ಸರಕಾರಿ ಆಂಗ್ಲ ಮಾಧ್ಯಮ ಶಾಲೆ ಅಗತ್ಯವಿಲ್ಲ: ದಲಿತ ಹಕ್ಕುಗಳ ಸಮಿತಿ ಸಂಚಾಲಕ ರಾಜಶೇಖರ ಮೂರ್ತಿ

Update: 2018-12-28 17:23 GMT

ಬೆಂಗಳೂರ, ಡಿ.28: ರಾಜ್ಯ ಸರಕಾರ ಮುಂದಿನ ಶೈಕ್ಷಣಿಕ ಸಾಲಿನಿಂದ ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಶಾಲೆಗಳನ್ನು ತೆರೆಯುವುದಾಗಿ ಘೋಷಣೆ ಮಾಡಿರುವುದು ಸರಿಯಲ್ಲವೆಂದು ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ರಾಜಶೇಖರ ಮೂರ್ತಿ ಅಭಿಪ್ರಾಯಿಸಿದ್ದಾರೆ. 

ರಾಜ್ಯದಲ್ಲಿ ಅಸಮಾನ ಶಿಕ್ಷಣ ವ್ಯವಸ್ಥೆ ತಾಂಡವವಾಡುತ್ತಿದ್ದು, ಶಿಕ್ಷಣದಲ್ಲಿ ಶ್ರೇಣಿಕೃತ ವ್ಯವಸ್ಥೆ ಜಾರಿಯಲ್ಲಿದೆ. ಇನ್ನು ರಾಜ್ಯ ಸರಕಾರವೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣವನ್ನು ಕೊಡಲು ಮುಂದಾದರೆ, ಭವಿಷ್ಯದಲ್ಲಿ ಕನ್ನಡದಲ್ಲಿ ಓದುವವರು ಇಲ್ಲದೆ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ನಾಶವಾಗಲಿದೆ. ರಾಜ್ಯ ಸರಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದನ್ನು ಕೈ ಬಿಡಬೇಕು. ಬದಲಿಗೆ ಒಂದನೆ ತರಗತಿಯಿಂದಲೆ ಆಂಗ್ಲ ಭಾಷೆಯನ್ನು ಒಂದು ಭಾಷೆಯಾಗಿ ಎಲ್ಲ ಸರಕಾರಿ ಶಾಲೆಗಳಲ್ಲಿ ಆರಂಭಿಸಬೇಕು. ಹಾಗೂ ಡಿಎಡ್, ಬಿಎಡ್ ಮಾಡಿರುವ ನಿರುದ್ಯೋಗ ಯುವಕರಿಗೆ ವೈಜ್ಞಾನಿಕವಾಗಿ, ಸರಳವಾಗಿ ಆಂಗ್ಲ ಭಾಷೆ ಒಂದು ಭಾಷೆಯಾಗಿ ಕಲಿಸಲು, ಅಲ್ಪಕಾಲಿಕ ತರಬೇತಿ ನೀಡಿ ಎಲ್ಲ ಸರಕಾರಿ ಶಾಲೆಗಳಿಗೆ ನೇಮಿಸಬೇಕು.

ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು, ದೇಶದಾದ್ಯಂತ ಸಮಾನ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಗೊಳಿಸಲು ಹಾಗೂ ಶಿಕ್ಷಣ ಸಾರ್ವತ್ರೀಕರಣಗೊಳಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು. ಹಾಗೂ ಕೇಂದ್ರ ಸರಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಕೇಂದ್ರೀಯ ಶಾಸನ ಜಾರಿಗೊಳಿಸಬೇಕೆಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News