ಸೋಂಕು ಪೀಡಿತ ರಕ್ತ ನೀಡಿದ್ದರಿಂದ ತಾನೀಗ ಎಚ್‍ಐವಿ ಪಾಸಿಟಿವ್ : ಇನ್ನೊಬ್ಬ ಮಹಿಳೆಯ ಆರೋಪ

Update: 2018-12-29 11:56 GMT

ಚೆನ್ನೈ,ಡಿ..29: ವಿರುದ್ಧುನಗರ್ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬಳಿಗೆ ಎಚ್‍ಐವಿ ಸೋಂಕು ಹೊಂದಿದ ರಕ್ತ ನೀಡಿದ ಪರಿಣಾಮ ಆಕೆ ಕೂಡ ಎಚ್‍ಐವಿ ಸೋಂಕಿಗೆ ಒಳಗಾಗಿ ದೇಶಾದ್ಯಂತ ಆತಂಕಕ್ಕೆ ಕಾರಣವಾಗಿರುವಂತೆಯೇ  ಮಂಗಡು ಎಂಬಲ್ಲಿನ 30 ವರ್ಷದ ಮಹಿಳೆ ತಾನು ಕೂಡ ಇದೇ ರೀತಿಯ ಪ್ರಮಾದದಿಂದ ಸಂಕಷ್ಟಕ್ಕೊಳಗಾಗಿರುವುದಾಗಿ ಹೇಳಿಕೊಂಡಿದ್ದಾಳೆ. ಮೇ ತಿಂಗಳಲ್ಲಿ ತಾನು ಐದು ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ  ಚೆನ್ನೈನ ಮೆಡಿಕಲ್ ಕಾಲೇಜೊಂದರಲ್ಲಿ ತನಗೆ ರಕ್ತ ನೀಡಿದ ನಂತರ ಈ ಸೋಂಕು ತನಗೆ ಹರಡಿದೆ ಎಂದು ಆಕೆ ಆರೋಪಿಸಿದ್ದಾಳೆ. ಆದರೆ ಆಸ್ಪತ್ರೆ ಆಕೆಯ ಆರೋಪ ನಿರಾಕರಿಸಿದ್ದು ಆಕೆಗೆ ನೀಡಲಾಗಿದ್ದ ರಕ್ತದಲ್ಲಿ ಯಾವುದೇ ಎಚ್‍ಐವಿ ಸೋಂಕು ಇರಲಿಲ್ಲವೆಂದು ತಿಳಿಸಿದೆ.

ಐದು ವರ್ಷದ ಪುತ್ರನ ತಾಯಿಯಾಗಿರುವ ಮಹಿಳೆ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡುತ್ತಾ ತಾನು ಗರ್ಭಿಣಿಯಾದ ಆರಂಭದಲ್ಲಿ ಮಂಗಡು ಎಂಬಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದಾಗಿ, ನಾಲ್ಕು ತಿಂಗಳಾದಾಗ ಶ್ರೀ ಮುತ್ತುಕುಮಾರನ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿದಾಗ ಎಚ್‍ಐವಿ ಪರೀಕ್ಷೆಯಲ್ಲಿ ನೆಗೆಟಿವ್ ವರದಿಯಿತ್ತಾದರೂ ಹಿಮೋಗ್ಲೋಬಿನ್ ಅಂಶ ಕಡಿಮೆಯಿದ್ದುದರಿಂದ   ಮೇ 5ರಂದು ಕಿಲ್ಪೌಕ್ ಮೆಡಿಕಲ್ ಕಾಲೇಜಿನಲ್ಲಿ ಎರಡು ಯುನಿಟ್ ರಕ್ತ ನೀಡಲಾಗಿತ್ತು ಎಂದು ಹೇಳಿದ್ದಾರೆ. ಹತ್ತು ದಿನಗಳ ನಂತರ ಮಹಿಳೆ  ತನ್ನ ಪತಿಯೊಂದಿಗೆ ಮತ್ತೆ ಕಿಲ್ಪೌಕ್ ಆಸ್ಪತ್ರೆಗೆ ಪರೀಕ್ಷೆಗೆಂದು ಹೋದಾಗ ಮಹಿಳೆಯ ರಕ್ತದಲ್ಲಿ ಎಚ್‍ಐವಿ ಸೋಂಕು ಇತ್ತೆಂದು ಆದರೆ ಆಕೆಯ ಪತಿಯ ರಕ್ತದಲ್ಲಿ ಎಚ್‍ಐವಿ ಸೋಂಕು ಇರಲಿಲ್ಲವೆಂದು ತಿಳಿದು ಬಂದಿತ್ತು. ಮಹಿಳೆ ಸೆಪ್ಟೆಂಬರ್ ತಿಂಗಳಳ್ಲಿ ಮಗುವಿಗೆ ಜನ್ಮ ನೀಡಿದ್ದು ಇಲ್ಲಿಯ ತನಕ ಮಗುವಿಗೆ ಎಚ್‍ಐವಿ ಸೋಂಕು ಹರಡಿಲ್ಲ ಎಂದು ಹೇಳಲಾಗಿದೆ. ದಂಪತಿ ತರಕಾರಿ ಮಾರಾಟಗಾರರಾಗಿದ್ದಾರೆ.

ತಾನು ನವೆಂಬರ್ ತಿಂಗಳಲ್ಲಿಯೇ ತನ್ನ ಸಮಸ್ಯೆಯ ಬಗ್ಗೆ ರಾಜ್ಯದ ಆರೋಗ್ಯ ಸಚಿವ, ಆರೋಗ್ಯ ಕಾರ್ಯದರ್ಶಿ ಹಾಗೂ ಕಿಲ್ಪೌಕ್ ಮೆಡಿಕಲ್ ಕಾಲೇಜು ಆಸ್ತ್ರೆಯ ಡೀನ್ ಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ, ಇಲ್ಲಿಯ ತನಕ ಮಾಧ್ಯಮದ ಮುಂದೆ ಬರಲು ಭಯವಾಗಿತ್ತು. ಆದರೆ ಇತ್ತೀಚಿಗಿನ ವಿರುದ್ಧುನಗರ್ ಘಟನೆಯ ನಂತರ ಧೈರ್ಯ ಬಂದಿದೆ ಎಂದು ಮಹಿಳೆ ಹೇಳಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News