ನಿಮ್ಮ ಆರೋಗ್ಯವನ್ನು ತಿಳಿದುಕೊಳ್ಳಲು ಐದು ಸರಳ ಪರೀಕ್ಷೆಗಳು ಇಲ್ಲಿವೆ

Update: 2018-12-28 12:53 GMT

ನೀವು ಆಗಾಗ್ಗೆ ಆಸ್ಪತ್ರೆಗಳಿಗೆ ಭೇಟಿ ನೀಡಲು ಬಯಸುವುದಿಲ್ಲವಾದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಶರೀರವು ಏನನ್ನು ಹೇಳಲು ಪ್ರಯತ್ನಿಸುತ್ತಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳುವುದೇ ಇಲ್ಲ. ನಮ್ಮ ಆರೋಗ್ಯದ ಬಗ್ಗೆ ನಮ್ಮ ಶರೀರವು ಬಹಳಷ್ಟನ್ನು ಹೇಳುತ್ತದೆ,ಆದರೆ ನಾವು ಅದನ್ನು ನಿರ್ಲಕ್ಷಿಸುವುದೇ ಹೆಚ್ಚು. ನಿಮಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯಿದ್ದರೆ ನೀವು ವೈದ್ಯರಲ್ಲಿ ತೆರಳಬೇಕಾದ ಅಗತ್ಯವಿದೆಯೇ ಎನ್ನುವುದನ್ನು ಸೂಚಿಸುವ ಈ ಆರೋಗ್ಯ ಪರೀಕ್ಷೆಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳಿ.....

ನಿಮ್ಮ ಹೃದಯ

ಹೃದಯವು ನಮ್ಮ ಶರೀರದ ಪ್ರಮುಖ ಅಂಗವಾಗಿದ್ದು ,ಅದರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಹೃದಯದ ಆರೋಗ್ಯವನ್ನು ತಿಳಿದುಕೊಳ್ಳಲು ಸರಳ ಪರೀಕ್ಷಾ ವಿಧಾನವಿಲ್ಲಿದೆ. ಐದು ನಿಮಿಷಗಳ ವರೆಗೆ ಅಲುಗಾಡದೆ ಕುಳಿತುಕೊಳ್ಳಿ. ಬಳಿಕ ನಿಮ್ಮ ಬೆರಳುಗಳನ್ನು ಮಣಿಗಂಟಿನ ಮೇಲಿರಿಸಿ ನಾಡಿ ಬಡಿತವನ್ನು ಪರೀಕ್ಷಿಸಿ. ಒಂದು ನಿಮಿಷದ ಅವಧಿಯಲ್ಲಿ ನಿಮ್ಮ ನಾಡಿ ಬಡಿತಗಳನ್ನು ಎಣಿಸಿ. ನಾಡಿ ಬಡಿತವು ಹೃದಯ ಬಡಿತವನ್ನು ನಿಖರವಾಗಿ ಸೂಚಿಸುತ್ತದೆ. ಅಂದರೆ ನಿಮ್ಮ ನಾಡಿಮಿಡಿತದ ಸಂಖ್ಯೆ ಒಂದು ನಿಮಿಷದಲ್ಲಿ 70 ಆಗಿದ್ದರೆ ಹೃದಯವೂ ಅಷ್ಟೇ ಬಾರಿ ಬಡಿದುಕೊಂಡಿರುತ್ತದೆ. ವಯಸ್ಕರಲ್ಲಿ ಮತ್ತು 10 ವರ್ಷದ ಮೇಲಿನ ಮಕ್ಕಳಲ್ಲಿ ಸಾಮಾನ್ಯವಾಗಿ ಒಂದು ನಿಮಿಷದ ಅವಧಿಯಲ್ಲಿ 60ರಿಂದ 100 ಬಾರಿ ಹೃದಯವು ಬಡಿದುಕೊಳ್ಳುತ್ತದೆ. ನಿಮ್ಮ ಹೃದಯಬಡಿತವು ಈ ವ್ಯಾಪಿಯಲ್ಲಿಲ್ಲದಿದ್ದರೆ ನಿಮ್ಮ ರಕ್ತದೊತ್ತಡದಲ್ಲಿ ಏರುಪೇರುಗಳಿವೆ ಎನ್ನುವುದನ್ನು ಅದು ಸೂಚಿಸುತ್ತದೆ. ಜೊತೆಗೆ ನೀವು ವೈದ್ಯರ ಬಳಿಗೆ ತೆರಳಲು ಇದು ಸಕಾಲ ಎನ್ನುವುದನ್ನೂ ಅದು ಸೂಚಿಸುತ್ತದೆ.

ನಮನೀಯತೆ

ನೆಲದ ಮೇಲೆ ಕುಳಿತುಕೊಂಡು ನಿಮ್ಮ ಕಾಲುಗಳನ್ನು ಎದುರಿಗೆ ನೇರವಾಗಿ ಚಾಚಿರಿ. ಈಗ ಮುಂದಕ್ಕೆ ಬಾಗಿ ನಿಮ್ಮ ಎರಡೂ ಕೈಗಳಿಂದ ಪಾದಗಳನ್ನು ಮುಟ್ಟಲು ಪ್ರಯತ್ನಿಸಿ. ಯಾವುದೇ ಕಷ್ಟವಿಲ್ಲದೆ ನೀವು ಈ ಕೆಲಸವನ್ನು ಯಶಸ್ವಿಯಾಗಿ ಮಾಡಿದರೆ ನಿಮ್ಮ ಶರೀರವು ಅತ್ಯುತ್ತಮ ಸ್ಥಿತಿಯಲ್ಲಿದೆ ಎಂದು ಅರ್ಥ. ಈ ಕೆಲಸ ಕಠಿಣವಾಗಿದ್ದರೆ ನಿಮ್ಮ ಶರೀರಕ್ಕೆ ವ್ಯಾಯಾಮದ ಅಗತ್ಯವಿದೆ ಎನ್ನುವುದನ್ನು ಸೂಚಿಸುತ್ತದೆ ಮತ್ತು ಈಜು,ಜಾಗಿಂಗ್,ಯೋಗ,ಭಾರ ಎತ್ತುವಿಕೆಯಂತಹ ದೈಹಿಕ ವ್ಯಾಯಾಮಗಳನ್ನು ಮಾಡುವುದನ್ನು ರೂಢಿಸಿಕೊಳ್ಳುವುದು ಅಗತ್ಯವಾಗುತ್ತದೆ. ಇದು ನಿಮ್ಮ ಶರೀರದ ಫ್ಲೆಕ್ಸಿಬಿಲಿಟಿ ಅಥವಾ ನಮನೀಯತೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಕೀಲುಗಳು ದುರ್ಬಲಗೊಳ್ಳುವ ಅಪಾಯಗಳನ್ನು ತಗ್ಗಿಸಲು ನೆರವಾಗುತ್ತದೆ.

►ದಾರ್ಢ್ಯತೆ

ನೀವು ಯಾವುದೇ ದೈಹಿಕ ವ್ಯಾಯಾಮವನ್ನು ಮಾಡುವ ಮುನ್ನ ನಿಮ್ಮ ದಾರ್ಢ್ಯತೆ ಅಥವಾ ತಾಕತ್ತಿನಂತಹ ಕೆಲವು ಅಂಶಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ಹಿಂದೆ ಸೂಚಿಸಿರುವಂತೆ ನಿಮ್ಮ ನಾಡಿ ಬಡಿತವನ್ನು ಎಣಿಸಿಕೊಳ್ಳಿ. ಸ್ಕಿಪಿಂಗ್ ರೋಪ್ ಬಳಸಿ 50 ಸ್ಕಿಪ್‌ಗಳನ್ನು ಮಾಡಿ. ಈಗ ಮತ್ತೆ ನಾಡಿ ಬಡಿತವನ್ನು ಎಣಿಸಿ. ಶೇ.25ರಷ್ಟು ವ್ಯತ್ಯಾಸವಿದ್ದರೆ ಅದು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ ವ್ಯತ್ಯಾಸವು 30ರಿಂದ 50ರಷ್ಟಿದ್ದರೆ ನಿಮ್ಮ ಹೃದಯರಕ್ತನಾಳ ವ್ಯವಸ್ಥೆ ದುರ್ಬಲವಾಗಿದೆ ಎಂದು ಅರ್ಥ. ನಾಡಿ ಬಡಿತಗಳ ವ್ಯತ್ಯಾಸ 50ನ್ನು ದಾಟಿದ್ದರೆ ನೀವು ವೈದ್ಯರನ್ನು ಭೇಟಿಯಾಗಿ ಸೂಕ್ತ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ.

ಉಸಿರಾಟ ವ್ಯವಸ್ಥೆ

ನಿಮ್ಮ ಉಸಿರಾಟ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ನೆಲದ ಮೇಲೆ ಕುಳಿತುಕೊಂಡು ಕೆಲವು ಬಾರಿ ದೀರ್ಘವಾಗಿ ಉಸಿರಾಡಿಸಿ. ಈಗ ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು ಅದನ್ನು ತಡೆಹಿಡಿಯಿರಿ. ಈಗ ನಿಮ್ಮ ಕೈಯಿಂದ ಮೂಗನ್ನು ಮುಚ್ಚಿಕೊಳ್ಳಿ ಮತ್ತು ಎಷ್ಟು ಸಮಯದವರೆಗೆ ಉಸಿರನ್ನು ಹಿಡಿದಿಟ್ಟುಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ ಎನ್ನುವುದನ್ನು ಲೆಕ್ಕ ಹಾಕಿ. ಆರೋಗ್ಯಯುತವಾಗಿರುವ ಸಾಮಾನ್ಯ ವ್ಯಕ್ತಿಗೆ ಕನಿಷ್ಠ 25ರಿಂದ 40 ಸೆಕೆಂಡ್‌ಗಳ ಕಾಲ ಉಸಿರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇಷ್ಟು ಅವಧಿಗೆ ಉಸಿರನ್ನು ಹಿಡಿದಿಟ್ಟುಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ ನೀವು ವ್ಯೆದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ.

ಭಂಗಿ

ನಿಮ್ಮ ಸಹಜ ನಿಲುವಿನಲ್ಲಿ ನಿಂತುಕೊಳ್ಳಿ ಮತ್ತು ನಿಮ್ಮ ಭಂಗಿಯನ್ನು ಪರಿಶೀಲಿಸುವಂತೆ ಹತ್ತಿರವಿದ್ದವರಿಗೆ ಸೂಚಿಸಿ. ಅದು 45 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಬಗ್ಗಿದ್ದರೆ ಅದು ನಿಮ್ಮ ಬೆನ್ನುಮೂಳೆಯ ವಕ್ರತೆಯನ್ನು ಸೂಚಿಸುತ್ತದೆ. ಇಂತಹ ಸಂದರ್ಭದಲ್ಲಿ ನೀವು ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ. ನಿಮ್ಮ ಭಂಗಿಯಲ್ಲಿ ವ್ಯತ್ಯಾಸವಿದ್ದರೆ ಅದು ಯಾವಾಗಲೂ ಗಂಭೀರ ಆರೋಗ್ಯ ಸ್ಥಿತಿಯನ್ನೇ ಸೂಚಿಸುತ್ತದೆ ಎಂದೇನಿಲ್ಲ. ಅದು ಯಾವುದೇ ಬದಲಾವಣೆಗಳಿರದ ನಿಮ್ಮ ಜೀವನಶೈಲಿಯ ಪರಿಣಾಮವಾಗಿರಬಹುದು. ಇಂತಹ ಪ್ರಕರಣದಲ್ಲಿ ನೀವು ಯಾವಾಗಲೂ,ವಿಶೇಷವಾಗಿ ಕೆಲಸ ಅಥವಾ ವ್ಯಾಯಾಮ ಮಾಡುವಾಗ ನಿಮ್ಮ ಬೆನ್ನನ್ನು ನೇರವಾಗಿಸಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಇದು ಆರೋಗ್ಯ ಸಮಸ್ಯೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯರನ್ನು ಭೇಟಿಯಗುವುದು ಜಾಣತನವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News