ಕಾಂಗ್ರೆಸ್ ಮುಕ್ತ ಎನ್ನುವುದು ಬಿಜೆಪಿಯ ಭ್ರಮೆ: ದಿನೇಶ್ ಗುಂಡೂರಾವ್

Update: 2018-12-28 13:34 GMT

ಬೆಂಗಳೂರು, ಡಿ.28: ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎನ್ನುವ ಬಿಜೆಪಿಯ ಕನಸು ಭ್ರಮೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಆಯೋಜಿಸಿದ್ದ, ಕಾಂಗ್ರೆಸ್ ಪಕ್ಷದ 134ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎನ್ನುವ ಬಿಜೆಪಿ ಕನಸೇ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಂದ ಮುಕ್ತಗೊಂಡಿದೆ. ಅಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಬಿಜೆಪಿಯೇತರ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸ್ಥಿತಿ ಏನಾಗಲಿದೆ ಎನ್ನುವುದನ್ನು ಕಾದುನೋಡಿ ಎಂದ ಅವರು, ಬಿಜೆಪಿಯವರ ರೀತಿ ನಾವು ಬಿಜೆಪಿ ಮುಕ್ತ ಮಾಡುತ್ತೇವೆ ಎಂದು ಹೇಳುವುದಿಲ್ಲ ಎಂದರು.

ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಕಂಡ ಕನಸು ಯಾವುದೇ ಕಾರಣಕ್ಕೂ ನನಸಾಗಲು ಸಾಧ್ಯವಿಲ್ಲ. ಆಗೊಂದು ವೇಳೆ ಆಸೆ ಅಲ್ಪ, ಸ್ವಲ್ಪ ಈಡೇರಿದರೂ ಮಾಧ್ಯಮಗಳ ಸ್ವಾತಂತ್ರ್ಯ ಕಸಿದು ಹೋಗಲಿದೆ ಎಂದು ಹೇಳಿದರು.

ಒಗ್ಗೂಡಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಂಕಲ್ಪಮಾಡೋಣ ಎಂದು ದಿನೇಶ್ ಗುಂಡೂರಾವ್ ಕರೆ ನೀಡಿದರು.

ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವಕಾಶ ಸಿಗದವರಿಗೆ ಅಸಮಾಧಾನ ಸಹಜ. ಪಕ್ಷಕ್ಕಾಗಿ ದುಡಿದ ಪ್ರಾಮಾಣಿಕರಿಗೆ, ಹಿರಿಯರಿಗೆ ಖಂಡಿತ ಸ್ಥಾನ ಮಾನ ಸಿಗಲಿದೆ. ಹೀಗಾಗಿ, ಎಲ್ಲರೂ ಒಗ್ಗೂಡಿ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲೋಣ ಎಂದು ಕಿವಿಮಾತು ಹೇಳಿದರು.

ಗಲಾಟೆ ಇಲ್ಲ: ಖಾತೆ ಹಂಚಿಕೆ ಸಂಬಂಧಿಸಿದಂತೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ವಿರುದ್ಧ ಯಾವುದೇ ಮಾತಿನ ಚಕಮಕಿ ನಡೆದಿಲ್ಲ. ಆದರೂ, ಚಕಮಕಿ ನಡೆದಿದೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಿರುವುದು ಸರಿಯಲ್ಲ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ನೂತನ ಅಧ್ಯಕ್ಷ ಎಚ್.ಕೆ.ಪಾಟೀಲ್ ಮಾತನಾಡಿ, ಲೋಕಸಭೆ ಚುನಾವಣೆಗೆ ಕಡಿಮೆ ಅವಧಿಯಿದೆ. ನಾವು ಜನರ ಬಳಿ ಹೋಗಬೇಕು. ಪಕ್ಷವನ್ನು ಸಂಘಟಿಸಿ, ಸದೃಢಗೊಳಿಸಿ, ಬೆಳೆಸಬೇಕಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಎಲ್ಲರೂ ಹೆಚ್ಚು ಶ್ರಮಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಎಂ.ರೇವಣ್ಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News