‘ಪ್ರಾಜೆಕ್ಟ್ ಶಕ್ತಿ’ ಯೋಜನೆಯಡಿ 10.5 ಲಕ್ಷ ಜನ ನೋಂದಣಿ: ದಿನೇಶ್ ಗುಂಡೂರಾವ್

Update: 2018-12-27 16:37 GMT

ಬೆಂಗಳೂರು, ಡಿ.26: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆಶಯದಂತೆ ‘ಪ್ರಾಜೆಕ್ಟ್ ಶಕ್ತಿ’ ಯೋಜನೆಯಡಿ ನಮ್ಮ ರಾಜ್ಯದಲ್ಲಿ 10.50 ಲಕ್ಷ ಜನ ನೋಂದಣಿಯಾಗಿದ್ದಾರೆ. ಕನಿಷ್ಠ 20 ಲಕ್ಷ ಜನರನ್ನು ನೋಂದಣಿ ಮಾಡಿಸಬೇಕೆಂಬುದು ನಮ್ಮ ಗುರಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ತಿಳಿಸಿದರು.

ಗುರುವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪಾಜೆಕ್ಟ್ ಶಕ್ತಿ ವಿಫಲವಾಗಿದೆ. ರಾಹುಲ್‌ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂಬುದೆಲ್ಲ ಸತ್ಯಕ್ಕೆ ದೂರವಾದದ್ದು ಎಂದರು.

ಕಳೆದ ಮೂರು ತಿಂಗಳ ಹಿಂದೆ ಈ ಯೋಜನೆಯನ್ನು ನಾವು ಆರಂಭಿಸಿದೆವು. ಇಡೀ ದೇಶದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. 10.50 ಲಕ್ಷ ಜನ ನಮ್ಮ ಜೊತೆ ನೋಂದಣಿಯಾಗಿದ್ದಾರೆ. ಎರಡನೆ ಸ್ಥಾನದಲ್ಲಿ ರಾಜಸ್ಥಾನ(8.17 ಲಕ್ಷ), ನಂತರ ಮಧ್ಯಪ್ರದೇಶ(5.32 ಲಕ್ಷ), ತೆಲಂಗಾಣ(4.40 ಲಕ್ಷ), ಛತ್ತೀಸ್‌ಗಡ(4.08 ಲಕ್ಷ) ರಾಜ್ಯಗಳಿವೆ ಎಂದು ಅವರು ಹೇಳಿದರು.

ನಾವು ಪ್ರತಿನಿತ್ಯ 20 ರಿಂದ 30 ಸಾವಿರ ಜನರನ್ನು ನೋಂದಣಿ ಮಾಡಿಸುತ್ತಿದ್ದೇವೆ. ಒಂದು ಮೊಬೈಲ್ ಸಂಖ್ಯೆಯಿಂದ ಒಬ್ಬರು ಮಾತ್ರ ನೋಂದಣಿಯಾಗಬಹುದು. ಪಾರದರ್ಶಕವಾಗಿ ಈ ಯೋಜನೆಯನ್ನು ಮುಂದುವರೆಸುತ್ತಿದ್ದೇವೆ. ಶೇ.77ರಷ್ಟು ಬೂತ್‌ಗಳಲ್ಲಿ ನಮಗೆ ಕಾರ್ಯಕರ್ತರು ಜೋಡಣೆ ಆಗಿದ್ದಾರೆ ಎಂದು ಅವರು ತಿಳಿಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 1.12 ಲಕ್ಷ ಜನ ನೋಂದಣಿಯಾಗಿದ್ದಾರೆ. ರಾಜ್ಯದಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲೆ ಯಶವಂತಪುರ ಪ್ರಥಮ ಸ್ಥಾನದಲ್ಲಿದೆ. 58 ವಿಧಾನಸಭಾ ಕ್ಷೇತ್ರಗಳಲ್ಲಿ 5 ಸಾವಿರಕ್ಕಿಂತ ಹೆಚ್ಚು ಸದಸ್ಯರು ನೋಂದಣಿಯಾಗಿದ್ದಾರೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಭವಿಷ್ಯದಲ್ಲಿ ಪಕ್ಷದಲ್ಲಿ ಸ್ಥಾನಮಾನ ಪಡೆಯಲು ಬಯಸುವವರಿಗೆ ಶಕ್ತಿ ಯೋಜನೆಯಡಿ ಎಷ್ಟು ಮಂದಿಯನ್ನು ನೋಂದಣಿ ಮಾಡಿಸಲಾಗಿದೆ ಎಂಬುದನ್ನು ಮಾನದಂಡವನ್ನಾಗಿಸಲಾಗುತ್ತದೆ. ಶಕ್ತಿ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳುವವರ ಜೊತೆ ರಾಹುಲ್‌ ಗಾಂಧಿ ನೇರವಾಗಿ ಸಂಪರ್ಕ ಸಾಧಿಸುತ್ತಾರೆ ಎಂದು ಅವರು ತಿಳಿಸಿದರು.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತು ರಾಹುಲ್‌ ಗಾಂಧಿ ಕಾರ್ಯಕರ್ತರಿಂದ ನೇರವಾಗಿ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಂಡಿದ್ದರು. ನಾಯಕರು ಹಾಗೂ ಬೂತ್‌ಮಟ್ಟದ ಕಾರ್ಯಕರ್ತರ ನಡುವೆ ಇದು ಸಂಪರ್ಕ ಕೊಂಡಿಯಾಗಿದೆ ಎಂದು ಅವರು ಹೇಳಿದರು.

ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕಳಪೆ ಸಾಧನೆಯಾಗಿದೆ. ಪ್ರಮುಖವಾಗಿ ಕೋಲಾರ, ಚಿಕ್ಕಮಗಳೂರು, ಕೊಪ್ಪಳ ಜಿಲ್ಲೆಗಳು ಬಹಳ ಹಿಂದುಳಿದಿವೆ. ಡಿ.31ರ ನಂತರ ನಾವು ಈ ಬಗ್ಗೆ ಪರಿಶೀಲನೆ ನಡೆಸಲಿದ್ದೇವೆ. ಆನಂತರ, ಕಳಪೆ ಸಾಧನೆಯಾಗಿರುವ ಕ್ಷೇತ್ರಗಳಲ್ಲಿ ಈ ಯೋಜನೆ ಯಶಸ್ಸಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಒಂದು ಬೂತ್‌ಗೆ ಕನಿಷ್ಠ 20 ಮಂದಿ ಶಕ್ತಿ ಸದಸ್ಯರು ಇರಬೇಕು ಎಂಬುದು ನಮ್ಮ ಬಯಕೆ. ವೈಯಕ್ತಿಕವಾಗಿ ವಿಶೇಷ ಆಸಕ್ತಿ ವಹಿಸಿ 25ಕ್ಕೂ ಹೆಚ್ಚು ಮುಖಂಡರು 5 ಸಾವಿರ ದಿಂದ 24 ಸಾವಿರ ಸದಸ್ಯರನ್ನು ಶಕ್ತಿಗೆ ನೋಂದಾಯಿಸಿದ್ದಾರೆ. 47 ಕಾರ್ಯಕರ್ತರು ವೈಯಕ್ತಿಕವಾಗಿ ಎರಡು ಸಾವಿರದಿಂದ ಐದು ಸಾವಿರ ಸದಸ್ಯರನ್ನು ನೋಂದಣಿ ಮಾಡಿಸಿದ್ದಾರೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News