ಶಾಲೆ ಎಂದರೆ ಹೇಗಿರಬೇಕು?

Update: 2018-12-29 14:16 GMT

ಅಧ್ಯಯನ ಮತ್ತು ಅರಿವು

ಕಲಿಕೆಯೆಂಬ ಪ್ರಕ್ರಿಯೆ

ಭಾಗ1

ಕಲಿಕೆ ಹೇಗಿರಬೇಕು

ಬಹಳಷ್ಟು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗಳಿಗೆ ಶಾಲೆಯನ್ನು ಹೇಗೆ ನಡೆಸಬೇಕೆಂದು ತಿಳಿಯದಿರುವ ಕಾರಣದಿಂದ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ ಎಂದುಕೊಂಡರೆ, ಅದೇನು ಅಷ್ಟು ಸರಿ ಅಲ್ಲ. ಯಾವ ಕಾರಣಗಳಿಂದ ಶಾಲೆಗಳು ಸರಿಯಾದ ಶಿಕ್ಷಣ ಕೊಡುವಲ್ಲಿ ವಿಫಲವಾಗಿವೆ ಎಂಬುದನ್ನು ಒಂದು ಪಟ್ಟಿ ಮಾಡೋಣ.

1.ಮಗುತನವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವೈಫಲ್ಯ.

2.ಕಲಿಕೆಯ ಪ್ರಕ್ರಿಯೆಯನ್ನು ಗ್ರಹಿಸುವುದರಲ್ಲಿ ವೈಫಲ್ಯ.

3.ಕಲಿಕೆಯ ವಿಧಾನಗಳ ವೈವಿಧ್ಯಗಳ ಕೊರತೆ.

4.ಮಗುವಿನ ಮನೋವಿಜ್ಞಾನ ಮತ್ತು ಬೋಧನಾಕ್ರಮಗಳ ಸಮನ್ವಯಗಳ ಕೊರತೆ.

5.ವಿವಿಧ ನೂತನ ಮತ್ತು ಪ್ರಾಚೀನ ಕಲಿಕಾಕ್ರಮಗಳ ಬಗ್ಗೆ ಇರುವ ಅರಿವಿನ ಕೊರತೆ.

6.ಸೂಕ್ಷ್ಮ ದೃಷ್ಟಿ ಮತ್ತು ದೂರದೃಷ್ಟಿಗಳ ಕೊರತೆ.

7.ಜನಪ್ರಿಯ ಮತ್ತು ಸಿದ್ಧ ಮಾದರಿಗಳಿಗೆ ಜೋತುಬೀಳುವುದು.

8.ಸ್ಪರ್ಧಾತ್ಮಕ ವಿಷಯಗಳಿಗೆ ಒತ್ತು ಕೊಡುವ ಮೂಲಕ ಒತ್ತಡಗಳನ್ನು ತಂದುಕೊಳ್ಳುವುದು.

9.ಸಮಗ್ರ ಶಿಕ್ಷಣದ ಮೂಲಕ ಸಮಗ್ರ ವಿಕಾಸದ ಕಡೆಗೆ ಗಮನ ಕೊಡದೇ ಇರುವುದು.

10.ವ್ಯಕ್ತಿಗತ ಶಿಕ್ಷಣವನ್ನು ಮತ್ತು ಸಾಮೂಹಿಕ ಶಿಕ್ಷಣವನ್ನು ಸಮನ್ವಯಗೊಳಿಸಲು ಬಾರದೇ ಇರುವುದು. ಈ ಮೇಲ್ಕಂಡ ಎಲ್ಲಾ ಅಂಶಗಳು ಒಂದು ಶಾಲೆಯ ಶಿಕ್ಷಣ ವ್ಯವಸ್ಥೆಯ ವೈಫಲ್ಯಕ್ಕೆ ಕಾರಣವಾಗುತ್ತದೆ. ಈಗ ಒಂದೊಂದೇ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸೋಣ.

ಬಾಲ್ಯದಿಂದ ಪಲಾಯನ

ಶಾಲೆಯನ್ನು ನಡೆಸುವವರೇ ಆಗಲಿ, ಶಿಕ್ಷಣ ವ್ಯವಸ್ಥೆಯ ರೀತಿ ನೀತಿಗಳನ್ನು ರೂಪಿಸುವವರೇ ಆಗಲಿ, ಶಿಕ್ಷಕರೇ ಆಗಲಿ, ಶಿಕ್ಷಕರೇತರ ಶಾಲಾ ಸಿಬ್ಬಂದಿಗಳಾಗಲಿ ಮತ್ತು ಪೋಷಕರಾಗಲಿ; ಯಾರು ತಮ್ಮ ಬಾಲ್ಯದಿಂದ ಪಲಾಯನ ಮಾಡಿರುತ್ತಾರೋ ಅವರಿಗೆ ತಾವು ಈಗ ಕಾಣುತ್ತಿರುವ ಮಕ್ಕಳ ಬಾಲ್ಯವನ್ನು ಅಥವಾ ಮಗುತನವನ್ನು ಜತನ ಮಾಡಲು ಬರುವುದಿಲ್ಲ.

ಇಲ್ಲಿ ಎರಡು ಅಂಶಗಳನ್ನು ಗಮನಿಸ ಬೇಕು. ಒಂದು ಬಾಲ್ಯದಿಂದ ಪಲಾಯನ, ಮಗುತನದ ಜತನ. ಈ ಎರಡೂ ಪೋಷಕರು ಮತ್ತು ಶಿಕ್ಷಕರಿಗೆ ನೇರವಾಗಿ ಸಂಬಂಧಿಸಿರುವುದು. ಯಾರ್ಯಾರು ತಮ್ಮ ಬಾಲ್ಯದಲ್ಲಿ ಮಗುತನದ ಸಹಜತೆಯಲ್ಲಿ ಬೆಳೆಯದೇ ಅಸುರಕ್ಷಿತವಾದ ಅಥವಾ ಭಯದ ವಾತಾವರಣದಲ್ಲಿರುವುದೋ, ವಯಸ್ಸಿಗೆ ಮೀರಿದ ಜವಾಬ್ದಾರಿಗಳನ್ನು ಹೊತ್ತು ದುಡಿಯುವುದೋ, ಸದಾ ದೊಡ್ಡವರ ಓಲೈಕೆಗೇ ಶ್ರಮಿಸುತ್ತಾ, ಹೇಳಿದ ಮಾತುಗಳನ್ನು ಕೇಳಿಕೊಂಡು ಶಹಬ್ಬಾಸ್ ಪಡೆದುಕೊಳ್ಳುತ್ತಾ ಇರುವುದೋ, ಸಮವಯಸ್ಕರೊಡನೆ ಆಡದೇ, ಕಲಿಯದೇ ಸದಾ ದೊಡ್ಡವರನ್ನೋ ಅಥವಾ ಇತರ ಕಸುಬುದಾರರನ್ನೋ ನೋಡಿಕೊಂಡು ಬೆಳೆದಿರುವುದೋ, ಸದಾ ಸಿದ್ಧ ಮಾದರಿಗಳನ್ನು ಅನುಸರಿಸಿಕೊಂಡು, ನಿರ್ದೇಶನಗಳಲ್ಲೇ ಕೆಲಸಗಳನ್ನು ಮಾಡಿಕೊಂಡು ಇರುವುದೋ, ಅತಿಯಾದ ಶ್ರೀಮಂತಿಕೆ ಅಥವಾ ಅತಿಯಾದ ಬಡತನಗಳಲ್ಲಿರುವುದೋ, ಧಾರ್ಮಿಕತೆ ಅಥವಾ ಯಾವುದೇ ಸೈದ್ಧಾಂತಿಕ ಪ್ರಭಾವಗಳಲ್ಲಿಯೇ ಕಟ್ಟುನಿಟ್ಟಾಗಿ ಬೆಳೆಯುವುದೋ; ಈ ಯಾವುದೇ ಕಾರಣಗಳು ಬಾಲ್ಯದಿಂದ ಪಲಾಯನವಾಗುವ ಸಾಧ್ಯತೆಗಳಿರುತ್ತವೆ. ಬಾಲ್ಯದಿಂದ ತಪ್ಪಿಸಿಕೊಂಡ ಅಂತಹ ಮಕ್ಕಳು ತಾವು ವಯಸ್ಕರಾದಾಗ ತಮ್ಮ ಸುಪರ್ದಿಗೆ ಬರುವ ಯಾವುದೇ ಮಗುವಿನ ಮಗುತನವನ್ನು ಜತನ ಮಾಡುವುದರಲ್ಲಿ ಸಾಮಾನ್ಯವಾಗಿ ವಿಫಲರಾಗುತ್ತಾರೆ. ಅದಕ್ಕೆ ಕಾರಣವೆಂದರೆ ಅವರ ಮೇಲೆ ತೀವ್ರವಾಗಿ ಬೀರಿರುವ ಪ್ರಭಾವಗಳ ಪೂರ್ವಾಗ್ರಹಗಳು. ತಮ್ಮ ಬಾಲ್ಯದ ನೆನಪುಗಳೇ ಅಥವಾ ವಿಸ್ಮತಿಗೆ ಜಾರಿರುವ ಬಾಲ್ಯಗಳ ಪ್ರಭಾವಗಳೇ ತಾವು ಈಗ ಕಾಣುತ್ತಿರುವ ಮಕ್ಕಳ ಬಾಲ್ಯದಲ್ಲಿ ಪ್ರತಿಫಲನವಾಗುವುದನ್ನು ಬಯಸುತ್ತಾರೆ. ಅಥವಾ ಆ ದಿಕ್ಕಿನಲ್ಲಿಯೇ ಕಾಣುವಂತಹ ದೃಷ್ಟಿಯು ರೂಪುಗೊಂಡಿರುವುದರಿಂದ ಸದ್ಯದ ಕಾಲಘಟ್ಟದ ಮಗುವಿನ ಬಾಲ್ಯವನ್ನು ಅಥವಾ ಸಾಮಾನ್ಯವಾಗಿರುವ ಮಗುತನವನ್ನು ಗುರುತಿಸಲು ವಿಫಲರಾಗುತ್ತಾರೆ. ಅದೇ ಕಾರಣದಿಂದ ಮಗುತನವನ್ನು ಜತನ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. ಅವರಿಗೆ ಮೊದಲಿಗೆ ಮಗುತನದ ಸಹಜತೆಯನ್ನೇ ಗುರುತಿಸಲು ಸಾಧ್ಯವಾಗದ ಕಾರಣ ಅವರು ಮಕ್ಕಳನ್ನು ಪ್ರತಿಯೊಂದಕ್ಕೂ ತಿದ್ದಲು ಹೋಗುತ್ತಾರೆ. ನೀವು ಯಾರೇ ಹಿರಿಯರನ್ನು ನೋಡಿ, ಮಕ್ಕಳನ್ನು ಹಾಗಿರಬಾರದು, ಹೀಗಿರಬೇಕು ಎಂದು ಸದಾ ತಿದ್ದುವುದರಲ್ಲೇ ನಿರತರಾಗಿರುತ್ತಾರೆ ಎಂದರೆ ಅವರು ತಮ್ಮ ಬಾಲ್ಯವನ್ನು ಕಳೆದುಕೊಂಡಿದ್ದಾರೆ ಎಂದೇ ಅರ್ಥ. ಕೆಲವೊಮ್ಮೆ ಅವರ ಅಣ್ಣ ಅಥವಾ ಅಕ್ಕನಂತಹ ಹಿರಿಯರು ಅಥವಾ ಚಿಕ್ಕಪ್ಪ, ಅತ್ತೆಯಂತಹ, ಕೆಲವೊಮ್ಮೆ ಪೋಷಕರೂ ಕೂಡಾ ಒಂದು ರೀತಿಯ ಅಂತರವನ್ನು ಕಾಯ್ದಿಟ್ಟುಕೊಂಡಿರುವುದಲ್ಲದೇ, ಒಂದು ಹಂತಕ್ಕೆ ಭಯವನ್ನಿಟ್ಟಿರುತ್ತಾರೆ. ಇದರಿಂದ ಅವರು ತಮ್ಮ ಸಹಜವಾದಂತಹ ಗುಣ ಸ್ವಭಾವಗಳನ್ನು ಉದ್ದೇಶಪೂರ್ವಕವಾಗಿ ಅವರಿಂದ ಮುಚ್ಚಿಡುತ್ತಿರುತ್ತಾರೆ. ತಮಗೆ ಏನೇ ಅನ್ನಿಸಿದರೂ ಹೇಳಿದರೆ ಅಥವಾ ವರ್ತಿಸಿದರೆ ತಪ್ಪಾಗಿಬಿಡುವುದೇನೋ ಎಂಬ ಅಂಜಿಕೆಯಲ್ಲೇ ದಿನಗಳನ್ನು ನೂಕುತ್ತಾ ಬಾಲ್ಯವನ್ನು ಕಳೆದುಕೊಂಡುಬಿಟ್ಟಿರುತ್ತಾರೆ. ಅವರು ತಮ್ಮನ್ನು ಸ್ವೀಕರಿಸುವರೋ ಇಲ್ಲವೋ ಎಂಬ ಶಂಕೆಯಿಂದಲೇ ತಾವೇನೇ ಸಹಜವಾಗಿ ಮಾಡಬಹುದಾದುದನ್ನು ಮಾಡದೇ ಅವರಿಗೆ ಇಷ್ಟವಾಗುವ ಅಥವಾ ಅವರಿಗೆ ಸಹ್ಯವಾಗುವ ರೀತಿಯಲ್ಲಿಯೇ ವರ್ತಿಸಲು ಯತ್ನಿಸುತ್ತಾ ತಮ್ಮ ಬಾಲ್ಯದಿಂದ ಪಲಾಯನ ಮಾಡಿಬಿಟ್ಟಿರುತ್ತಾರೆ. ಅಂತಹವರು ದೊಡ್ಡವರಾದಾಗ ತಮ್ಮ ಮುಂದೆ ಇರುವ ಸಧ್ಯದ ಮಕ್ಕಳನ್ನೂ ಕೂಡಾ ಅವರ ಸಹಜ ಚಟುವಟಿಕೆಗಳ ಮುಖೇನ ಸಾಮಾನ್ಯವಾಗಿ ಸ್ವೀಕರಿಸುವುದಿಲ್ಲ. ಹೀಗಿರಬೇಕು, ಹಾಗಿರಬೇಕು, ಮಕ್ಕಳು ಹೀಗಿದ್ದರೇನೇ ಸರಿ, ನಾವು ಮಕ್ಕಳಿದ್ದಾಗ ಹೀಗಿರಲಿಲ್ಲ; ಹೀಗೆ ನಾನಾ ವಿವರಣೆಗಳನ್ನು ನೀಡುತ್ತಾ ಮಕ್ಕಳು ತಮ್ಮ ಸಹಜತೆಯಲ್ಲಿರುವುದಕ್ಕೆ ಬಿಡುವುದಿಲ್ಲ. ಅಷ್ಟೇ ಅಲ್ಲ ಮಗುತನದ ಸಹಜತೆಗೆ ಪೂರಕವಾಗಿ ತಮ್ಮ ಕಲಿಕೆಯ ವಿಧಾನಗಳನ್ನು ರೂಪಿಸಿಕೊಳ್ಳುವುದಿಲ್ಲ. ಇದೇ ಬಹುಪಾಲು ಶಿಕ್ಷಕರು ಮತ್ತು ಪೋಷಕರಿಗಿರುವ ಸಮಸ್ಯೆ. ನಿರ್ಬಂಧಿತ ಬಾಲ್ಯದ ಪ್ರಭಾವಗಳಿಂದಾಗಿ ಸಧ್ಯದ ಮಕ್ಕಳನ್ನೂ ನಿರ್ಬಂಧಕ್ಕೆ ಒಳಪಡಿಸುತ್ತಲೇ ಇರುತ್ತಾರೆ. ತಾವು ಯೋಜಿಸಿರುವ ಕ್ರಮವೇ ಸರಿಯಾದುದೆಂದು, ತಮ್ಮ ಯೋಚನೆಗಳೇ ಸರಿಯೆಂದು ಅಂದುಕೊಳ್ಳುತ್ತಾ ಪ್ರಸ್ತುತ ಕಾಲಘಟ್ಟದ ನವನವೀನ ತಂತ್ರಜ್ಞಾನಗಳನ್ನು ಆಧರಿಸಿ, ಮಾನಸಿಕವಾಗಿಯೂ ನವೀಕರಣಗೊಳ್ಳಲು ಕಷ್ಟಪಡುತ್ತಾರೆ. ಕೆಲವರು ಕಷ್ಟಪಡುತ್ತಾರೆ, ಆದರೆ ಕೆಲವರು ತಾವು ಕಷ್ಟಕ್ಕೆ ಒಳಗಾಗಲು ಇಷ್ಟಪಡದೇ ತಮ್ಮ ಪೂರ್ವಪ್ರಭಾವದ ಅಂಧಾನುಕರಣೆಯಲ್ಲಿ ತೊಡಗುತ್ತಾರೆ. ಇಂತವರಿಂದ ಮಗುತನದ ಜತನ ಸಾಧ್ಯವಿಲ್ಲ. ಮಕ್ಕಳಿಗೆ ಇವರಿಂದ ಹೆಚ್ಚುಹೆಚ್ಚು ಒತ್ತಡಗಳು ಉಂಟಾಗುತ್ತವೆ. ಈ ಮಕ್ಕಳೂ ಕೂಡ ಅವರ ಬಾಲ್ಯದಿಂದ ವಂಚಿತರಾಗುವಂತೆ ಮಾಡುತ್ತಾರೆ. ಎಲ್ಲ ಹಿರಿಯರೂ ಇದನ್ನು ಬಹಳ ಗಮನವಿಟ್ಟು ನಮ್ಮನ್ನು ನಾವು ಪರೀಕ್ಷೆ ಅಥವಾ ಆತ್ಮಶೋಧ ಮಾಡಿಕೊಳ್ಳಬೇಕು. ಒಂದು ವೇಳೆ ನಾವು ನಮ್ಮ ಬಾಲ್ಯದಿಂದ ವಂಚಿತರಾಗಿದ್ದರೂ, ನಮ್ಮ ಕಣ್ಮುಂದೆ ಇರುವಂತಹ ಮಕ್ಕಳು ತಮ್ಮ ಬಾಲ್ಯದಿಂದ ವಂಚಿತರಾಗದಿರುವಂತೆ ನೋಡಿಕೊಳ್ಳಬೇಕಾಗಿರುವುದು ಕರ್ತವ್ಯ ಮತ್ತು ಆ ಮಕ್ಕಳ ಹಕ್ಕು.

ಕಲಿತು ಮುಗಿಸಿದರೆ ಸಾಕು

ಇನ್ನು ಬಾಲ್ಯದಿಂದ ವಂಚಿತರಾಗಿರುವರದ್ದೋ ಅಥವಾ ಪಲಾಯನ ಮಾಡಿರುವವರದ್ದೋ ಕಲಿಕೆಯ ಒತ್ತಡದಿಂದ ಮಕ್ಕಳಿಗೆ ಅಥವಾ ಕಲಿಯುವ ವಿದ್ಯಾರ್ಥಿಗಳಿಗೆ ಯಾವುದೇ ಕಲಿಕೆಯು ‘‘ಸದ್ಯ ಮುಗಿದರೆ ಸಾಕು’’ ಎಂಬ ಭಾವ ಆವರಿಸುತ್ತದೆ. ಯಾವ ಮಕ್ಕಳಿಗೆ ಸದ್ಯ ಈ ಕಲಿಕೆ ಮುಗಿದರೆ ಸಾಕು ಎಂಬ ಆಲೋಚನೆ ಯಾವಾಗ ಬರುತ್ತದೆಯೋ ಅಥವಾ ಅದನ್ನು ಅವರು ವ್ಯಕ್ತಪಡಿಸುತ್ತಾರೋ ಆ ಕೂಡಲೇ ಪೋಷಕರಾಗಲಿ, ಶಿಕ್ಷಕರಾಗಲಿ ಎಚ್ಚೆತ್ತುಕೊಳ್ಳಬೇಕು. ಏಕೆಂದರೆ, ಈ ಕಲಿಕೆ ಮುಗಿದರೆ ಸಾಕು ಎಂಬ ಭಾವವು ನಾನಾ ಕಾರಣಗಳಿಂದ ಉಂಟಾಗುತ್ತದೆ.

1.ಕಲಿಸುವವರ ಧೋರಣೆ ಮತ್ತು ಕಿರುಕುಳ.

2.ನಿರ್ದಿಷ್ಟ ಎತ್ತರದ ಗುರಿ ಮತ್ತು ಅದನ್ನು ತಲುಪಲೇ ಬೇಕೆಂಬ ಒತ್ತಡ ಅಥವಾ ಅನಿವಾರ್ಯತೆ.

3.ಇಷ್ಟವೇ ಇಲ್ಲದಿದ್ದು, ಮನೆಯವರ ಒತ್ತಾಯದಿಂದ ಕಲಿಯಲೇ ಬೇಕಾಗಿದ್ದು, ಅದನ್ನು ಕಲಿಯದಿದ್ದರೆ ಸಂಬಂಧಗಳಲ್ಲಿ ಬಿರುಕು ಅಥವಾ ಸವಲತ್ತುಗಳ ಕೊರತೆ.

4.ಸಹಜವಾದ ಸಾಮರ್ಥ್ಯವು ಆ ನಿರ್ದಿಷ್ಟ ಕಲಿಕೆಗೆ ಇಲ್ಲದಿದ್ದು ಒದ್ದಾಡುವಂತಹ ಪರಿಸ್ಥಿತಿ.

5.ಪರೀಕ್ಷೆ ಎದುರಿಸಲೇ ಬೇಕಾಗಿರುವ ಅಥವಾ ಅಂಕಗಳನ್ನು ಪಡೆಯಲೇ ಬೇಕಾಗಿರುವಂತಹ ಪರಿಸ್ಥಿತಿ. ಹೀಗೆ ಇನ್ನೂ ಹಲವು ಕಾರಣಗಳು ಇದ್ದಿರಬಹುದು. ಆದರೆ, ಕಲಿಕೆ ಮುಗಿದರೆ ಸಾಕು ಎಂಬ ಬಹುದೊಡ್ಡ ದೋಷಪೂರಿತ ಮನಸ್ಥಿತಿಯು ಯಾವುದೇ ಕಾರಣಕ್ಕೆ ಬರದ ಹಾಗೆ ನೋಡಿಕೊಳ್ಳಬೇಕು. ಏಕೆಂದರೆ, ಯಾವುದೇ ಕಲಿಕೆಯು ಯಾವುದೇ ಪರೀಕ್ಷೆಯನ್ನು ಎದುರಿಸಿದ ನಂತರ ಮುಗಿಯುವಂತಹುದ್ದಲ್ಲ. ಕಲಿಕೆಯ ಆಯಾಮಗಳು ತೊಡಗಿದಂತೆ ವಿಸ್ತಾರಗೊಳ್ಳುತ್ತಲೇ ಇರುತ್ತವೆ. ಜೊತೆಗೆ ಕಲಿಕೆಯೆಂಬುದಕ್ಕೆ ನಿರ್ದಿಷ್ಟ ಅಂತ್ಯವಿಲ್ಲ ಮತ್ತು ಅದೊಂದು ಪ್ರಕ್ರಿಯೆ. ಕಸುಬಿಗಾಗಿ ಅಥವಾ ಅರ್ಹತಾ ಪತ್ರಕ್ಕಾಗಿ ಕಲಿಯುವುದು ಕೇವಲ ಒಂದು ಸಣ್ಣ ಘಟ್ಟ ಎಂಬುದಾಗಿ ಅವರಿಗೆ ಮಕ್ಕಳಿಗೆ ಅನ್ನಿಸಿದ್ದು, ತಾವು ಕಲಿಯುತ್ತಿರುವುದರಲ್ಲಿ ಕುತೂಹಲವನ್ನು ಬೆಳೆಸಿಕೊಳ್ಳುತ್ತಾ ದಾಹ ಮತ್ತು ಹಸಿವನ್ನು ಹೆಚ್ಚಿಸಿಕೊಂಡು ಹೋಗುವುದರಲ್ಲಿಯೇ ಆ ಕಲಿಕೆಯ ಸಾರ್ಥಕತೆ ಇರುವುದು. ಹಾಗಾದಾಗಲೇ ಸಂಶೋಧನೆಗಳು, ಉನ್ನತ ಅಧ್ಯಯನಗಳು, ಆವಿಷ್ಕಾರಗಳು ಉಂಟಾಗುವುದು. ಯಾವ ಶಾಲೆಯ ವಿದ್ಯಾರ್ಥಿಯು ಸಧ್ಯ ಇದೊಂದು ಪಾಸ್ ಆಗಿಬಿಟ್ಟರೆ ಸಾಕು ಎಂದರೆ ಆ ಶಾಲೆಯು ತನ್ನ ಶಿಕ್ಷಣ ವ್ಯವಸ್ಥೆಯಲ್ಲಿ ಅಥವಾ ಬೋಧನಾಕ್ರಮದಲ್ಲಿ ಲೋಪಗಳನ್ನು ಹೊಂದಿದೆ ಎಂದೇ ಅರ್ಥ. ಆ ಮಕ್ಕಳ ಮೇಲೆ ಅತೀವವಾದ ಮಾನಸಿಕ ಒತ್ತಡಗಳನ್ನು ಹೇರಿದ್ದರೆಂದು ಅರ್ಥ. ಆದ್ದರಿಂದ ಪೋಷಕರಾಗಲಿ, ಶಿಕ್ಷಕರಾಗಲಿ, ತಮ್ಮ ಮಗುವು ಅಥವಾ ಮಕ್ಕಳು ಅವರ ಕಲಿಕೆಯಲ್ಲಿ ನಿಧಾನವಾದ ಪ್ರಗತಿಯನ್ನು ಕಂಡರೂ ಅಥವಾ ಕಾಣದೇ ಇದ್ದರೂ ಎಚ್ಚರಿಕೆಯಿಂದ ಕಲಿಕೆಯ ಪ್ರಕ್ರಿಯೆಗೆ ಅವರು ತೊಡಗಿಕೊಳ್ಳಲು ಪ್ರೇರೇಪಿಸಬೇಕು. ಇದಕ್ಕೆ ಪರಿಹಾರವೆಂದರೆ, ಬೋಧನಾಕ್ರಮವನ್ನು ಬದಲಿಸುವುದು. ನಕಾರಾತ್ಮಕವಾದಂತಹ ಪ್ರತಿಕ್ರಿಯೆಗಳನ್ನು ಕೊಡದಿರುವುದು. ಮಕ್ಕಳ ಆಲೋಚನಾ ಲಹರಿ, ಆಸಕ್ತಿಯ ಕ್ಷೇತ್ರ, ಕುತೂಹಲ ಇರುವಂತಹ ವಿಷಯಗಳನ್ನು ಗುರುತಿಸುವುದು. ಅದರ ಸಹಾಯಗಳನ್ನು ಪಡೆದುಕೊಂಡು ಅವರಿಗೆ ಕಲಿಕೆಯಲ್ಲಿ ಆಸಕ್ತಿಯನ್ನು ಹೊಂದುವಂತೆ ಮಾಡುವುದು. ಇದೆಲ್ಲವೂ ಕೂಡಾ ಪೋಷಕರು ಮತ್ತು ಶಿಕ್ಷಕರು ಕೂಡಿಯೇ ಮಾಡುವುದಾಗಿರುತ್ತದೆ. ಆದ್ದರಿಂದಲೇ ಉತ್ತಮ ಶಾಲೆಗಳ ಲಕ್ಷಣವೆಂದರೆ ಯಾವುದೇ ಹೊಸ ವಿದ್ಯಾರ್ಥಿಗಳ ಆಗಮನವಾಗುತ್ತಿದ್ದಂತೆ ವರುಷದ ಪ್ರಾರಂಭದಲ್ಲಿಯೇ ಪ್ರತಿಭಾ ಪ್ರದರ್ಶನಗಳನ್ನು ಏರ್ಪಡಿಸುವುದು. ಮಕ್ಕಳು ತಮ್ಮ ಆಸಕ್ತಿಯ ವಿಷಯಗಳನ್ನು, ಕಲೆಗಳನ್ನು ಪ್ರದರ್ಶಿಸುವುದು. ಇದರಿಂದ ಶಿಕ್ಷಕರಿಗೆ ಒಂದು ಹಂತಕ್ಕೆ ಮಕ್ಕಳ ಆಸಕ್ತಿ ಮತ್ತು ಕುತೂಹಲ ಯಾವ ಕ್ಷೇತ್ರದಲ್ಲಿದೆ ಎಂದು ತಿಳಿಯುತ್ತದೆ. ವಿಶೇಷವಾಗಿ ತಮ್ಮನ್ನು ತಾವು ಪ್ರದರ್ಶನಕ್ಕೆ ಒಳಪಡಿಸಿಕೊಳ್ಳುವ ಮಕ್ಕಳದ್ದು ಒಂದು ಬಗೆಯಾದರೆ, ತಮ್ಮನ್ನು ತಾವು ಯಾವ ರೀತಿಯಲ್ಲಿಯೂ ಪ್ರದರ್ಶನಕ್ಕೆ ಇಟ್ಟುಕೊಳ್ಳದ ಅಥವಾ ಪ್ರದರ್ಶನಕ್ಕಿಡಲು ಏನೂ ಇರದಂತಹ ಮಕ್ಕಳೂ ಇರುವರು. ಹಾಗಾಗಿಯೇ ಯಾವುದೇ ಶಾಲೆಯಾಗಲಿ, ಹೊಸ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡ ಮೇಲೆ ಒಂದಷ್ಟು ವ್ಯಕ್ತಿಗತ ಸಮಾಲೋಚನೆಗಳನ್ನು ಮಾಡಬೇಕು. ಮಗುವಿನ ಜೊತೆಗೆ ಮುಕ್ತವಾಗಿ ಮಾತನಾಡಿ ಮಗುವಿನ ಮಾನಸಿಕ, ಭಾವನಾತ್ಮಕ ಮತ್ತು ಬೌದ್ಧಿಕ ಸ್ಥಿತಿಗತಿಗಳನ್ನು ಅರಿತುಕೊಂಡು ಅದನ್ನು ದಾಖಲು ಮಾಡಿಕೊಳ್ಳಬೇಕು. ಇದರಿಂದ ಕಲಿಕೆಯ ಪ್ರಕ್ರಿಯೆಯಲ್ಲಿ ಮಗುವನ್ನು ತೊಡಗಿಸಲು ಬಹಳಷ್ಟು ಅನುಕೂಲಕರವಾಗಿರುತ್ತದೆ.

ಯೋಗೇಶ್ ಮಾಸ್ಟರ್

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News