ಯಾವ ಫಲಾನುಭವಿಗಳಿಗೂ ಕಲ್ಯಾಣ ಯೋಜನೆ ತಲುಪುತ್ತಿಲ್ಲ: ಬಿಬಿಎಂಪಿ ಸದಸ್ಯರ ಆಕ್ರೋಶ
ಬೆಂಗಳೂರು, ಡಿ.27: ಕಲ್ಯಾಣ ಕಾರ್ಯಕ್ರಮದಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವ ಯೋಜನೆಗಳು ಯಾವ ಫಲಾನುಭವಿಗಳಿಗೂ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಎಲ್ಲ ಸದಸ್ಯರು ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಸರ್ವ ಪಕ್ಷಗಳ ಮುಖಂಡರಿಗೂ ಉತ್ತರಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕಲ್ಯಾಣ ಕಾರ್ಯಕ್ರಮದಡಿ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟ ಅನುದಾನ ಬೇರೆ ಯಾವುದಾದರು ಯೋಜನೆಗೆ ಬಳಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಲ್ಯಾಣ ಕಾರ್ಯಕ್ರಮದ ಬಗ್ಗೆ ಮೊದಲು ಸಭೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ನರಸಿಂಹನಾಯಕ್, ಬಹುತೇಕ ಯೋಜನೆಗಳು ಬಡವರಿಗೆ ತಲುಪುತ್ತಿಲ್ಲ. ಮನೆ ನಿರ್ಮಾಣ ಮಾಡಿಕೊಳ್ಳುವ ಒಂಟಿ ಮನೆ ಯೋಜನೆಗೆ ಅಧಿಕಾರಿಗಳು ಸ್ಪಂದಿಸದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಸಮಯಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಇದೇ ರೀತಿ ಮುಂದುವರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತನಿಖೆಮಾಡುವಂತೆ ಎಸಿಬಿಗೆ ದೂರು ಸಲ್ಲಿಸಲಾಗುವುದು ಎಂದರು. ಅದಕ್ಕೆ ಮಾಜಿ ಮೇಯರ್ ಪದ್ಮಾವತಿ ದನಿಗೂಡಿಸಿ ಕಡತ ವಿಲೇವಾರಿ ಮಾಡುವ ಎಲ್ಲ ಅಧಿಕಾರಿಗಳಿಗೆ ಲಂಚ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸಕ್ತ ಸಾಲಿನಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ 750 ಕೋಟಿ ರೂ. ಮೀಸಲಿರಿಸಲಾಗಿದ್ದು, ಈಗಾಗಲೆ 232 ಕೋಟಿ ರೂ. ವೆಚ್ಚ ಮಾಡಲಾಗಿದೆ. ಉಳಿದ ಅನುದಾನವನ್ನೂ ಫಲಾನುಭವಿಗಳಿಗೆ ತಲುಪಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಶೇ.90 ರಷ್ಟು ಕಾರ್ಯಕ್ರಮಗಳ ಅನುಷ್ಠಾನದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರಕಾರ 2016-17ನೇ ಬಜೆಟ್‌ನಲ್ಲಿ ಘೋಷಿಸಿದಂತೆ 7,300 ಕೋಟಿ ರೂ.ಗಳಲ್ಲಿ 6,870 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ 5,628 ಕೋಟಿ ರೂ. ಮೊತ್ತವನ್ನು ಯೋಜನೆ ಅನುಷ್ಠಾನಕ್ಕೆ ವ್ಯಯಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಅದೇ ರೀತಿ 2017-18ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 2,491 ಕೋಟಿ ರೂ. ಅನುದಾನ ಘೋಷಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ರೂಪಿಸಿ, ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ. ಕ್ರಿಯಾ ಯೋಜನೆಯಂತೆ ಟೆಂಡರ್ ಕರೆದು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಅವಕಾಶಕ್ಕಾಗಿ ಬಾವಿಗಿಳಿದು ಧರಣಿ: ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರಿಸಲು ಆಯುಕ್ತರು ಮುಂದಾದಾಗ, ಲಗ್ಗೆರೆ ವಾರ್ಡ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ನನಗೆ ಮಾತನಾಡಲು ಅವಕಾಶ ಕೊಡಲೇಬೇಕು ಎಂದು ಪಟ್ಟು ಹಿಡಿದು ಕಣ್ಣೀರಾಕುವ ಜತೆಗೆ ಬಾವಿಗಿಳಿದು ಧರಣಿ ಮಾಡಲು ಮುಂದಾದರು. ನನಗೆ ಮಾತನಾಡಲು ಅವಕಾಶ ಕಲ್ಪಿಸಿಕೊಡಬೇಕು, ನನಗೆ ಅನ್ಯಾಯವಾಗುತ್ತಿದೆ ಎಂದರು. ಹಾಗ ಮಂಜುಳಾ ಅವರಿಗೆ ಪ್ರತಿಪಕ್ಷವೂ ಸಾಥ್ ನೀಡಿತು.
ಮೇಲ್ಸೇತುವೆಗೆ ಶಿವಕುಮಾರ ಸ್ವಾಮೀಜಿ ಹೆಸರು: ಯಶವಂತಪುರ ವೃತ್ತ(ಸಂವಿಧಾನ ವೃತ್ತ)ದಿಂದ ಕೆನ್ನಮೆಟಲ್ ಕಾರ್ಖಾನೆವರೆಗಿನ ರಸ್ತೆ ಹಾಗೂ ಗೊರಗುಂಟೆ ಪಾಳ್ಯದಿಂದ ಕೆನ್ನಮೆಟಲ್ ಕಾರ್ಖಾನೆಯ ಬಳಿ ಕೊನೆಗೊಳ್ಳುವ ಮೇಲುಸೇತುವೆಗೆ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೆಸರಿಡಲು ಪಾಲಿಕೆ ಸಭೆಯಲ್ಲಿ ತೀರ್ಮಾನಿಸಲಾಯಿತು.