ನನಗೆ ಇವತ್ತೇ ಶಿಕ್ಷೆ ಕೊಟ್ಟುಬಿಡಿ: ಕೋರ್ಟ್‌ಗೆ ಮನವಿ ಮಾಡಿದ ಆರೋಪಿ

Update: 2018-12-28 16:03 GMT

ಬೆಂಗಳೂರು, ಡಿ.28: ಎಟಿಎಂನಲ್ಲಿ ಹಣ ತೆಗೆಯಲು ಬಂದಿದ್ದ ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ 65ನೆ ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸಿತು.

ಪ್ರಕರಣದ ಆರೋಪಿ ಮಧುಕರ್ ರೆಡ್ಡಿ, ಎಟಿಎಂನಲ್ಲಿ ಹಲ್ಲೆ ಮಾಡಿದ್ದು ನಾನೇ ಎಂದು ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ನಾಯಾಧೀಶರ ಮುಂದೆ ಆರೋಪಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ಬೇಡ. ನಾನೇ ತಪ್ಪು ಮಾಡಿದ್ದು. ನನಗೆ ಇಂದೇ ಶಿಕ್ಷೆ ನೀಡಿ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದ್ದಾನೆ. ನನ್ನ ಪರವಾಗಿ ಯಾವುದೇ ವಕೀಲರು ಬೇಡ. ದಯವಿಟ್ಟು ಇವತ್ತೇ ನನಗೆ ಶಿಕ್ಷೆ ನೀಡಿ ಸ್ವಾಮಿ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದ್ದಾನೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನ್ಯಾಯಾಧೀಶರು, ನೀವು ಮಾಡಿರುವುದು ಜೀವಾವಧಿ ಶಿಕ್ಷೆ ನೀಡುವ ಪ್ರಕರಣ. ಪ್ರಕರಣದ ಬಗ್ಗೆ ತಪ್ಪುಒಪ್ಪಿಕೊಂಡ ತಕ್ಷಣ ನಿಮಗೆ ಕಡಿಮೆ ಶಿಕ್ಷೆಯಾಗುತ್ತೆ ಅಂತ ಹೇಳಲು ಆಗಲ್ಲ. ವಕೀಲರ ನೇಮಕದ ಬಗ್ಗೆ ಪೊಲೀಸರ ಜೊತೆ ಚರ್ಚಿಸಿ ತಿಳಿಸಿ ಎಂದು ಆರೋಪಿಗೆ ಸೂಚಿಸಿದ್ದಾರೆ. ಇದೇ ವೇಳೆ, ಪ್ರಕರಣದ ವಿಚಾರಣೆಯನ್ನು ಜನವರಿ 7ಕ್ಕೆ ನ್ಯಾಯಾಲಯ ಮುಂದೂಡಿದೆ.

ಪ್ರಕರಣವೇನು: 2013ರ ನವೆಂಬರ್ 19ರ ಬೆಳಗ್ಗೆ 7.10ರ ವೇಳೆ ಈ ಪ್ರಕರಣ ಎಸ್.ಜೆ.ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಪೋರೇಷನ್ ಸರ್ಕಲ್‌ನಲ್ಲಿ ನಡೆದಿತ್ತು. ಜ್ಯೋತಿ ಉದಯ್ ಎಂಬುವರು ತಮ್ಮ ಮಗಳ ಹುಟ್ಟುಹಬ್ಬಕ್ಕೆ ವಸ್ತುಗಳ ಖರೀದಿಗೆಂದು ಹಣ ಡ್ರಾ ಮಾಡಲು ಎಟಿಎಂಗೆ ಬಂದಿದ್ದರು. ಈ ವೇಳೆ ಕಾರ್ಪೋರೇಷನ್ ಎಟಿಎಂ ಬಾಗಿಲನ್ನು ಮುಚ್ಚಿ, ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಆರೋಪಿಗಾಗಿ ಜಾಲ ಬೀಸಿದ್ದ ಪೊಲೀಸರು, ಆರೋಪಿಯನ್ನು ಆಂಧ್ರದ ಮದನಪಲ್ಲಿಯಲ್ಲಿ ಬಂಧಿಸಿದ್ದರು.

ಇನ್ನು, ಹಲ್ಲೆಗೊಳಗಾದ ಜ್ಯೋತಿ ಉದಯ್, ಕಾರ್ಪೊರೇಷನ್ ಬ್ಯಾಂಕ್ ಮಿಷನ್ ರೋಡ್ ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇವೆಯಲ್ಲಿದ್ದರು. ಘಟನೆಯಲ್ಲಿ ಅವರ ಬಲಗೈ ಮತ್ತು ಬಲಗಾಲು ಸ್ವಾಧೀನ ಕಳೆದುಕೊಂಡಿತ್ತು. ಗಾಯಗೊಂಡಿದ್ದ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ 6 ತಿಂಗಳ ಚಿಕಿತ್ಸೆ ನಂತರ ಚೇತರಿಕೆ ಕಂಡಿದ್ದರು. ಬಳಿಕ ಅವರನ್ನು ಆರ್.ಟಿ.ನಗರ ಕಾರ್ಪೊರೇಷನ್ ಬ್ಯಾಂಕ್‌ಗೆ ವರ್ಗಾವಣೆ ಮಾಡಲಾಗಿತ್ತು. ಘಟನೆ ನಡೆದ ವೇಳೆ ಪೊಲೀಸರು 10 ಕ್ಕೂ ಹೆಚ್ಚು ತಂಡಗಳನ್ನ ರಚಿಸಿ ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಅನೇಕ ಕಡೆ ಹುಡುಕಾಟ ನಡೆಸಲಾಗಿತ್ತು. ಸುಳಿವು ನೀಡಿದವರಿಗೆ ರಾಜ್ಯ ಸರಕಾರ 10 ಲಕ್ಷ ಬಹುಮಾನ ಘೋಷಿಸಿತ್ತು. ಆದರೆ ಅರೋಪಿ ಯಾರಿಗೂ ಸಿಗದಂತೆ ತಲೆ ಮರೆಸಿಕೊಂಡಿದ್ದ. ಆದರೆ ಮದನಪಲ್ಲಿ ಪೊಲೀಸರು ಬೇರೆ ಪ್ರಕರಣದಲ್ಲಿ ಕೆಲ ಆರೋಪಿಗಳನ್ನು ಬಂಧಿಸಿದ್ದರು.

ಬಂಧಿತ ಆರೋಪಿಗಳು ಜೈಲ್‌ನಲ್ಲಿ ಮಧುಕರ್ ಬಗ್ಗೆ ಮಾತನಾಡುತ್ತಿದ್ದರು. ಇದನ್ನ ಗಮನಿಸಿದ ಪೇದೆಯೊಬ್ಬರು ವಿಚಾರಣೆ ಮಾಡಿದ್ದರು. ಆನಂತರ ಆರೋಪಿಯನ್ನ ಮದನಪಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ಬೆಂಗಳೂರು ಎಸ್.ಜೆ.ಪಾರ್ಕ್ ಪೊಲೀಸರು ಬಾಡಿ ವಾರೆಂಟ್ ಮೇಲೆ ಕರೆತಂದು ಶುಕ್ರವಾರ ನ್ಯಾಯಾಧೀಶ ರಾಜೇಶ್ವರ ಮುಂದೆ ಹಾಜರು ಪಡಿಸಿದ್ದಾರೆ. ಆದರೆ ಸರಕಾರದ ಪರ ವಕೀಲರಿಲ್ಲದ ಕಾರಣ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News