ಪೆಟ್ರೋಲ್ ಬಂಕ್‌ಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಬಂಧನ

Update: 2018-12-27 16:51 GMT

ಬೆಂಗಳೂರು, ಡಿ.27: ಪೆಟ್ರೋಲ್ ಬಂಕ್‌ಗಳಿಗೆ ಮಧ್ಯರಾತ್ರಿ ನುಗ್ಗಿ ಸಿಬ್ಬಂದಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಹಣ, ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ ಎಂಟು ಮಂದಿ ದರೋಡೆಕೋರರ ಗ್ಯಾಂಗ್‌ನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬ್ಯಾಟರಾಯನಪುರ ನಿವಾಸಿ ಅಭಿಷೇಕ್, ತಲಘಟ್ಟಪುರದ ರಮೇಶ್, ಬಾಪೂಜಿನಗರದ ಚೇತನ್, ಸುನೀಲ್‌ ಕುಮಾರ್, ತೇಜಸ್, ದೊಡ್ಡಬಸ್ತಿಯ ಉದಯ್, ಸಂಜಯ್‌ ಕುಮಾರ್, ಮದ್ದೂರು ತಾಲೂಕಿನ ಹೊಸಕೆರೆಹಳ್ಳಿಯ ಯೋಗಾನಂದ ಎಂದು ಗುರುತಿಸಲಾಗಿದೆ. ಈ ಎಲ್ಲ ಆರೋಪಿಗಳು ಮುತ್ತೂಟ್ ಫೈನಾನ್ಸ್ ಕಳವಿಗೆ ಸಂಚು ರೂಪಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ಕಾರುಗಳನ್ನು ಕಳ್ಳತನ ಮಾಡಿ ನಂಬರ್ ಫ್ಲೇಟ್ ಬದಲಿಸಿ ಮಂಕಿ ಕ್ಯಾಪ್ ಧರಿಸಿ ಪೆಟ್ರೋಲ್ ಬಂಕ್‌ಗಳನ್ನು ಗುರಿಯಾಗಿಸಿಕೊಂಡು ಆರೋಪಿಗಳು ದರೋಡೆ ನಡೆಸುತ್ತಿದ್ದರು. ರಾಮನಗರ ಜಿಲ್ಲೆಯಲ್ಲದೇ ಮೈಸೂರು, ಬೆಂಗಳೂರು ಸೇರಿ ರಾಜ್ಯದ 12 ಕಡೆಗಳಲ್ಲಿ ದರೋಡೆ ನಡೆಸಿದ್ದ ಬಂಧಿತರಿಂದ 3 ಕಾರು, 1 ಬೈಕ್, ಲಾಂಗ್, ಮಚ್ಚು, ಡ್ರಾಗರ್, ಪೆಪ್ಪರ್ ಸ್ಪ್ರೇ, ಮಂಕಿ ಕ್ಯಾಪ್, ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿಚಾರಣೆ ವೇಳೆ ರಾಜ್ಯದ ವಿವಿಧೆಡೆ ನಡೆಸಿದ್ದ ಪೆಟ್ರೋಲ್ ಬಂಕ್‌ಗಳ 12 ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News