ಹರಿಖೋಡೆ ಕುಟುಂಬದಿಂದ ಭೂಮಿ ಕಬಳಿಸಲು ಹುನ್ನಾರ: ಮಾಲಕ ಎ.ಮಾರಪ್ಪ ಆರೋಪ
ಬೆಂಗಳೂರು, ಡಿ.29: ಬಿ.ಎಂ.ಕಾವಲ್‌ನ 285.9 ಎಕರೆ ರೈತರ ಹಿಡುವಳಿ ಜಮೀನನ್ನು ಸರಕಾರ ಹಾಗೂ ಮದ್ಯದ ಉದ್ಯಮಿ ಹರಿಖೋಡೆ ಕುಟುಂಬ ಕಬಳಿಸಲು ಹುನ್ನಾರ ಮಾಡುತ್ತಿವೆ ಎಂದು ಭೂಮಿಯ ಮಾಲಕ ಎ.ಮಾರಪ್ಪ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿಯ ಬಿ.ಎಂ.ಕಾವಲ್ ಗ್ರಾಮದ 285.9 ಎಕರೆ ಭೂಮಿಗೆ ನಾವೇ ಮಾಲಕರಾಗಿದ್ದು, ನಮ್ಮ ಜಮೀನು ಕಬಳಿಸಲು ಸರಕಾರದ ಅಧಿಕಾರಿಗಳ ಜೊತೆ ಉದ್ಯಮಿ ಹರಿಖೋಡೆ ಕುಟುಂಬ ವಾಮ ಮಾರ್ಗ ಅನುಸರಿಸುತ್ತಿದೆ. ನಾವು ನಮ್ಮ ಜಮೀನಿಗೆ ಸಂಬಂಧಪಟ್ಟಂತೆ ಮೂಲ ದಾಖಲೆಗಳನ್ನು ಹಾಜರುಪಡಿಸಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.
ಈ ಹಿಂದೆ ಪರಿಶೀಲನೆಗಾಗಿ ಜಂಟಿ ಸದನ ಸಮಿತಿ ರಚಿಸಿದ್ದು, ಅಧ್ಯಕ್ಷರಾಗಿದ್ದ ಎ.ಟಿ.ರಾಮಸ್ವಾಮಿಯವರು ಬಿ.ಎಂ.ಕಾವಲ್ ಗ್ರಾಮದ 285.9 ಎಕರೆ ಜಮೀನಿನ ಬಗ್ಗೆ ಯಾವುದೇ ಮೂಲ ದಾಖಲೆಗಳನ್ನು ಪರಿಶೀಲಿಸದೆ ಹಾಗೂ ಮೂಲ ಜಮೀನಿನ ಮಾಲಕರನ್ನು ಸಂಪರ್ಕಿಸದೆ ಸರಕಾರಕ್ಕೆ ತಪ್ಪು ವರದಿ ನೀಡಿದ್ದಾರೆ. ಈಗಲೂ ದಾಖಲೆಗಳನ್ನು ಪರಿಶೀಲಿಸದೆ ಮಾಧ್ಯಮಗಳಿಗೆ ಹಾಗೂ ಸದನದಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.
ಭೂಮಿಯು ಸರಕಾರಿ ಜಾಗವೆಂದು, ಪಢ ಜಮೀನೆಂದು, ಅದರನ್ವಯ ಭೋವಿ ಜನಾಂಗಕ್ಕೆ ಸೇರಿದ 11 ವ್ಯಕ್ತಿಗಳಿಗೆ ತಲಾ 6 ಎಕರೆಯಂತೆ ಹೆಚ್ಚು ಆಹಾರ ಧಾನ್ಯ ಬೆಳೆಯುವ ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗಿದೆ ಎಂದು ದಾಖಲೆಗಳನ್ನು ಸೃಷ್ಟಿಸಲಾಗಿದೆ. ಅಲ್ಲದೆ, ಮೋಟಮ್ಮ ಹಾಗೂ ನಾಗಮ್ಮ ಜಮೀನಿಗೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿದ್ದು, ಅದರನ್ವಯ 24 ರೈತ ಕುಟುಂಬಕ್ಕೆ ಸೇರಿದ ಭೂಮಿಯನ್ನು ಖೋಡೆ ಕುಟುಂಬದವರೊಂದಿಗೆ ಸೇರಿ ಕಬಳಿಸಲು ಹೊರಟಿದ್ದಾರೆ ಎಂದು ಹೇಳಿದರು.