ಎಂ.ಬಿ.ಪಾಟೀಲ್‌ ಗೆ ಗೃಹ, ಎಂಟಿಬಿ ನಾಗರಾಜ್‌ ಗೆ ವಸತಿ ಖಾತೆ?

Update: 2018-12-27 15:02 GMT

ಬೆಂಗಳೂರು, ಡಿ.27: ರಾಜ್ಯ ಸಮ್ಮಿಶ್ರ ಸರಕಾರದ ಸಂಪುಟ ವಿಸ್ತರಣೆ ವೇಳೆ ನೂತನ ಸಚಿವರಾಗಿ ಡಿ.22ರಂದು ಪ್ರಮಾಣ ವಚನ ಸ್ವೀಕರಿಸಿದ ಎಂಟು ಮಂದಿಗೆ ಖಾತೆಗಳ ಹಂಚಿಕೆ ಅಂತಿಮಗೊಂಡಿರುವ ಮಾಹಿತಿ ಲಭ್ಯವಾಗಿದೆ.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಳಿಯಿದ್ದ ಗೃಹ ಖಾತೆಯನ್ನು ಎಂ.ಬಿ.ಪಾಟೀಲ್‌ ರಿಗೆ, ಯುವಜನ ಸೇವೆ ಹಾಗೂ ಕ್ರೀಡಾ ಖಾತೆಯನ್ನು ರಹೀಂ ಖಾನ್‌ ಗೆ, ಯು.ಟಿ.ಖಾದರ್ ಬಳಿಯಿದ್ದ ವಸತಿ ಖಾತೆಯನ್ನು ಎಂಟಿಬಿ ನಾಗರಾಜ್‌ಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಡಿ.ಕೆ.ಶಿವಕುಮಾರ್ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ತುಕಾರಾಂ, ರಾಜಶೇಖರ್‌ ಪಾಟೀಲ್ ಬಳಿಯಿದ್ದ ಮುಜರಾಯಿ ಹಾಗೂ ಕೆ.ಜೆ.ಜಾರ್ಜ್ ಬಳಿಯಿದ್ದ ಐಟಿ-ಬಿಟಿ ಖಾತೆಯನ್ನು ಪಿ.ಟಿ.ಪರಮೇಶ್ವರ್‌ನಾಯ್ಕಗೆ, ಆರ್.ವಿ. ದೇಶಪಾಂಡೆ ಬಳಿಯಿದ್ದ ಕೌಶಲ್ಯಾಭಿವೃದ್ಧಿ ಖಾತೆಯನ್ನು ಆರ್.ಬಿ.ತಿಮ್ಮಾಪುರ್‌ ರಿಗೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಮೇಶ್ ಜಾರಕಿಹೊಳಿ ಹಾಗೂ ಆರ್.ಶಂಕರ್‌ರನ್ನು ಸಂಪುಟದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ಅವರ ಬಳಿಯಿದ್ದ ಅರಣ್ಯ ಮತ್ತು ಪರಿಸರ ಖಾತೆಯನ್ನು ಸತೀಶ್ ಜಾರಕಿಹೊಳಿ ಹಾಗೂ ಪೌರಾಡಳಿತ ಖಾತೆಯನ್ನು ಸಿ.ಎಸ್.ಶಿವಳ್ಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಗೃಹ ಹಾಗೂ ಯುವಜನ ಸೇವಾ, ಕ್ರೀಡಾ ಖಾತೆಯನ್ನು ಕೈ ಬಿಟ್ಟಿರುವ ಡಾ.ಜಿ.ಪರಮೇಶ್ವರ್‌ಗೆ ಹೆಚ್ಚುವರಿಯಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಪಟ್ಟಿ ಇನ್ನಷ್ಟೇ ಬಿಡುಗಡೆಗೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News