ಆನ್‌ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆಯಿರಲಿ,ಅವುಗಳಿಂದ ಪಾರಾಗಲು ಮಾರ್ಗಗಳು ಇಲ್ಲಿವೆ

Update: 2018-12-28 12:56 GMT

ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆಗನ್ನು ಮಾಡಿ ಬಣ್ಣದ ಮಾತುಗಳನ್ನಾಡಿ ಬ್ಯಾಂಕ್‌ಖಾತೆಗಳ ವಿವರಗಳು,ಕಾರ್ಡ್ ವಿವರಗಳನ್ನು ಪಡೆದುಕೊಂಡು ಹಣವನ್ನು ಲಪಟಾಯಿಸುವುದು ಈಗೀಗ ಮಾಮೂಲಾಗಿಬಿಟ್ಟಿದೆ. ಜನರು ನಿತ್ಯವೂ ಎಂಬಂತೆ ಸಂಭವಿಸುವ ಇಂತಹ ವಂಚನೆಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿಕೊಂಡಿದ್ದರೂ ವಂಚಕರ ಬಲೆಗೆ ಬೀಳುತ್ತಲೇ ಇದ್ದಾರೆ. ಇಂತಹ ಕೆಲವು ವಂಚನೆಗಳು ಮತ್ತು ಅವುಗಳಿಗೆ ಬಲಿಯಾಗುವುದನ್ನು ತಪ್ಪಿಸಿಕೊಳ್ಳಲು ಕೆಲವು ಮಾರ್ಗಗಳ ಬಗ್ಗೆ ಮಾಹಿತಿಗಳಿಲ್ಲಿವೆ.

►ಐಡೆಂಟಿಟಿ ಥೆಫ್ಟ್ ಫ್ರಾಡ್

ಐಡೆಂಟಿಟಿ ಥೆಫ್ಟ್ ಫ್ರಾಡ್ ಅಥವಾ ಗುರುತು ಕಳವು ವಂಚನೆಯು ಅತ್ಯಂತ ಸಾಮಾನ್ಯ ವಿಧದ ವಂಚನೆಯಾಗಿದೆ. ವಂಚಕ ದೂರವಾಣಿ ಕರೆಗಳನ್ನು ಮಾಡಿ ತಾನು ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಸಂಸ್ಥೆಯ ಅಧಿಕಾರಿಯೆಂದು ಹೇಳಿಕೊಂಡು ಮೋಸದಿಂದ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡು ಅವುಗಳನ್ನು ತನ್ನ ವಂಚಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾನೆ. ಇಂತಹ ಮಾಹಿತಿಗಳನ್ನು ಪಡೆದುಕೊಂಡು ಆತ ನಮ್ಮ ನಕಲಿ ಸಹಿಗಳನ್ನು ಮಾಡಿ ನಮ್ಮ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು,ನಮ್ಮ ಹೆಸರಿನಲ್ಲಿ ಸಾಲಕ್ಕೂ ಅರ್ಜಿ ಸಲ್ಲಿಸಬಹುದು. ಇಂತಹ ವಂಚನೆಗಳು ಸಂಭವಿಸಿದಾಗ ಆರ್‌ಬಿಐ ನಿಗದಿಪಡಿಸಿರುವ ಅವಧಿಯೊಳಗೆ ದೂರು ಸಲ್ಲಿಸಿದರೆ ಕೆಲವು ಪ್ರಕರಣಗಳಲ್ಲಿ ನಷ್ಟದ ಪ್ರಮಾಣವನ್ನು ಸೀಮಿತಗೊಳಿಸಿಕೊಳ್ಳಬಹುದು.

ನಿಮಗೆ ಅನಪೇಕ್ಷಿತ ಇ-ಮೇಲ್ ಬಂದಿದ್ದರೆ ಅದರಲ್ಲಿಯ ಯಾವುದೇ ಕೊಂಡಿಯನ್ನು ಕ್ಲಿಕ್ಕಿಸಬೇಡಿ ಅಥವಾ ಕಸ್ಟಮರ್ ಐಡಿ,ಇಂಟರ್ನೆಟ್ ಪಿನ್,ಕ್ರೆಡಿಟ್/ಡೆಬಿಟ್ ಕಾರ್ಡ್ ನಂಬರ್,ಎಕ್ಸಪೈರಿ ದಿನಾಂಕ ಮತ್ತು ಸಿವಿವಿ ನಂಬರ್ ಇತ್ಯಾದಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಲ್ಲದೆ ಯಾವುದೇ ಶಂಕಾಸ್ಪದ ನಡವಳಿಕೆಯನ್ನು ಗುರುತಿಸಲು ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಸ್ಟೇಟ್‌ಮೆಂಟ್ ಮತ್ತು ವಹಿವಾಟು ವಿವರಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಮುಖ್ಯವಾಗುತ್ತದೆ. ಆನ್‌ಲೈನ್‌ನಲ್ಲಿ ಹಣಕಾಸು ವಹಿವಾಟುಗಳನ್ನು ನಡೆಸುವಾಗ ಸಾಧ್ಯವಿದ್ದಷ್ಟು ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೊಕಾಲ್ ಸೆಕ್ಯುರ್(ಎಚ್‌ಟಿಟಿಪಿಎಸ್) ವೆಬ್‌ಸೈಟ್‌ಗಳನ್ನೇ ಬಳಸಿ.

►ಸಿಂಥೆಟಿಕ್ ಐಡೆಂಟಿಟಿ ಫ್ರಾಡ್

ಇಲ್ಲಿ ವಂಚಕ ಬ್ಯಾಂಕಿನಿಂದ ಸಾಲ ಪಡೆಯಲು,ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಇತ್ಯಾದಿಗಳಿಗಾಗಿ ಸುಳ್ಳು ವೈಯಕ್ತಿಕ ಮಾಹಿತಿಗಳು ಮತ್ತು ನಮ್ಮ ಕಾನೂನುಬದ್ಧ ವೈಯಕ್ತಿಕ ಮಾಹಿತಿಗಳನ್ನು ಸೇರಿಸಿ ಬಳಸಿಕೊಳ್ಳುತ್ತಾನೆ. 2018,ಜನರಿಯಲ್ಲಿ ಮುಂಬೈ ನಿವಾಸಿ ಅನುಜ್ ಠಕ್ಕರ್ ಅವರಿಗೆ ಆದ ವಂಚನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ವಿಮಾ ಕಂಪನಿಯಲಿನ್ಲ ತನ್ನ ಮೂಲದ ಮೂಲಕ ವಂಚಕ ಠಕ್ಕರ್ ಅವರ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡಿದ್ದ. ಬಳಿಕ ವಿಮಾ ಪಾಲಿಸಿಗಾಗಿ ಅರ್ಜಿ ಸಲ್ಲಿಸಿ,ನಕಲಿ ಗುರುತು ಸೃಷ್ಟಿಸಿ ಹೊಸ ಬ್ಯಾಂಕ್‌ಖಾತೆಯನ್ನು ತೆರೆದಿದ್ದ. ಅಲ್ಲಿ ಠಕ್ಕರ್ ಹೆಸರಿನಲ್ಲಿ ಪಡೆದಿದ್ದ ವಿಮಾ ಪಾಲಿಸಿಯ ಆಧಾರದಲ್ಲಿ 1.5 ಲ.ರೂ.ಸಾಲವನ್ನು ಪಡೆದಿದ್ದ. ಈ ಸಾಲದ ಮೊತ್ತ ವಿಮಾ ಕಂಪನಿಯ ದಾಖಲೆಗಳಲ್ಲಿ ಠಕ್ಕರ್ ಹೆಸರಿನೆದುರು ದಾಖಲಾಗಿತ್ತು. ಈ ವಂಚನೆ ಠಕ್ಕರ್‌ಗೆ ಗೊತ್ತಾಗುವಾಗ ಆರು ತಿಂಗಳುಗಳೇ ಕಳೆದುಹೋಗಿದ್ದವು!

 ಇಂತಹ ವಂಚನೆಗೆ ಬಲಿಯಾಗದಿರಲು ಆಗಾಗ್ಗೆ ಕ್ರೆಡಿಟ್ ರಿಪೋರ್ಟ್ ಮತ್ತು ಕ್ರೆಡಿಟ್ ಸ್ಕೋರ್‌ಗಳನ್ನು ಪರಿಶೀಲಿಸುತ್ತಿರಬೇಕು. ಏನಾದರೂ ವಂಚಕ ವಹಿವಾಟು ಅಥವಾ ಅಸಂಗತೆಗಳು ಕಂಡುಬಂದರೆ ತಕ್ಷಣವೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ತಿಳಿಸಬೇಕು. ಅಲ್ಲದೆ ವೈಯಕ್ತಿಕ ಮಾಹಿತಿಗಳು ಅಥವಾ ಪಾನ್, ಪಾಸ್‌ಪೋರ್ಟ್,ಆಧಾರ್ ಇತ್ಯಾದಿ ಅಧಿಕೃತ ಗುರುತಿನ ದಾಖಲೆಗಳನ್ನು ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವಾಗ ತುಂಬ ಜಾಗ್ರತೆ ವಹಿಸಬೇಕು.

►ಅಕೌಂಟ್ ಟೇಕ್‌ಓವರ್ ಫ್ರಾಡ್

ಇಂತಹ ವಂಚನೆ ಪ್ರಕರಣಗಳಲ್ಲಿ ವಂಚಕ ನಮ್ಮ ಲಾಗಿನ್ ಮಾಹಿತಿಗಳನ್ನು ಕದ್ದು ವಿಶ್ವಾಸಿ ಗ್ರಾಹಕರಂತೆ ಸೋಗು ಹಾಕಿ ನಮ್ಮ ಆನ್‌ಲೈನ್ ಖಾತೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ. ಆತ ನಮ್ಮ ಖಾತೆಯ ವಿವರಗಳಲ್ಲಿ ಸಣ್ಣ ಬದಲಾವಣೆಯನ್ನು ಮಾಡುತ್ತಾನೆ,ಹೊಸ ಬಳಕೆದಾರನನ್ನು ಸೇರಿಸುತ್ತಾನೆ ಆಥವಾ ಇನ್ನೊಂದು ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಾನೆ. ನಂತರ ವಿಳಂಬಿಸದೆ ಅನಧಿಕೃತ ಖರೀದಿಗಳನ್ನು ನಡೆಸುತ್ತಾನೆ ಅಥವಾ ನಮ್ಮ ಖಾತೆ/ಕಾರ್ಡ್ ಬಳಸಿ ಹಣವನ್ನು ತೆಗೆಯುತ್ತಾನೆ.

ಇದನ್ನು ತಪ್ಪಿಸಲು ನೆಟ್ ಬ್ಯಾಂಕಿಗ್/ಕಾರ್ಡ್‌ಗಳ ಮೂಲಕ ವಹಿವಾಟುಗಳಿಗೆ ಎರಡು ಹಂತಗಳ ದೃಢೀಕರಣ ಪ್ರಕ್ರಿಯೆಯನ್ನು ಬಳಸಬೇಕು. ಅಲ್ಲದೆ ಮಾಸಿಕ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನೂ ಪುನರ್‌ಪರಿಶೀಲಿಸಬೇಕು.

* ಕಾರ್ಡ್-ನಾಟ್-ಪ್ರೆಸೆಂಟ್ ಫ್ರಾಡ್

   ಈ ವಂಚನೆಯನ್ನು ಎರಡು ವಿಧಗಳಲ್ಲಿ ನಡೆಸಬಹುದು. ಅತ್ಯಂತ ಸಾಮಾನ್ಯ ವಿಧಾನವೆಂದರೆ ವಂಚಕ ನಮಗೆ ನೆರವಾಗುವ ಸೋಗಿನಲ್ಲಿ ನಮ್ಮ ಕಾರ್ಡ್ ವಿವರಗಳನ್ನು ಪಡೆಯಲು ಮೋಸದ ಇ-ಮೇಲ್ ಕಳುಹಿಸುತ್ತಾನೆ. ಇನ್ನೊಂದು ವಿಧಾನದಲ್ಲಿ ವಂಚಕ ನಮ್ಮ ಕಳವಾದ/ಕ್ಲೋನ್ ಮಾಡಲಾದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ವಹಿವಾಟುಗಳನ್ನು ನಡೆಸುತ್ತಾನೆ. ಎಟಿಎಂ ಯಂತ್ರಗಳಲ್ಲಿ ಸ್ಕಿಮಿಂಗ್ ಮಷಿನ್‌ಗಳ ಬಳಕೆ ಮತ್ತು ಪಿನ್ ಸಂಖ್ಯೆಯನ್ನು ದಾಖಲಿಸಿಕೊಳ್ಳಲು ಕ್ಯಾಮರಾಗಳ ಬಳಕೆ ವಂಚಕನಿಗೆ ನಮ್ಮ ವಿವರಗಳನ್ನು ಪಡೆಯಲು ಮತ್ತು ತದ್ರೂಪಿ ಕಾರ್ಡ್ ಸೃಷ್ಟಿಸಲು ನೆರವಾಗುತ್ತವೆ.

 ಇದರಿಂದ ಪಾರಾಗಲು ಶಂಕಾಸ್ಪದ ಇ-ಮೇಲ್‌ಗಳೊಂದಿಗೆ ವೈಯಕ್ತಿಕ ಮತ್ತು ಹಣಕಾಸು ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. ಸುರಕ್ಷಿತ ಬ್ಯಾಂಕಿಂಗ್ ಪದ್ಧತಿಗಳನ್ನು ಅನುಸರಿಸಿ. ಎಟಿಎಂ ಯಂತ್ರದಲ್ಲಿ ವಹಿವಾಟು ನಡೆಸುವ ಮುನ್ನ ಯಾವುದಾದರೂ ಶಂಕಾಸ್ಪದ ಸಾಧನಗಳನ್ನು ಅಳವಡಿಸಲಾಗಿದೆಯೇ ಎನ್ನುವುದನ್ನ್ನು ಪರಿಶೀಲಿಸಿಕೊಳ್ಳಿ. ನೆಟ್ ಬ್ಯಾಂಕಿಂಗ್‌ಗಾಗಿ ಸುಭದ್ರ ಪಾಸ್‌ವರ್ಡ್ ಇರಲಿ ಮತ್ತು ನಿಯಮಿತ ಅವಧಿಗಳಲ್ಲಿ ನಿಮ್ಮ ಪಾಸ್‌ವರ್ಡ್ ಮತ್ತು ಪಿನ್ ಬದಲಿಸುವುದನ್ನು ರೂಢಿಸಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News