ಸ್ಟಾಫ್ ನರ್ಸ್ ಹುದ್ದೆಗೆ ಹೈ-ಕ ಅಭ್ಯರ್ಥಿ ಆಯ್ಕೆ: ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ ಹೈಕೋರ್ಟ್ ತುರ್ತು ನೋಟಿಸ್

Update: 2018-12-28 16:29 GMT

ಬೆಂಗಳೂರು, ಡಿ.28: ಹೈದರಾಬಾದ್ ಕರ್ನಾಟಕೇತರ ಕೋಟಾದಲ್ಲಿ 3ಎ ಕೆಟಗರಿಗೆ ಮೀಸಲಾಗಿದ್ದ ಸ್ಟಾಫ್ ನರ್ಸ್ ಹುದ್ದೆಗೆ ಹೈದರಾಬಾದ್ ಕರ್ನಾಟಕ ಕೋಟಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ವಿವಾದಕ್ಕೆ ಸಂಬಂದಿಸಿದಂತೆ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.

ಈ ಕುರಿತಂತೆ ಅವಕಾಶವಂಚಿತ ಪಿ.ಸಿ. ರಾಜಶೇಖರ ರೆಡ್ಡಿ ಸಲ್ಲಿಸಿದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಅವರಿದ್ದ ರಜಾ ಕಾಲದ ಏಕಸದಸ್ಯ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಸೇರಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಆಯ್ಕೆಯಾದ ಅಭ್ಯರ್ಥಿ ಪ್ರದೀಪ್ ಕಂದಗುಳಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.

ನೇಮಕಾತಿಗೆ ಸಂಬಂಧಿಸಿದ ಮುಂದಿನ ಯಾವುದೇ ಪ್ರಕ್ರಿಯೆಯೂ ಅರ್ಜಿಯ ಅಂತಿಮ ಇತ್ಯರ್ಥಕ್ಕೆ ಒಳಪಡಲಿದೆ ಎಂದು ನ್ಯಾಯಪೀಠ ಹೇಳಿದೆ. ಸ್ಟಾಫ್ ನರ್ಸ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ 2018ರ ಮೇ 22ರಂದು ಅಧಿಸೂಚನೆ ಹೊರಡಿಸಿತ್ತು. ಇದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಸ್ಟಾಫ್ ನರ್ಸ್ ಹುದ್ದೆಯ ಹೈದರಾಬಾದ್ ಕರ್ನಾಟಕೇತರ ಕೋಟಾ ಪ್ರವರ್ಗ 3ಎ ಗೆ ಮೀಸಲಾಗಿತ್ತು. ಅದರಂತೆ ಹೈದರಾಬಾದ್ ಕರ್ನಾಟಕೇತರ ಕೋಟಾದ 3ಎ ಕೆಟಗರಿಯಲ್ಲಿ 141 ಅಂಕ ಪಡೆದ ರಾಜಶೇಖರ್ ರೆಡ್ಡಿ ಹೆಸರನ್ನು ಮೆರಿಟ್ ಪಟ್ಟಿಯಲ್ಲಿ ಪ್ರಕಟಿಸಲಾಗಿತ್ತು, ಬಳಿಕ ಪ್ರಕಟಿಸಲಾದ ಹೆಚ್ಚುವರಿ ಪಟ್ಟಿಯಲ್ಲಿ (ಪ್ರಾವಿಜನಲ್ ಲಿಸ್ಟ್) ರೆಡ್ಡಿ ಹೆಸರು ಕೈ ಬಿಟ್ಟು, 140 ಅಂಕ ಪಡೆದಿದ್ದ ಹೈದರಾಬಾದ್ ಕರ್ನಾಟಕ ಕೋಟಾದ ಪ್ರದೀಪ್ ಕಂದಗುಳಿ ಹೆಸರು ಸೇರಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಈ ಕ್ರಮ ಕಾನೂನು ಬಾಹಿರ. ಹೀಗಾಗಿ, ಪ್ರದೀಪ್ ಕಂದಗುಳಿಯವರ ನೇಮಕಾತಿ ಆದೇಶ ಹೊರಡಿಸಿದಂತೆ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿದಾರರ ಪರ ವಕೀಲ ಎಲ್. ವೆಂಕಟರಾಮ ರೆಡ್ಡಿ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News