ಮೂಲಭೂತವಾದಿಗಳ ದಾಳಿಗೆ ಪ್ರತಿಕ್ರಿಯೆಗಿಂತ ಪ್ರತಿಸ್ಪಂದನೆ ನೀಡುವ ಅಗತ್ಯವಿದೆ: ಗೊ.ರು.ಚನ್ನಬಸಪ್ಪ
ಬೆಂಗಳೂರು, ಡಿ.28: ಮೂಲಭೂತವಾದಿಗಳಿಂದ ಜನಸಾಮಾನ್ಯರ ಮೇಲೆ ನಡೆಯುವ ದಾಳಿಗಳ ವಿರುದ್ಧವಾಗಿ ಕೇವಲ ಪ್ರತಿಕ್ರಿಯೆ ಕೊಡುತ್ತಾ ಕೂರುವುದಕ್ಕಿಂತ, ದಾಳಿಗೊಳಗಾದವರಿಗೆ ಪ್ರತಿಸ್ಪಂದನೆ ನೀಡುವುದು ಅಗತ್ಯವಿದೆ ಎಂದು ಹಿರಿಯ ವಿದ್ವಾಂಸ ಗು.ರು.ಚನ್ನಬಸಪ್ಪ ತಿಳಿಸಿದರು.
ಶುಕ್ರವಾರ ಕರ್ನಾಟಕ ಸಾಹಿತ್ಯ ಪರಿಷತ್‌ಗೆ ಹತ್ತು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಗರದ ವಿಜಯನಗರದಲ್ಲಿರುವ ಪರಿಷತ್‌ನ ಪಂಪ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಮಕಾಲೀನ ಸಾಮಾಜಿಕ ಸಂದರ್ಭ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಅಕ್ಷರಸ್ಥರಿದ್ದಾರೆ, ಸಾಹಿತಿಗಳಿದ್ದಾರೆ, ಬುದ್ಧಿಜೀವಿಗಳಿದ್ದಾರೆ, ಪ್ರಜ್ಞಾವಂತರಿದ್ದಾರೆ. ಆದರೆ, ಸಮಾಜದಲ್ಲಿ ಜರಗುವ ಜನವಿರೋಧಿ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕೇವಲ ಘಟನೆಗಳಿಗೆ ಪ್ರತಿಕ್ರಿಯೆ ಕೊಟ್ಟು ಸುಮ್ಮನಾಗುವ ಪರಿಪಾಠ ಬೆಳೆದಿದೆ. ಹೀಗಾಗಿ ಪ್ರತಿಕ್ರಿಯೆ ಜಾಗದಲ್ಲಿ ಪ್ರತಿಸ್ಪಂದನಾ ಮನಸ್ಥಿತಿ ಬೆಳೆಯಬೇಕಿದೆ ಎಂದು ಅವರು ಆಶಿಸಿದರು.
ಇವತ್ತಿನ ಸಮಾಜದಲ್ಲಿ ಜನಸಾಮಾನ್ಯರಿಗೆ ವೈಯಕ್ತಿಕ ಭದ್ರತೆ ಇಲ್ಲವಾಗಿದ್ದು, ನೈತಿಕ ದಾರಿದ್ರ ಎಲ್ಲೆಡೆ ಮನೆ ಮಾಡಿದೆ. ಹೀಗಾಗಿ ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸುರಕ್ಷಿತವಾಗಿ ಬದುಕುವಂತಹ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಜ್ಞಾವಂತರು ಗಂಭೀರವಾಗಿ ಚಿಂತಿಸಬೇಕಿದೆ ಎಂದು ಅವರು ಹೇಳಿದರು.
ಸಮಾಜದಲ್ಲಿ ಇಂದಿಗೂ ಎಲ್ಲರಿಗೂ ಮನೆ ಸೇರಿದಂತೆ ಮೂಲಭೂತ ಅಗತ್ಯಗಳು ಸಿಕ್ಕಿಲ್ಲ. ಅದರ ಜತೆಗೆ ಬೀಕರ ಬರಗಾಲ, ಪ್ರವಾಹಗಳಿಂದಾಗಿ ಜನತೆ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಂತಹ ಸ್ಥಿತಿಯಿರುವಾಗ ಚಿನ್ನದ ಗೋಪುರಗಳ ದೇವಾಲಯಗಳು ತಲೆ ಎತ್ತುತ್ತಿರುವುದು ವಿಪರ್ಯಾಸವೆಂದು ಅವರು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರತಿ ವರ್ಷ ಜನಸಾಮಾನ್ಯರ ಕಲ್ಯಾಣಕ್ಕಾಗಿ ಕೋಟ್ಯಂತರ ರೂ. ಮೌಲ್ಯದ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ, ಜನತೆಗೆ ಈ ಯೋಜನೆಯನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕೆಂಬ ಅರಿವಿಲ್ಲ. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ ವಹಿಸುತ್ತಾರೆ. ಯೋಜನೆಗಳ ಜಾರಿಗೂ ಮೊದಲು ಜನತೆಯಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವುದಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಅವರು ಹೇಳಿದರು.
ಹಿರಿಯ ವಿಮರ್ಶಕ ಎಂ.ಎಚ್.ಕೃಷ್ಣಯ್ಯ ಮಾತನಾಡಿ, ಇವತ್ತು ಕನ್ನಡಕ್ಕೆ, ಕರ್ನಾಟಕಕ್ಕೆ ಏನಾಗಬೇಕಿದೆ. ಹಾಗೂ ಕನ್ನಡಿಗರು ಎಂತಹ ಪ್ರಜ್ಞೆಯನ್ನು ಹೊಂದಿರಬೇಕೆಂದು ಚಿಂತಿಸಿ, ಯೋಜನೆಗಳನ್ನು ರೂಪಿಸುತ್ತಿರುವ ವೈಚಾರಿಕ ಸಂಸ್ಥೆಗಳಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಅಗ್ರಗಣ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂವಿಧಾನವನ್ನು ಮೂಲೆಗೆ ಎಸೆಯುವಂತಹ ಘಟನೆಗಳು ನಡೆಯುತ್ತಿದ್ದರೂ ಜನ ಸಾಮಾನ್ಯರು ಏನೂ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಆಂತಕ ಮೂಡಿಸುವಂತಹದ್ದಾಗಿದೆ. ನೈಜ ಇತಿಹಾಸದ ಜಾಗದಲ್ಲಿ ಸುಳ್ಳು ಇತಿಹಾಸವನ್ನು ಜಾರಿಗೆ ತರುವಂತಹ ಷಡ್ಯಂತ್ರಗಳು ನಡೆಯುತ್ತಿದೆ. ಇಂತಹ ಘಟನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ತುರ್ತು ಇದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್‌ನ ಉಪಾಧ್ಯಕ್ಷ ಗೋವಿಂದರಾಜು, ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ, ಕನ್ನಡ ಹೋರಾಟಗಾರ ರಾ.ನಂ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಶಬರಿಮಲೆಗೆ ಮಹಿಳೆಯರ ಪ್ರವೇಶ ಹಾಗೂ ತ್ರಿವಳಿ ತಲಾಖ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮಹಿಳಾ ಸಮುದಾಯವೆ ವಿರೋಧ ವ್ಯಕ್ತಪಡಿಸಿರುವುದು ಆಂತಕದ ಬೆಳವಣಿಗೆಯಾಗಿದೆ. ಇಂದಿಗೂ ಸಮಾಜದಲ್ಲಿ ಪುರಷ ಪ್ರಧಾನ ವ್ಯವಸ್ಥೆ ಹೇಗೆ ಬೇರು ಬಿಟ್ಟಿದೆ ಎಂಬುದಕ್ಕೆ ಈ ಪ್ರಕರಣಗಳೆ ಸಾಕ್ಷಿಯಾಗಿವೆ.
-ಡಾ.ಗೊ.ರು.ಚನ್ನಬಸಪ್ಪ, ಹಿರಿಯ ಸಾಹಿತಿ