ಪ್ರೊ ಕಬಡ್ಡಿ: ಪ್ಯಾಂಥರ್ಸ್‌ಗೆ ತಿವಿದ ಬೆಂಗಳೂರು ಬುಲ್ಸ್

Update: 2018-12-27 19:08 GMT

ಕೋಲ್ಕತಾ, ಡಿ.27: ತಮ್ಮ ಕೊನೆಯ ಲೀಗ್‌ನಲ್ಲಿ ಮುಖಾಮುಖಿಯಾದ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಬೆಂಗಳೂರು ಬುಲ್ಸ್ ಮಧ್ಯೆ ಭಾರೀ ಹೋರಾಟ ನಡೆದರೂ ಅಂತಿಮವಾಗಿ ಬೆಂಗಳೂರು ತಂಡ 40-32 ಅಂಕಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ವಿಜೇತ ತಂಡವು 22 ಪಂದ್ಯಗಳಿಂದ 78 ಅಂಕ ಗಳಿಸಿ ಬಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದೆ.

ಇಲ್ಲಿಯ ನೇತಾಜಿ ಸುಭಾಶ್ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಪರ ಪವನ್ ಕುಮಾರ್ ಅತ್ಯಧಿಕ 16 ಅಂಕ ಗಳಿಸಿದರೆ , ರೋಹಿತ್ ಕುಮಾರ್ 5 ಅಂಕ ಗಳಿಸಿ ಉತ್ತಮ ಸಾಥ್ ನೀಡಿದರು. ಪಿಂಕ್ ಪ್ಯಾಂಥರ್ಸ್ ಪರ ದೀಪಕ್ ಹೂಡಾ ಅತ್ಯಧಿಕ 13 ಅಂಕ ಗಳಿಸಿದರೆ, ಸೆಲ್ವಮಣಿ 8 ಅಂಕ ಗಳಿಸಿದರು.

 ಈ ಸೋಲಿನೊಂದಿಗೆ ಜೈಪುರ ತಂಡ ಬಿ ಗುಂಪಿನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಡಿ.31ರಂದು ನಡೆಯುವ ಪ್ರಥಮ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಳೂರು ತಂಡ ಗುಜರಾತ್ ಫಾರ್ಚುನ್‌ಜೈಂಟ್ಸ್‌ನ್ನು ಎದುರಿಸಲಿದೆ. ಗುರುವಾರ ನಡೆದ ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾ ತಂಡ ಬೆಂಗಾಲ್ ವಾರಿಯರ್ಸ್‌ನ್ನು 41-25 ಅಂಕಗಳ ಅಂತರದಿಂದ ಮಣಿಸಿತು. ಯುಪಿ ಪರ ರಿಶಾಂಕ್ ದೇವಾಡಿಗ ಅತ್ಯಧಿಕ 9 ಅಂಕ ಗಳಿಸಿದರೆ, ಬೆಂಗಾಲ್ ವಾರಿಯರ್ಸ್ ಪರ ಆದರ್ಶ್ ಡಿ. 4 ಅಂಕ ಹಾಗೂ ಲೀ ಜಾಂಗ್ ಕುನ್ ಮತ್ತು ಅಮಿತ್ ನಗರ್ ತಲಾ 3 ಅಂಕ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News