×
Ad

ಸರಕಾರಿ ದಂತ ಮಹಾವಿದ್ಯಾಲಯಕ್ಕೆ ಲೇಸರ್ ಚಿಕಿತ್ಸಾ ಲ್ಯಾಬ್ ಕೊಡುಗೆ: ರಾಜೀವ್‌ ಗಾಂಧಿ ವಿವಿ ಕುಲಪತಿ ಡಾ.ಸಚ್ಚಿದಾನಂದ್

Update: 2018-12-28 23:21 IST

ಬೆಂಗಳೂರು, ಡಿ.28: ವಜ್ರ ಮಹೋತ್ಸವದ ಹಿನ್ನೆಲೆಯಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಸರಕಾರಿ ದಂತ ಮಹಾವಿದ್ಯಾಲಯಕ್ಕೆ ಉಚಿತ ಲೇಸರ್ ಚಿಕಿತ್ಸಾ ಲ್ಯಾಬ್ ಕೊಡುಗೆಯಾಗಿ ನೀಡಲಾಗುತ್ತದೆ ಎಂದು ರಾಜೀವ್‌ಗಾಂಧಿ ವಿವಿ ಕುಲಪತಿ ಡಾ.ಸಚ್ಚಿದಾನಂದ್ ಹೇಳಿದ್ದಾರೆ.

ಶುಕ್ರವಾರ ನಗರದ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಸರಕಾರಿ ದಂತ ಮಹಾವಿದ್ಯಾಲಯದ ವಜ್ರ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ವಜ್ರ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ನಾಡಿಗೆ ಸರಕಾರಿ ದಂತ ಮಹಾವಿದ್ಯಾಲಯ ಮಾತೃ ಸಂಸ್ಥೆಯಾಗಿದ್ದು, ದೊಡ್ಡ ಆಲದ ಮರದ ರೀತಿ ಬೆಳೆದು ಹಲವು ವೈದ್ಯರನ್ನು ನೀಡಿದೆ. 45 ದಂತ ಮಹಾವಿದ್ಯಾಲಯಗಳಿಗೆ ವೈದ್ಯರನ್ನು, ಶಿಕ್ಷಕರನ್ನು ನೀಡಿದೆ. ಹೀಗಾಗಿ, 41 ಲಕ್ಷ ವೆಚ್ಚದಲ್ಲಿ ಲೇಸರ್ ಚಿಕಿತ್ಸೆಯ ಲ್ಯಾಬ್ ನೀಡಲಾಗುತ್ತದೆ. ಅಲ್ಲದೆ, ಯಾವುದೇ ಆರ್ಥಿಕ ಅಗತ್ಯವಿದ್ದಲ್ಲಿ ರಾಜೀವ್ ಗಾಂಧಿ ವಿವಿಯ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.

ದಂತ ವೈದ್ಯ, ಮನೋರೋಗ ವೈದ್ಯ ಹಾಗೂ ಚರ್ಮ ವೈದ್ಯಕೀಯಕ್ಕೆ ಹೆಚ್ಚು ಪ್ರಾಶಸ್ತ್ಯವಿಲ್ಲದಿದ್ದರೂ ಈಗ ಬಹಳಷ್ಟು ಪ್ರಾಮುಖ್ಯತೆ ಬಂದಿದೆ. ಈ ಮಹಾವಿದ್ಯಾಲಯಕ್ಕೆ ವ್ಯವಸ್ಥಿತ ಕಟ್ಟಡಗಳೂ ಇರದೇ ಇದ್ದರೂ ಮೂರ್ತಿ ಚಿಕ್ಕದು ಕೀರ್ತಿ ದೊಡ್ಡದು ಎಂಬಂತೆ ಇದೆ. ಅಲ್ಲದೆ ಇಲ್ಲಿ ಕಲಿತು ಹೋದ ವಿದ್ಯಾರ್ಥಿಗಳು ತಮ್ಮ ಸಂಪರ್ಕಗಳಿಂದ ಕಾಲೇಜಿಗೆ ಉತ್ತಮ ಹೆಸರು ತರಲಿ ಎಂದು ಆಶಿಸಿದರು.

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ಎಸ್.ಎಸ್.ಹಿರೇಮಠ್ ಮಾತನಾಡಿ, ತಾತ್ಕಾಲಿಕವಾಗಿ ವಿಕ್ಟೋರಿಯಾ ಆಸ್ಪತ್ರೆ ಕಟ್ಟಡದ ಆವರಣದಲ್ಲಿ 1958 ರಲ್ಲಿ ಡಾ.ವಿ.ಆರ್.ನಾಯ್ಡು ನಿರ್ದೇಶನದಲ್ಲಿ ಆರಂಭಗೊಂಡಿತು. ಬಳಿಕ ಡಾ.ರಾಮಚಂದ್ರರ ನೇತೃತ್ವದಲ್ಲಿ ಮೊದಲ ಪ್ರಾಂಶುಪಾಲರಾಗಿ, 1959 ರಲ್ಲಿ ದಂತ ಮಹಾವಿದ್ಯಾಲಯಕ್ಕೆ ಭದ್ರ ಬುನಾದಿ ಹಾಕಿದರು. 1964 ರಲ್ಲಿ ಕಾಲೇಜು ಕಟ್ಟಡ ನಿರ್ಮಾಣವಾಯ್ತು. ದಂತ ವೈದ್ಯಕೀಯ ಸೇವೆಯಲ್ಲಿ ದೇಶದಲ್ಲೇ ಮಾದರಿ ಸಂಸ್ಥೆಯಾಯಿತು ಎಂದರು.

ದಂತ ಕಾಲೇಜು ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ. ದಂತ ವೈದ್ಯಕೀಯ ಓದಬೇಕು ಎಂಬ ಕನಸು ಕಂಡವರಿಗೆ ಆಸರೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ಅರ್ಹ ಬಡವರಿಗೆ ಈ ಕಾಲೇಜು ನೆರವು ನೀಡಿದೆ. ಅಲ್ಲದೆ, ಸಾವಿರಾರು ಸಂಖ್ಯೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಮುಖದಲ್ಲಿ ನಗುವನ್ನು ಮರುಸೃಷ್ಟಿಸಿದೆ ಎಂದು ನುಡಿದರು.

ದಂತ ಮಹಾವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕರಾದ ಡಾ.ಎಂ.ಎ.ಶೇಖರ್ ಮಾತನಾಡಿ, ಆರಂಭದಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ಆರಂಭಗೊಂಡಿದ್ದ ಕಾಲೇಜು ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ದಂತ ವೈದ್ಯಕೀಯ ಶಾಸ್ತ್ರದ ಎಲ್ಲ 9 ವಿಭಾಗಗಳಲ್ಲಿಯೂ ಸ್ನಾತಕೋತ್ತರ ಪದವಿ ಶಿಕ್ಷಣ ಸಿಗುತ್ತಿದೆ. ಬಾಯಿ ರೋಗ ಪತ್ತೆ ಮತ್ತು ಕ್ಷಕಿರಣ ವಿಭಾಗ ಸೇರಿದಂತೆ ಹಲವಾರು ವಿಭಾಗಗಳಿಂದು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಜ್ರ ಮಹೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಡಾ.ಮಂಜುನಾಥ್ ಪಿ.ಪುರಾಣಿಕ್, ಹಳೆ ವಿದ್ಯಾರ್ಥಿಗಳ ಸಂಘದ ಗೌರವ ಕಾರ್ಯದರ್ಶಿ ಡಾ. ಸೂರ್ಯ ಪೊಡುವಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News