ಅನಕೃ ಎಂಬ ಕನ್ನಡದ ಕಟ್ಟಾಳು

Update: 2018-12-29 14:03 GMT

ಅನಕೃ ಅವರ ಕನ್ನಡ ಅಸ್ಮಿತೆ ಕುರಿತ ಚಿಂತನೆಗಳು ಜನಪ್ರಿಯ ನೆಲೆಯದ್ದಾದರೂ ಅವು ಬಹುಸಂಖ್ಯಾತರನ್ನು ಓಲೈಸಲು ಅಲ್ಪಸಂಖ್ಯಾತರನ್ನು ಕಡೆಗಣಿಸುವುದಿಲ್ಲ ಅಥವಾ ಕನ್ನಡಕ್ಕೆ ಅವರ ಕೊಡುಗೆಯನ್ನು ಮರೆಮಾಚುವುದಿಲ್ಲ. ಕರ್ನಾಟಕದ ವೈಭವದ ಚರಿತ್ರೆಯನ್ನು ನೆನೆಸಿಕೊಳ್ಳುವಾಗ ಅವರಲ್ಲಿ ಹಂಪೆ ಮತ್ತು ಶ್ರೀರಂಗಪಟ್ಟಣಗಳಲ್ಲಿ ತರತಮಗಳಿಲ್ಲ. ಅವರ ಭಾಷಣಗಳಲ್ಲಿ ಕನ್ನಡದ ಸಂಶೋಧಕರು ಉಲ್ಲೇಖಿಸದಿರುವ ಕನ್ನಡದ ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಯ ಅನನ್ಯ ಸ್ವರೂಪ ಮತ್ತು ಸತ್ವ ತುಂಬಿದ ನೂರಾರು ಅಲ್ಪಸಂಖ್ಯಾತ ಸಮುದಾಯದ ಹೆಸರುಗಳಿವೆ. ಕರ್ನಾಟಕದಲ್ಲಿ ನಡೆದ ಧಾರ್ಮಿಕ ಕೊಡುಕೊಳ್ಳುವಿಕೆಯ ನಿದರ್ಶನಗಳಿವೆ.

ಅನಕೃ ಎಂದೇ ಹೆಸರಾದ ಅರಕಲಗೂಡು ನರಸಿಂಗರಾಯ ಕೃಷ್ಣರಾಯ (1908-1971) ಅವರು ಐವತ್ತರ ದಶಕದಲ್ಲಿ ‘ಕರ್ನಾಟಕ ಪ್ರಗತಿಶೀಲ ಸಂಘ’ವನ್ನು ಕಟ್ಟಿ ಪ್ರಗತಿಶೀಲ ಸಾಹಿತ್ಯ ಚಳವಳಿಗೆ ಶಕ್ತಿ ತುಂಬಿದವರು. ಪ್ರಗತಿಶೀಲ ಲೇಖಕರಲ್ಲಿ ಪ್ರಮುಖರಲ್ಲೊಬ್ಬರಾದ ಅನಕೃ, ತಮ್ಮ ಕಾದಂಬರಿಗಳ ಮೂಲಕ ವ್ಯಾಪಕ ಪ್ರಮಾಣದ ಓದುಗರನ್ನು ಹೊಂದಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಮುಖಪತ್ರಿಕೆ ‘ಕನ್ನಡ ನುಡಿ’ಯ ಸಂಪಾದಕರಾಗಿ ಬರೆದ ಸಂಪಾದಕೀಯಗಳು, ಲೇಖನಗಳು ಕನ್ನಡ ಬದುಕಿನ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿವೆ. ‘ವಿಶ್ವ ವಾಣಿ’ ಪತ್ರಿಕೆಯ ಸಂಪಾದಕರಾಗಿಯೂ ಅನಕೃ ದುಡಿದರು. ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಬಲ್ಲವರಾಗಿದ್ದ ಅನಕೃ, ಸಂಗೀತ ಕ್ಷೇತ್ರವಲ್ಲದೆ ರಂಗಭೂಮಿ, ಸಿನೆಮಾ ಹೀಗೆ ಹಲವು ಕಲಾಮಾಧ್ಯಮಗಳಲ್ಲಿ ಆಸಕ್ತಿ ಮತ್ತು ಪರಿಣತಿಯನ್ನು ಹೊಂದಿದ್ದರು. ತಮ್ಮ ಭಾಷಣಗಳಿಂದಲೂ ಖ್ಯಾತರಾ ಗಿದ್ದ ಅವರು ತಮ್ಮ ಕಾಲದಲ್ಲಿ ಜನಪ್ರಿಯತೆ ಪಡೆದ ಪ್ರಭಾವಶಾಲಿಯಾದ ಸಾರ್ವಜನಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.

ಕನ್ನಡ ಕಟ್ಟುವಲ್ಲಿ ಅನಕೃ ತೋರಿದ ದಾರಿ ಮಾದರಿ ಯಾದುದು. ಕನ್ನಡ ಏಕೀಕರಣ ಚಳವಳಿಯಲ್ಲಿ ತೊಡಗಿಸಿಕೊಂಡ ಅವರು ಮುಂದೆ ಈ ಚಳವಳಿಯ ಮುಂದಾಳುಗಳಲ್ಲೊಬ್ಬರಾಗಿ ಹೊರಹೊಮ್ಮಿದರು. ಕನ್ನಡಿಗರ ಭಾಷೆ ಕುರಿತ ನಿರಭಿಮಾನದ ವಿರುದ್ಧ ಮತ್ತೆ ಮತ್ತೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಸ್ವಭಾಷೆ, ಸಂಸ್ಕೃತಿಗಳ ದ್ರೋಹಿಗಳಾದ (ಕನ್ನಡ ಮರೆತ, ತೆಲುಗು, ಮರಾಠಿ, ತಮಿಳು ಹಿಂದಿ ಯನ್ನು ವೈಭವೀಕರಿಸುವ) ಈ ಜನರೇ ನಮ್ಮ ಪರಮಶತ್ರುಗಳು; ಇವರನ್ನು ನಿರ್ದಾಕ್ಷಿಣ್ಯದಿಂದ ಮೆಟ್ಟಬೇಕು ಎಂಬ ಮಾತುಗಳಲ್ಲಿ ಅವರ ಆಕ್ರೋಶದ ತೀವ್ರತೆ ಕಾಣುತ್ತದೆ. ಇಂಗ್ಲಿಷ್‌ನ ವ್ಯಾಮೋಹದಲ್ಲಿ ಕನ್ನಡದ ಕಣ್ಣು ಕುರುಡಾಗದಿರಲಿ ಎಂಬ ಕಾಳಜಿ ಅವರ ‘ಈ ಬೆಳಕು ಕನ್ನಡದ ಮನೆ ಮನಚಿತ್ತಗಳನ್ನು ಬೆಳಗಬೇಕು. ಆದರೆ ಬೆಳಕನ್ನು ಬಳಸಿ ಕೊಳ್ಳುವ ಬಗೆಯನ್ನು ಕನ್ನಡಿಗರು ಮರೆಯಬಾರದು. ಕಣ್ಣು ಕಳೆದುಕೊಂಡು ಒಣ ಮೋಹಕ್ಕೆ ಪಕ್ಕಾಗಿ ತಮ್ಮ ಆತ್ಮನ ಮಹತಿಯನ್ನು ನೀಗಿಕೊಳ್ಳಬಾರದು’ ಎಂಬ ಮಾತುಗಳಲ್ಲಿದೆ. ಕನ್ನಡವು ಕನ್ನಡ ನಾಡಿಗೆ ಮೊದಲನೆಯದು. ಕನ್ನಡ ತಾಯಿಯ ಪೂಜೆಯ ನಂತರವೇ ಇತರ ಭಾಷಾ ದೇವಿಯ ಪೂಜೆ ಎಂದು ಕನ್ನಡವೇ ಪ್ರಧಾನ ಎಂದು ಎಚ್ಚರಿಸುತ್ತಾರೆ.

ಕನ್ನಡಿಗರಲ್ಲಿ ಕನ್ನಡದ ಬಗೆಗಿನ ಅಭಿಮಾನ ಕುಂದಲು ಕಾರಣಗಳೇನು ಎನ್ನುವುದು ಅನಕೃ ಅವರನ್ನು ಸದಾ ಕಾಡುವ ಸಂಗತಿಯಾಗಿತ್ತು. ನಮ್ಮಲ್ಲಿ ಆತ್ಮವಿಶ್ವಾಸ, ಹೆಮ್ಮೆ, ಸ್ವಾಭಿಮಾನಗಳ ಕೊರತೆ ಕಾಣಬರುತ್ತಿರುವುದೇತಕ್ಕೆ? ಅಂದು ಸಾಮ್ರಾಜ್ಯ ವಾಗಿದ್ದ ಕನ್ನಡ ನಾಡು ಇಂದು ಹರಿದು ಹಂಚಿ ಹೋಗಿರುವು ದೇತಕ್ಕೆ? ಕನ್ನಡ ಮಕ್ಕಳು ತಾವು ಕನ್ನಡಿಗರೆಂದು ಹೇಳಿಕೊಳ್ಳಲು ಹಿಂಜರಿಯುತ್ತಿರುವುದೇತಕ್ಕೆ? ಎಂಬ ಪ್ರಶ್ನೆಯನ್ನು ಅವರು ಕೇಳಿಕೊಳ್ಳುತ್ತಿದ್ದರು. ಕನ್ನಡದ ಬಗೆಗಿನ ಕಳಕಳಿ, ನಿರಭಿಮಾನಿ ಕನ್ನಡಿಗರ ಬಗ್ಗೆ ಆಕ್ರೋಶಗಳಿಂದ ಕೂಡಿರುವ ಅವರ ಆವೇಶದ ಭಾಷಣಗಳು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಗಿ ಕನ್ನಡಿಗರಲ್ಲಿ ಸ್ಫೂರ್ತಿ ತುಂಬುವ ಉದ್ದೇಶವನ್ನು ಹೊಂದಿರುವುದು ಕಾಣುತ್ತದೆ. ಹಿಂದಿಯ ಬಗೆಗಿನ ವಿರೋಧ ಏಕೀಕರಣ ಚಳವಳಿಯ ಹಲವು ಮುಂದಾಳುಗಳಲ್ಲಿತ್ತು. ಅನಕೃ ಅವರಿಗೆ ಹಿಂದಿ ಮುಂದೊಂದು ದಿನ ಕನ್ನಡಕ್ಕೆ ಎರವಾಗಬಹುದು ಎಂಬ ಆತಂಕವಿತ್ತು. ಹಿಂದಿಯನ್ನು ಮೈಸೂರು ವಿವಿಯು ಡಿಗ್ರಿ ಕೋರ್ಸುಗಳಲ್ಲಿ ಸೇರಿಸುವುದನ್ನು ಪ್ರಬಲವಾಗಿ ವಿರೋಧಿಸಿದ್ದ ಅವರು ‘ಇದು ಕನ್ನಡಿಗರ ವಿಷಮಕಾಲ’ ಎಂದೇ ಬಣ್ಣಿಸಿದ್ದರು.

ಕನ್ನಡಕ್ಕೆ ಅಪಾಯವಿರುವುದು ಇಂಗ್ಲಿಷ್‌ನಿಂದಲ್ಲ, ಹಿಂದಿಯಿಂದ ಎಂದು ಸಮಕಾಲೀನ ಕನ್ನಡ ವಿಚಾರ ಸಾಹಿತ್ಯದ ಒಂದು ವಲಯ ಭಾವಿಸುತ್ತಿದೆ. ಕೆ.ವಿ. ನಾರಾಯಣ ಅವರು ತಮ್ಮ ‘ಕನ್ನಡ ಜಗತ್ತು-ಅರ್ಧ ಶತಮಾನ ಕೃತಿಯಲ್ಲಿ ವಿವರಿಸುವಂತೆ ಇಂಗ್ಲಿಷ್ ಈಗ ಸಂಸ್ಕೃತದ ಜಾಗದಲ್ಲಿ ಕುಳಿತಿದೆ. ಆಳುವ ವರ್ಗದ ಒತ್ತಾಸೆ ಆ ಭಾಷೆಗೆ ಇರುವುದು ಇದಕ್ಕೆ ಮುಖ್ಯ ಕಾರಣ. ಇದರಿಂದ ಸ್ಪಷ್ಟವಾಗುವ ಇನ್ನೊಂದು ಸಂಗತಿ ಎಂದರೆ ಆಳುವ ವರ್ಗದ ಗುಣ ಲಕ್ಷಣಗಳು ಬದಲಾದರೆ ಸಹಜವಾಗಿಯೇ ಇಂಗ್ಲಿಷಿನ ಸ್ಥಾನ ಕುಸಿಯುತ್ತದೆ. ಸದ್ಯದ ಸಂಭವನೀಯ ಪ್ರವೃತ್ತಿಯನ್ನು ಕಂಡರೆ ಇಂಗ್ಲಿಷ್‌ನ ಜಾಗವನ್ನು ತುಂಬಲು ಸಿದ್ಧವಾಗಿ ನಿಂತಿರುವ ಭಾಷೆಯೆಂದರೆ ಹಿಂದಿ’ ಈ ಮುನ್ನೋಟ ಅನಕೃ ಅವರಲ್ಲಿ ಆಗಲೇ ಇತ್ತು. ಅನಕೃ ಅವರ ಚಿಂತನೆಗಳಲ್ಲಿ ಸಂಸ್ಕೃತ ಕುರಿತ ಎರಡು ಭಿನ್ನ ನಿಲುವುಗಳು ವ್ಯಕ್ತವಾಗುತ್ತವೆ.

‘ಕನ್ನಡಕ್ಕೂ ಸಂಸ್ಕೃತಕ್ಕೂ ತಾಯಿ ಮಕ್ಕಳ ಮಧುರ ಬಾಂಧವ್ಯ ಬೆಳೆದುಬಂದಿದೆ. ಇದನ್ನು ಕನ್ನಡದ ಸಾಹಿತಿಗಳು, ಬೆಳೆಸುತ್ತಿದ್ದಾರೆಂದೇ ನಮ್ಮ ನಂಬಿಕೆ. ಆ ದೃಷ್ಟಿಯ ಕಡೆಗೇ ಹೆಚ್ಚು ಲಕ್ಷ ಕೊಡುವುದು ಎಲ್ಲ ವಿದ್ವತ್ ಪ್ರೇಮಿಗಳ ಕರ್ತವ್ಯವೆಂದು ನಾವು ವಿನಯದಿಂದ ಸೂಚಿಸಲಿಚ್ಛಿಸುತ್ತೇವೆ’ ಎಂದು ಸಂಸ್ಕೃತದೊಂದಿಗೆ ಸಂಬಂಧ ಮುಂದುವರಿಸುವ ಇಂಗಿತ ವ್ಯಕ್ತಪಡಿಸುವ ಅನಕೃ ಅವರೇ ಸಂಸ್ಕೃತ ಕನ್ನಡಿಗರ ಕುತ್ತಿಗೆಯ ಮೇಲಿನ ನೊಗವಾಗಬಾರದು ಎಂಬ ಭಾವನೆಯನ್ನು ಕನ್ನಡ ಕವಿಗಳು ಆಗಿಂದಾಗ್ಗೆ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಆದ್ದರಿಂದ ‘ಸಾಹಿತ್ಯಕ್ಕೂ, ಜನಜೀವನಕ್ಕೂ ಹೆಚ್ಚು ಸಂಬಂಧ ಬೆಳೆಯಬೇಕೆಂದು ಹಾರೈಸುವ ದಿವಸದಲ್ಲಿ ಸಂಸ್ಕೃತದ ಚಿನ್ನದ ಸಂಕೋಲೆ ಬೇಡ ಎಂದು ಹೇಳುವುದು ಯಥಾರ್ಥವಾಗಿಯೇ ಇದೆ’ ಎಂದು ಸಂಸ್ಕೃತದ ಹಂಗನ್ನು ಕಿತ್ತೊಗೆಯುವ ಅನಿವಾರ್ಯತೆಯನ್ನೂ ತಿಳಿಸುತ್ತಾರೆ.ಸ್ವಾತಂತ್ರ ಚಳವಳಿ ಮತ್ತು ಏಕೀಕರಣ ಚಳವಳಿ ಏಕಕಾಲದಲ್ಲಿ ನಡೆಯುತ್ತಿದ್ದರೂ ಒಂದು ವರ್ಗ ಕರ್ನಾಟಕ ಏಕೀಕರಣ ಮತ್ತು ಪ್ರಜಾಪ್ರಭುತ್ವ ಎರಡನ್ನೂ ಒಂದೇ ಎಂದು ಗ್ರಹಿಸುವ ಕೊರತೆಯಿತ್ತು. ಅದು ಕರ್ನಾಟಕವನ್ನು ಆಳಿದ ಅರಸರನ್ನು ಕೊಂಡಾಡುತ್ತಿದ್ದಂತೆ ವರ್ತಮಾನದಲ್ಲಿ ಆಳುತ್ತಿದ್ದ ಅರಸರನ್ನೂ ಕೊಂಡಾಡುತ್ತಿತ್ತು. ಆದರೆ ಅನಕೃ ಏಕೀಕರಣ ಮತ್ತು ಪ್ರಜಾಪ್ರಭುತ್ವವನ್ನೂ ಅಖಂಡವಾಗಿ ಗ್ರಹಿಸಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಗೂ ನಾಡಿನ ಪ್ರಗತಿಗೂ ಇರುವ ಸಂಬಂಧದ ಸ್ಪಷ್ಟತೆ ಅನಕೃ ಅವರಿಗಿತ್ತು. ‘ಕರ್ನಾಟಕದಲ್ಲಿ ಅನೇಕ ಆಶಿತ ಸಂಸ್ಥಾನಗಳಿವೆ. ಕೆಲವು ಮೈಸೂರು, ಹೈದರಾಬಾದ್, ಕೊಲ್ಹಾಪುರಗಳಂತೆ ದೊಡ್ಡವು. ಕೆಲವು ಈಚಲಕರಂಜಿ, ಸಂಡೂರು, ಕುರಂದವಾಡಗಳಂತೆ ಅತಿ ಸಣ್ಣವು. ಈ ಸಣ್ಣ ಸಂಸ್ಥಾನಗಳನ್ನು ದೊಡ್ಡ ಸಂಸ್ಥಾನಗಳೊಂದಿಗೆ ಸೇರಿಸುವ ಪ್ರಯತ್ನ ಆರಂಭವಾಗಿದೆ. ಮುಂದೆ ಕೆಲವೇ ಸಂಸ್ಥಾನಗಳು ಕರ್ನಾಟಕದಲ್ಲಿ ಉಳಿಯಬಹುದೆಂದು ಭಾವಿಸೋಣ. ಇವುಗಳ ಭವಿಷ್ಯವೇನು? ಬ್ರಿಟಿಷ್ ಕರ್ನಾಟಕ ಸರ್ವತೋಮುಖವಾದ ಪ್ರಗತಿಯನೈದುತ್ತಿದ್ದರೆ ಆಶಿತ ಸಂಸ್ಥಾನಗಳು ಅದೇ ಮಧ್ಯಕಾಲದ ರಾಜ್ಯಶಾಸನದಲ್ಲಿ ಮಗ್ನವಾಗಿರಬೇಕೇ? ಆಶಿತ ಸಂಸ್ಥಾನಗಳ ಪ್ರಜೆಗಳಿಗೆ ಮುಕ್ತಿಯೇ ಇಲ್ಲವೇ?’ ಎಂಬ ಕಳಕಳಿ ರಾಜಸತ್ತೆಯ ವಿರೋಧಕ್ಕೆ ಕಾರಣವಾಗಿತ್ತು.

ಕರ್ನಾಟಕದ ಸಂಸ್ಥಾನಿಕರನ್ನು ಅದುವರೆಗೆ ಟೀಕಿಸುತ್ತಿದ್ದರೂ ರಾಜಕೀಯ ನಿಪುಣತೆಯಿಂದ ಸಂಯಮ ದಿಂದ ಮಾತನಾ ಡುತ್ತಿದ್ದ ಅನಕೃ ಅವರ ಭಾಷೆ ಭಾರತ ಬ್ರಿಟಿಷರಿಂದ ಸ್ವತಂತ್ರವಾಗುತ್ತಿದ್ದಂತೆ ಹೆಚ್ಚು ಕಠೋರತೆ ಮತ್ತು ದಿಟ್ಟತೆಯನ್ನು ಪಡೆದವು. ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಜನರು ರಾಜಕೀಯ ಅಧಿಕಾರ ಪಡೆಯುವುದು ಎಂಬ ಸೀಮಿತ ವ್ಯಾಖ್ಯಾನವೂ ಇದೆ. ಇಲ್ಲಿ ರಾಜಸತ್ತೆಯ ಕಾಲದಲ್ಲಿ ಯಾವ ಬಗೆಯ ಸಾಮಾಜಿಕ ವ್ಯವಸ್ಥೆಗಳಿದ್ದವೋ ಬದಲಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಅವು ಅದೇ ಬಗೆಯಲ್ಲಿ ಮುಂದುವರಿಯುತ್ತವೆ. ಈ ವಿಚಾರದಲ್ಲಿ ಅನಕೃ ಗಾಂಧಿ ಚಿಂತನೆಗಳ ಪರವಾಗಿದ್ದವರು. ‘ಎಂದಿನವರೆಗೆ ಭಾರತ ಹಾಗೂ ಹಿಂದೂ ಸಮಾಜ ಅಸ್ಪಶ್ಯತೆಯನ್ನು ಮಾನಿಸುವುದೋ ಅಂದಿನವರೆಗೆ ಪೂರ್ಣ ಸ್ವರಾಜ್ಯ ಕನಸಿನ ಗಂಟು. ಹಿಂದೂಧರ್ಮ ಉಳಿಯಬೇಕಾದರೆ ಅಸ್ಪಶ್ಯತೆ ಬುಡಸಹಿತ ನಾಶವಾಗಬೇಕು’ ಎಂಬ ಖಚಿತ ನಿಲುವು ಅವರದು. ಅನಕೃ ಅವರ ಕನ್ನಡ ಅಸ್ಮಿತೆ ಕುರಿತ ಚಿಂತನೆಗಳು ಜನಪ್ರಿಯ ನೆಲೆಯದ್ದಾದರೂ ಅವು ಬಹುಸಂಖ್ಯಾತರನ್ನು ಓಲೈಸಲು ಅಲ್ಪಸಂಖ್ಯಾತರನ್ನು ಕಡೆಗಣಿಸುವುದಿಲ್ಲ ಅಥವಾ ಕನ್ನಡಕ್ಕೆ ಅವರ ಕೊಡುಗೆಯನ್ನು ಮರೆಮಾಚುವುದಿಲ್ಲ. ಕರ್ನಾಟಕದ ವೈಭವದ ಚರಿತ್ರೆಯನ್ನು ನೆನೆಸಿಕೊಳ್ಳುವಾಗ ಅವರಲ್ಲಿ ಹಂಪೆ ಮತ್ತು ಶ್ರೀರಂಗಪಟ್ಟಣಗಳಲ್ಲಿ ತರತಮಗಳಿಲ್ಲ. ಅವರ ಭಾಷಣಗಳಲ್ಲಿ ಕನ್ನಡದ ಸಂಶೋಧಕರು ಉಲ್ಲೇಖಿಸದಿರುವ ಕನ್ನಡದ ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಯ ಅನನ್ಯ ಸ್ವರೂಪ ಮತ್ತು ಸತ್ವ ತುಂಬಿದ ನೂರಾರು ಅಲ್ಪಸಂಖ್ಯಾತ ಸಮುದಾಯದ ಹೆಸರುಗಳಿವೆ. ಕರ್ನಾಟಕದಲ್ಲಿ ನಡೆದ ಧಾರ್ಮಿಕ ಕೊಳ್ಳುಕೊಡುವಿಕೆಯ ನಿದರ್ಶನಗಳಿವೆ. ಅನಕೃ ಅವರು ಯಾವುದೋ ಸಂದರ್ಭದಲ್ಲಿ ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು ಈ ಪ್ರಸ್ತಾಪವನ್ನು ಮಾಡುವುದಿಲ್ಲ ಎನ್ನುವುದು ಬಹಳ ಮುಖ್ಯವಾದ ಸಂಗತಿ.

ಕರ್ನಾಟಕದಲ್ಲಿ ಹಿಂದೂ-ಮುಸ್ಲಿಮರ ಸಹಜ ಬಾಂಧವ್ಯ ಮತ್ತು ಪ್ರೇಮಗಳ ಬಗ್ಗೆಯೂ ಅನಕೃ ಬೆಳಕು ಚೆಲ್ಲುತ್ತಾರೆ. ‘ಹಿಂದುಗಳೂ ಮುಹಮ್ಮದ್ ಪೈಗಂಬರರ ಜನ್ಮದಿನೋತ್ಸವವನ್ನು, ಮುಸಲ್ಮಾನರೂ ಕೃಷ್ಣ ಜಯಂತಿಯನ್ನು ಆಚರಿಸಬೇಕು. ಹಿಂದೂಗಳು, ಮುಸಲ್ಮಾನರು ಧರ್ಮದ ಹೆಸರಿನಲ್ಲಿ ತಾವು ಬಿಮ್ಮನೆ ಬಿಗಿದಪ್ಪಿರುವ, ಮೂಢಭಾವನೆಗಳನ್ನು, ತಪ್ಪು ಅಭಿಪ್ರಾಯಗಳನ್ನೂ ದೂರ ಮಾಡಬೇಕು. ಕನ್ನಡನಾಡನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡು ಒಮ್ಮತದಿಂದ ವಿಶ್ವಧರ್ಮದ ಆರಾಧಕರಾಗಬೇಕು’ ಎಂದು ಹಂಬಲಿಸುತ್ತಾರೆ.

ಸಂಗೀತ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಕರ್ನಾಟಕದ ಗುರುತನ್ನು ಸ್ಪಷ್ಟವಾಗಿ ಮೂಡಿಸಲು ಅನಕೃ ನಿರಂತರ ಪ್ರಯತ್ನಿಸಿದರು. ಕನ್ನಡ ಸಂಗೀತ ಕನ್ನಡ ಭಾಷೆಯಲ್ಲಿಯೇ ಆಗಬೇಕು, ಕನ್ನಡ ನಾಡಿನಾದ್ಯಂತ ಈ ಸಂಗೀತವೇ ಪ್ರಸಾರದಲ್ಲಿರಬೇಕು, ಕರ್ನಾಟಕದಲ್ಲಿ ರಂಗಭೂಮಿ ಪುನರುದ್ಧಾರವಾಗಬೇಕೆಂಬುದು ಅನಕೃ ಕಾಳಜಿಯಾಗಿತ್ತು.

ಸಂಗೀತ ಕ್ಷೇತ್ರದಲ್ಲಿ ಕನ್ನಡ ಸಂಗೀತಗಾರರಿಗೆ ಪ್ರಾಮುಖ್ಯತೆ ಸಿಗಬೇಕೆಂದು ಅವರು ಹೋರಾಟಗಳನ್ನು ಹಮ್ಮಿಕೊಂಡಿದ್ದು ವಿಶಿಷ್ಟವಾಗಿದೆ. ಕರ್ನಾಟಕದ ರಾಜಧಾನಿಯಲ್ಲಿ ಸನ್ಮಾನಿತರಾಗಿ ಸಂಗೀತ ಕಛೇರಿಗಳನ್ನು ನಡೆಸುವ ಅವಕಾಶ ಕನ್ನಡ ಸಂಗೀತಗಾರರಿಗೆ ಸಿಗಬೇಕೆಂದು, ಅನ್ಯ ಭಾಷೆಯ ಸಂಗೀತಗಾರರು ತಮ್ಮ ಕಛೇರಿಗಳಲ್ಲಿ ಕನ್ನಡ ಕೃತಿಗಳನ್ನು ಪ್ರಸ್ತುತಪಡಿಸಬೇಕು ಎಂಬ ಆಗ್ರಹಗಳನ್ನಿಟ್ಟುಕೊಂಡು ಅವರು ಬೇರೆ ಭಾಷೆಯ ಸಂಗೀತಗಾರರೇ ತುಂಬಿರುತ್ತಿದ್ದ ಬೆಂಗಳೂರಿನ ಕೋಟೆ ಮೈದಾನದ ಶ್ರೀರಾಮೋತ್ಸವದ ಸಂಗೀತ ಕಛೇರಿಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಈ ಎಲ್ಲಾ ಕ್ರಿಯೆಗಳ ಹಿಂದೆ ಕನ್ನಡ ಕೇಂದ್ರಿತವಾದ ಒಂದು ಸಂಗೀತ ಪರಂಪರೆಯನ್ನು ರೂಪಿಸಬೇಕೆಂಬ ಉದ್ದೇಶ ಅನಕೃ ಅವರಿಗಿತ್ತು. ಕನ್ನಡನಾಡಿನ ರಂಗಭೂಮಿಯಲ್ಲಿ ಆಗಿರುವ ಸಾಧನೆಯ ಬಗ್ಗೆ ಅತೀವ ಅತೃಪ್ತಿ ಅನಕೃ ಅವರನ್ನು ಕಾಡುತ್ತಿತ್ತು. ಕರ್ನಾಟಕ ಏಕೀಕರಣ ಚಳವಳಿಗೆ ರಂಗಭೂಮಿಯನ್ನು ಬಳಸಿಕೊಳ್ಳುವ ಉದ್ದೇಶ ಅನಕೃ ಅವರಿಗಿತ್ತು. ಜನಜಾಗೃತಿಗೆ ರಶ್ಯಾ ರಂಗಭೂಮಿಯನ್ನು ಬಳಸಿಕೊಂಡದ್ದು ಅವರಿಗೆ ಪ್ರೇರಣೆಯನ್ನೊದಗಿಸಿತ್ತು. ರಂಗಭೂಮಿಯನ್ನು ಪುನಶ್ಚೇತನಗೊಳಿಸುವ ಕೆಲಸವನ್ನು ಸ್ವತಃ ಅವರೇ ಕೈಗೊಂಡರು. ಕರ್ನಾಟಕ ಏಕೀಕರಣವನ್ನು ಅದರ ಪೂರ್ಣತೆಯಲ್ಲಿ ಅನಕೃ ಗ್ರಹಿಸಿರುವುದಕ್ಕೆ ಅವರು ಕರ್ನಾಟಕ ಏಕೀಕರಣಕ್ಕೆ ಜನರನ್ನು ಒಂದುಗೂಡಿಸುವ ಉತ್ಸಾಹಭರಿತ ಭಾಷಣಗಳಿಗೆ ಸೀಮಿತವಾಗದೆ ಸಂಗೀತ ಕ್ಷೇತ್ರದಲ್ಲಿ ಕರ್ನಾಟಕ ಸಂಗೀತಕ್ಕೆ, ಕನ್ನಡ ಸಂಗೀತಗಾರರಿಗೆ ಆಗುತ್ತಿದ್ದ ಅನ್ಯಾಯವನ್ನು ಗಮನಿಸಿ ನ್ಯಾಯ ದೊರಕಿಸಲು ಮಾಡಿದ ಪ್ರಯತ್ನಗಳು, ರಂಗಭೂಮಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮಾಡಿದ ಚಿಂತನೆಗಳು ಮತ್ತು ಪ್ರಯತ್ನಗಳು, ಶಿಲ್ಪಕಲೆ, ಲಲಿತಕಲೆ, ಸಾಹಿತ್ಯ ಕ್ಷೇತ್ರಗಳತ್ತ ನೀಡಿದ ಗಮನ ನಿದರ್ಶನವಾಗಿವೆ.

Writer - ಡಾ. ಸರ್ಜಾಶಂಕರ ಹರಳಿಮಠ

contributor

Editor - ಡಾ. ಸರ್ಜಾಶಂಕರ ಹರಳಿಮಠ

contributor

Similar News