ಸಮುದಾಯಗಳು ಪರಸ್ಪರ ಪೂರಕವಾಗಿ ಬೆಳೆಯಲಿ: ಸುಪ್ರೀಂಕೋರ್ಟ್ ನ್ಯಾ.ಶಿವರಾಜ್‌ ಪಾಟೀಲ್

Update: 2018-12-28 17:42 GMT

ಬೆಂಗಳೂರು, ಡಿ.28: ಇತರೆ ಸಮುದಾಯಗಳಿಗೆ ತೊಂದರೆಯಾಗದ ರೀತಿಯಲ್ಲಿ ಪ್ರತಿಸಮುದಾಯವು ಸಂಘಟಿತಗೊಂಡು ಪರಸ್ಪರ ಪೂರಕವಾಗಿ ಬೆಳೆಯಬೇಕೆಂದು ಸುಪ್ರೀಂ ಕೋರ್ಟ್ ನ್ಯಾ.ಶಿವರಾಜ್‌ ಪಾಟೀಲ್ ತಿಳಿಸಿದರು.

ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ಯಾವುದೆ ಸಮುದಾಯ ಮತ್ತೊಂದು ಸಮುದಾಯಕ್ಕೆ ಸಮಸ್ಯೆಯಾಗದಂತಹ ರೀತಿಯಲ್ಲಿ ಸಂಘಟಿತಗೊಳ್ಳಬೇಕು. ಇದರಿಂದ ದೇಶದಲ್ಲಿ ಸೌಹಾರ್ದತೆ ರೂಪಗೊಂಡು, ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ತಿಳಿಸಿದರು.

ಯಾವುದೇ ಸಮಾಜ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ತಾವು ಅಭಿವೃದ್ಧಿಯಾಗುವುದರೊಂದಿಗೆ, ವಿದ್ಯಾವಂತರಾಗುವುದರೊಂದಿಗೆ ಇತರರನ್ನು ಅಕ್ಷರಸ್ಥರನ್ನಾಗಿ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಹವ್ಯಕ ಸಮಾಜ ವಿಶೇಷವಾಗಿ ಗುರುತಿಸಿಕೊಂಡಿದೆ. ಅದರ ಮಾದರಿಯಲ್ಲಿಯೆ ಇತರೆ ಸಮುದಾಯಗಳು ಬೆಳೆಯಬೇಕಿದೆ ಎಂದು ಅವರು ಹೇಳಿದರು.

ಹುಟ್ಟು ನಮ್ಮ ಆಯ್ಕೆಯಲ್ಲ. ಆದರೆ, ಬದುಕು ನಮ್ಮ ಆಯ್ಕೆಯಾಗಬೇಕು. ಜೀವನದ ಪ್ರತಿ ಪುಟವನ್ನು ಅರ್ಥಪೂರ್ಣವಾಗಿಸಬೇಕು. ನಮ್ಮ ವೈಯಕ್ತಿಕ ಜೀವನ, ಸಾಧನೆ ಸಮಾಜಕ್ಕೆ ಒಳಿತು ಮಾಡುವಂತಿರಬೇಕು. ಜಗತ್ತು ಬೆಳಗಿದ ಥಾಮಸ್ ಸಾಲ್ವ ಎಡಿಸನ್, ಐನ್‌ಸ್ಟೈನ್, ಮೈಕಲ್ ಫ್ಯಾರಡೆ ಅವರ ಸಾಧನೆಗಳು ಇಡೀ ಮನುಕುಲಕ್ಕೆ ದಾರಿದೀಪವಾಗಿದೆ. ಇಂತಹ ಸಾಧನೆಗಳನ್ನು ಮಾಡುವತ್ತ ಹೆಚ್ಚು ಗಮನ ಹರಿಸಬೇಕು ಎಂದು ಅವರು ಆಶಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ, ವಿಶ್ವ ಹವ್ಯಕ ಸಮ್ಮೇಳನ ಅಮೃತ ಮಹೋತ್ಸವದ ಗೌರವಾಧ್ಯಕ್ಷ ಭೀಮೇಶ್ವರ ಜೋಶಿ, ಸಂಪಾದಕ ರವಿ ಹೆಗಡೆ, ಶಾಸಕ ಹರತಾಳ ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News