಂದು ಮಾತು ನಡೆದಿಲ್ಲ. ಎಲ್ಲ ಸಚಿವರು ಹಾಗೂ ಶಾಸಕರು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ನಡೆದುಕೊಂಡು ಹೋಗುತ್ತಾರೆ. ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News