ಕೆರೂರು ವಾಸುದೇವಾಚಾರ್ಯರ 'ನೆನಪುಗಳು' ಕೃತಿಯ ಭಾಗ 'ಕೇಳಿದ ಕೆಲವು ಕಥೆಗಳು'

Update: 2018-12-30 06:21 GMT
ವಾಸುದೇವಾಚಾರ್ಯ

ವೀಣೆ ಸಾಂಬಯ್ಯನವರು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದ ಹಿರಿಯ ವಿದ್ವಾಂಸರು. ದೊರೆಗಳು ಬಿಟ್ಟಿದ್ದಂತೆಯೇ ಸಾಂಬಯ್ಯನವರೂ ಗಿರಿಜಾ ಮೀಸೆಯನ್ನು ಬೆಳೆಸಿದ್ದರು. ಅಭ್ಯಾಸಬಲದ ಮೇಲೆ ದೊರೆಗಳ ಸನ್ನಿಧಿಯಲ್ಲಿದ್ದಾಗಲೂ ಸಾಂಬಯ್ಯನ ವರು ಮೀಸೆಯನ್ನು ಹುರಿಮಾಡಿಕೊಳ್ಳುತ್ತಿದ್ದರಂತೆ. ‘ನನ್ನೆದುರಿನಲ್ಲೇ ಸಾಂಬಯ್ಯ ಮೀಸೆಯನ್ನು ತಿರುವುತ್ತಾರಲ್ಲ’ ಏನು ಮಾಡುವುದು? ಎಂದು ಕೃಷ್ಣರಾಜ ಒಡೆಯರು ಪೇಚಾಡುತ್ತಿದ್ದರಂತೆ.

ಪಗಡೆ ಇಸ್ಪಿಟ್ ಚದುರಂಗ ಗಂಜೀಪು ಇವೇ ಆಗಿನ ಆಟಪಾಟಗಳು. ಬಕ್ಷಿ ಚಾಮಪ್ಪಾಜಿ, ಕಾಂತರಾಜೇ ಅರಸಿನವರು, ಷಹ ನಂಜಪ್ಪನವರು, ನಂಜುಂಡಶಾಸ್ತ್ರಿಗಳು, (ಪೋಕ್ರಿ) ಶ್ರೀಕಂಠಯ್ಯ, ಗೋಮಟಂ ಶ್ರೀನಿವಾಸಾಚಾರ್ಯ, ಕರವಟ್ಟಿ ಶಿಂಗ್ಲಾಚಾರ್ಯರು, ಇವರೇ ಮೊದಲಾದವರು ಚದುರಂಗದ ಆಟದಲ್ಲಿ ನಿಸ್ಸೀಮರು. ಬಕ್ಷಿ ಚಾಮಪ್ಪಾಜಿಯವರ ಕುಮಾರಿ ಇವರೆಲ್ಲರನ್ನೂ ಮೀರಿಸಿದ್ದರು.

ಕ್ಲೋಸ್‌ಪೇಟೆ ಅಂದರೆ ಈಗಿನ ರಾಮನಗರದಲ್ಲಿ ಆಗ್ಗೆ ಒಂದು ಮಿಲಿಟರಿ ಕ್ಯಾಂಪಿದ್ದಿತು. ಕಾಬೂಲ್ ದೇಶದಿಂದ ಕುದುರೆಗಳನ್ನು ಮಾರುವವನೊಬ್ಬ ಕುದುರೆಗಳನ್ನು ವಿಕ್ರಯಮಾಡುವ ಸಲುವಾಗಿ ಕ್ಲೋಸ್‌ಪೇಟೆಗೆ ಬಂದ. ಆತನೂ ಚದುರಂಗದಲ್ಲಿ ಬಲುಗಟ್ಟಿಗ. ಕ್ಯಾಂಪಿನಲ್ಲಿದ್ದ ಸೈನಿಕರಲ್ಲೊಬ್ಬಾತ ಬಹಳ ಚೆನ್ನಾಗಿ ಚದುರಂಗವನ್ನಾಡುತ್ತಾನೆ ಎಂಬ ಸುದ್ದಿ ಕಾಬೂಲಿನ ಕುದುರೆಯ ಮಾರಾಟಗಾರನಿಗೆ ತಿಳಿಯಿತು. ಹೇಗೋ ಅವನೊಡನೆ ಆಟವಾಡಲು ಅವಕಾಶ ಕಲ್ಪಿಸಿಕೊಂಡ. ಇಬ್ಬರು ಆಟಗಾರರ ನಡುವೆ ಪಂದ್ಯಗಳು ನಡೆದವು. ಸೈನಿಕರ ಕೈಚಳಕವನ್ನು ಕಂಡು ಬೆರಗಾದ ಮಾರಾಟಗಾರ ‘ಅದ್ಭುತ, ನಿನ್ನ ಆಟ’ ಎಂದು ಕೊಂಡಾಡಿದ. ‘ಅಯ್ಯೋ ಹುಚ್ಚ! ನನ್ನ ಆಟಕ್ಕೇ ನೀನು ಇಷ್ಟು ಮರುಳಾದೆಯಲ್ಲ! ನಿನಗೆ ನಿಜವಾಗಿಯೂ ಚದುರಂಗದಲ್ಲಿ ಆಸಕ್ತಿಯಿದ್ದು ಅದ್ಭುತವಾದ ಆಟವನ್ನು ನೋಡಬೇಕೆಂಬ ಆಸೆಯಿದ್ದರೆ ಮೈಸೂರಿಗೆ ಹೋಗಿ ಬಕ್ಷಿ ಚಾಮಪ್ಪಾಜಿಯವರ ಮಗಳ ಆಟವನ್ನು ನೋಡಬೇಕು. ಆದರೆ ಆಕೆಗೆ ಘೋಷ. ಆದ್ದರಿಂದ ಆಕೆಯೊಡನೆ ಆಟವಾಡುವುದು ಸಾಧ್ಯವಾಗಲಾರದು! ನೋಡು ಪ್ರಯತ್ನ ಮಾಡು. ಒಂದು ವೇಳೆ ನಿನ್ನ ಪ್ರಯತ್ನವೇನಾದರೂ ಕೈಗೂಡಿದರೆ ನಿನ್ನ ಜನ್ಮದಲ್ಲೇ ನೀನು ನೋಡರಿಯದ ಚದುರಂಗವನ್ನು ನೋಡಿ ಆನಂದಿಸುವೆ’ ಎಂದ ಆ ಸೈನಿಕ.

ಮಾರಾಟಗಾರನಿಗೆ ಕುತೂಹಲ ಕೆರಳಿತು. ಹೇಗಾದರೂ ಮಾಡಿ ಅರಸು ಮಗಳ ಆಟವನ್ನು ನೋಡಬೇಕೆಂಬ ಹೆಬ್ಬಯಕೆಯಾಯಿತು. ಮೈಸೂರಿಗೆ ಬಂದ. ಪ್ರತಿದಿನ ಬೆಳಗ್ಗೆ ಬಸಪ್ಪಾಜಿಯವರ ಬಂಗಲೆಯ ಮುಂದೆ ನಿಂತು ಬಸಪ್ಪಾಜಿಯವರು ಬಂಗಲೆಯಿಂದ ಹೊರಗಡೆ ಹೊರಡುವಾಗ ಅವರಿಗೆ ಕೈಮುಗಿದು ಹಿಂದಿರುಗುತ್ತಿದ್ದ. ಹೀಗೆ ನಾಲ್ಕಾರು ದಿನಗಳು ಕಳೆದಮೇಲೆ ಬಸಪ್ಪಾಜಿಯವರು ಮಾರಾಟಗಾರನನ್ನು ‘ಅಯ್ಯಾ! ಯಾರು ನೀನು? ಏನಾಗಬೇಕು? ಹೀಗೇಕೆ ಪ್ರತಿದಿನ ಕೈಮುಗಿದು ಹೋಗುತ್ತಿದ್ದೀಯೆ?’ ಎಂದು ಕೇಳಿದರು. ತನ್ನ ಹೆಬ್ಬಯಕೆಯನ್ನು ಆತ ಚಾಮಪ್ಪಾಜಿಯವರಲ್ಲಿ ವಿಜ್ಞಾಪಿಸಿಕೊಂಡ. ‘ನಮ್ಮಗಳಲ್ಲಿ ಘೋಷಾ ಪದ್ಧತಿಯಿರುವುದರಿಂದ ಎಷ್ಟರಮಟ್ಟಿಗೆ ನಿನ್ನ ಕೋರಿಕೆಯನ್ನು ನಡೆಸುವುದಕ್ಕಾಗುತ್ತದೆಯೋ ಹೇಳಲಾರೆ. ಆದರೂ ನನ್ನ ಮಗಳಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತೇನೆ. ನಾಳೆ ಬೆಳಗ್ಗೆ ಬಂದರೆ ಆಕೆಯ ಅಭಿಪ್ರಾಯವನ್ನು ತಿಳಿಸುತ್ತೇನೆ’ ಎಂದು ಹೇಳಿ ಚಾಮಪ್ಪಾಜಿ ಆತನನ್ನು ಕಳುಹಿಸಿಕೊಟ್ಟರು. ಒಳಗೆ ಬಂದು ನಡೆದ ಸಂಗತಿಯೆಲ್ಲವನ್ನೂ ಮಗಳಿಗೆ ತಿಳಿಸಿದರು. ‘ಅಗತ್ಯವಾಗಿ ಆಗಲಿ, ಅಪ್ಪಾಜಿ. ನಾಳೆಯ ಮಧ್ಯಾಹ್ನವೇ ಪಂದ್ಯವನ್ನು ಆಡಲು ನಾನು ಸಿದ್ಧ. ನಮ್ಮಿಬ್ಬರ ಮಧ್ಯೆ ಒಂದು ಪರದೆಯನ್ನು ಹಾಕಿಸಿಕೊಡಿ. ಪರದೆಯ ಮಧ್ಯೆ ಒಂದು ಸಣ್ಣ ಕಿಂಡಿಯಿರಲಿ. ಅದರ ಮೂಲಕ ನಾನು ಕಾಯಿಗಳನ್ನು ನೋಡಿಕೊಂಡು ಯಾವ ಕಾಯಿಯನ್ನು ನಡೆಸಬೇಕೆಂದು ತಿಳಿಸುತ್ತೇನೆ. ನನ್ನ ಪರವಾಗಿ ನೀವೇ ಕಾಯಿಗಳನ್ನು ನಡೆಸಿದರೆ ಆಯಿತು’ ಎಂದರು ಆಕೆ. ಮರುದಿನ ಬೆಳಗ್ಗೆ ಮಾರಾಟಗಾರ ಹಾಜರಾದ. ‘ಮಧ್ಯಾಹ್ನ ಪಂದ್ಯವನ್ನಾಡಲು ನನ್ನ ಮಗಳು ಸಿದ್ಧ’ ಎಂದರು ಚಾಮಪ್ಪಾಜಿ. ಆತನ ಸಂತೋಷಕ್ಕೆ ಪಾರವೇ ಇಲ್ಲ.

ಮಧ್ಯಾಹ್ನ ಗೊತ್ತಾದ ವೇಳೆಗೆ ಸರಿಯಾಗಿ ಹಾಜರಾದ. ಪಂದ್ಯಕ್ಕೆ ಎಲ್ಲ ಸಿದ್ಧತೆಗಳೂ ನಡೆದಿದ್ದವು. ಆತ ಅರಸುಕುಮಾರಿಗೆ ಕೈಮುಗಿದು ಆಟಕ್ಕೆ ಕುಳಿತ. ‘ಆಟ ಮೊದಲಾಗುವ ಮೊದಲೇ ಯಾವ ಪ್ಯಾದೆಯಿಂದ ಅವರ ಅರಸನನ್ನು ಹಿಡಿಸಬೇಕು ಕೇಳಿ ಅವರನ್ನು’ ಎಂದು ಅಪ್ಪಾಜಿಗೆ ಹೇಳಿದರು ಆಕೆ. ಅದನ್ನು ಕೇಳಿಯೇ ಅರ್ಧ ಜೀವ ಹಾರಿಹೋಯಿತು ಮಾರಾಟಗಾರನಿಗೆ. ಯಾವುದೋ ಒಂದು ಪ್ಯಾದೆಯನ್ನು ತೋರಿಸಿದ. ‘ಒಳ್ಳೆಯದು’ ಎಂದರು ಅರಸು ಮಗಳು. ಕೇವಲ ನಾಲ್ಕಾರು ಕಾಯಿಗಳನ್ನು ನಡೆಸುವಷ್ಟರಲ್ಲೇ, ಆತ ತೋರಿಸಿದ್ದ ಪ್ಯಾದೆಯನ್ನು ಮುಂದೆಮಾಡಿಕೊಂಡು ‘ಸಿಕ್ಕಿಬಿದ್ದ ನಿಮ್ಮ ರಾಜ’ ಎಂದರು ಆಕೆ. ಬೆರಗಾದ ಆ ಮಾರಾಟಗಾರ. ‘ನನ್ನ ಜನ್ಮದಲ್ಲೇ ಇಂಥ ಸೋಲನ್ನು ನಾನು ಅನುಭವಿಸಿಲ್ಲ, ಎಂತಹ ಚಮತ್ಕಾರ’ ಎಂದು ಹೇಳುತ್ತ ಆಕೆಗೆ ಕೈಮುಗಿದು ಮೇಲೆದ್ದ!

ವೀಣೆ ಸಾಂಬಯ್ಯನವರು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದ ಹಿರಿಯ ವಿದ್ವಾಂಸರು. ದೊರೆಗಳು ಬಿಟ್ಟಿದ್ದಂತೆಯೇ ಸಾಂಬಯ್ಯನವರೂ ಗಿರಿಜಾ ಮೀಸೆಯನ್ನು ಬೆಳೆಸಿದ್ದರು. ಅಭ್ಯಾಸಬಲದ ಮೇಲೆ ದೊರೆಗಳ ಸನ್ನಿಧಿಯಲ್ಲಿದ್ದಾಗಲೂ ಸಾಂಬಯ್ಯನ ವರು ಮೀಸೆಯನ್ನು ಹುರಿಮಾಡಿಕೊಳ್ಳುತ್ತಿದ್ದರಂತೆ. ‘ನನ್ನೆದುರಿನಲ್ಲೇ ಸಾಂಬಯ್ಯ ಮೀಸೆಯನ್ನು ತಿರುವುತ್ತಾರಲ್ಲ’ ಏನು ಮಾಡುವುದು? ಎಂದು ಕೃಷ್ಣರಾಜ ಒಡೆಯರು ಪೇಚಾಡುತ್ತಿದ್ದರಂತೆ. ‘ಹೇಗಾದರೂ ಮಾಡಿ ಸಾಂಬಯ್ಯನವರು ಒಂದು ಯಾಗವನ್ನು ಮಾಡುವಂತೆ ಮಾಡಿದರೆ ಯಾಗದೀಕ್ಷೆಯನ್ನು ಕೊಡುವ ಸಂದರ್ಭದಲ್ಲಿ ಅವರ ಗಡ್ಡಮೀಸೆಗಳನ್ನು ತೆಗೆದೇ ತೆಗೆಯುತ್ತಾರೆ. ತಮ್ಮ ಮುಂದೆ ಅವರು ಮೀಸೆ ಹುರಿಮಾಡುವುದು ತಾನಾಗಿಯೇ ತಪ್ಪುತ್ತದೆ’ ಎಂದು ಹತ್ತಿರವಿದ್ದವರು ಪ್ರಭುಗಳಿಗೆ ಸೂಚಿಸಿದರಂತೆ. ‘ಸೊಗಸಾದ ಉಪಾಯ’ ಎಂದರು ಪ್ರಭುಗಳು. ‘ಆದರೆ ಸಾಂಬಯ್ಯನವರನ್ನು ಈ ವಿಷಯದಲ್ಲಿ ಒಪ್ಪಿಸುವುದು ಹೇಗೆ?’ ಎಂಬುದು ಮುಂದಿನ ತೊಡಕಾಯಿತು. ಅದಕ್ಕೂ ಉಪಾಯವನ್ನು ಹೇಳಿಕೊಟ್ಟರು ದೊರೆಗಳ ಆಪ್ತರು. ‘ಸಾಂಬಯ್ಯನವರಿಗೆ ಸ್ವಲ್ಪ ಸಾಲಸಫಲವಿದೆ. ಅದನ್ನು ತೀರಿಸಿ ಸಾಂಬಯ್ಯನವರಿಗೆ ಸ್ವಲ್ಪ ಹೊಗಳಿಬಿಟ್ಟರೆ ಯಾವ ಕೆಲಸವನ್ನು ಬೇಕಾದರೂ ಅವರಿಂದ ಸುಲಭವಾಗಿ ಮಾಡಿಸಿಬಿಡಬಹುದು’ ಎಂದು ದೊರೆಗಳಿಗೆ ಸಲಹೆ ನೀಡಿದರು.

ಮಾರನೆಯ ದಿನ ಸಾಂಬಯ್ಯನವರೊಡನೆ ಮಾತುಕತೆಯಾಡುತ್ತಿರುವ ಸಮಯದಲ್ಲಿ ದೊರೆಗಳು ‘ಏನು ಸಾಂಬಯ್ಯನವರೇ ನಿಮಗೆ ಸ್ವಲ್ಪ ಸಾಲವಿದೆ ಅಂತ ಕೇಳಿದೆ ನಿಜವೇ’ ಎಂದರು. ‘ಹೌದು ಪ್ರಭು! ಅಲ್ಲಿ ಇಲ್ಲಿ ಸ್ವಲ್ಪ ಸಾಲ ಮಾಡಿದ್ದೀನಿ. ಏನೋ ಸಂಸಾರ ತಾಪತ್ರಯ’ ಎಂದರು ಸಾಂಬಯ್ಯ. ‘ಛೇ! ಎಲ್ಲಾದರೂ ಉಂಟೆ? ತಮ್ಮಂತಹ ಘನವಿದ್ವಾಂಸರಿಗೆ, ಸಾತ್ವಿಕಶಿರೋಮಣಿಗಳಿಗೆ ಸಾಲವೆಂದರೇನು? ಅದರಲ್ಲೂ ನಮ್ಮ ಆಸ್ಥಾನದಲ್ಲಿದ್ದುಕೊಂಡು?’ ಎಂದು ಪ್ರಭುಗಳು ಸಾಂಬಯ್ಯನವರಲ್ಲಿ ಬಹಳ ಅನುತಾಪ ತೋರಿದರು. ಹಿಗ್ಗಿ ಹೀರೇಕಾಯಾದರು ಸಾಂಬಯ್ಯ. ಸಾಂಬಯ್ಯನವರಿಂದ ಸಾಲದ ವಿವರಗಳನ್ನು ತಿಳಿದು ದೊರೆಗಳು ಸಾಂಬಯ್ಯನವರ ಸಾಲವನ್ನೆಲ್ಲ ಅರಮನೆಯಿಂದ ತೀರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಪ್ಪಣೆ ಮಾಡಿದರು. ಇದರ ಗುಟ್ಟನ್ನು ತಿಳಿಯದ ಸಾಂಬಯ್ಯ ಧರ್ಮಪ್ರಭುವಿನ ಉದಾರಹೃದಯವನ್ನು ಮನಸಾರ ಕೊಂಡಾಡಿದರು.

ಇಷ್ಟಾದ ನಾಲ್ಕಾರು ದಿನಗಳ ಮೇಲೆ ಪ್ರಭುಗಳು ಸಾಂಬಯ್ಯನವರನ್ನು ಬರಮಾಡಿಕೊಂಡು ಯಾಗದ ವಿಷಯವನ್ನು ಪ್ರಸ್ತಾಪಿಸಿದರು. ‘ತಾವು ಬಹಳ ಆಚಾರಪರರು, ನೇಮಿಷ್ಠರು. ತಮ್ಮಿಂದಲೇ ಈ ಯಾಗ ನಡೆಯಬೇಕೆಂದು ನಮ್ಮ ಅಭಿಲಾಷೆ. ಅದಕ್ಕೆ ಆಗುವ ವೆಚ್ಚವೆಲ್ಲವನ್ನೂ ನಾವು ವಹಿಸಿಕೊಳ್ಳುತ್ತೇವೆ. ಬೇಕಾದ ಏರ್ಪಾಡುಗಳೆಲ್ಲವನ್ನೂ ಅರಮನೆಯಿಂದಲೇ ಮಾಡಿಸಿಕೊಡುತ್ತೇವೆ. ತಾವು ದೊಡ್ಡ ಮನಸ್ಸು ಮಾಡಿ ಈ ಮಹತ್ಕಾರ್ಯವನ್ನು ಆಗಮಾಡಿಸಬೇಕು’ ಎಂದರು ದೊರೆಗಳು. ‘ಇದಕ್ಕಿಂತ ಪುಣ್ಯಕೆಲಸವುಂಟೆ ಪ್ರಭು? ಅಗತ್ಯವಾಗಿ ಆಗಲಿ’ ಎಂದರು ಸಾಂಬಯ್ಯನವರು. ‘ಸರಿ’, ಸಕಲ ಸಿದ್ಧತೆಗಳೂ ನಡೆದವು. ಯಾಗ ಪ್ರಾರಂಭವಾಗುವ ಸುದಿನವೂ ಪ್ರಾಪ್ತವಾಯಿತು. ಯಾಗಶಾಲೆಗೆ ಸಾಂಬಯ್ಯನವರನ್ನು ಗೌರವದಿಂದ ಕರೆದುತಂದರು. ದೀಕ್ಷೆ ತೆಗೆದುಕೊಳ್ಳುವ ಮೊದಲು ಆಯುಷ್ಕರ್ಮವಾಗಬೇಕೆಂದು ಋತ್ವಿಕರು ತಿಳಿಸಿದರು. ಆಗಲೇ ಮೀಸೆಯ ವಿಷಯದಲ್ಲಿ ಸಾಂಬಯ್ಯನವರಿಗೆ ಯೋಚನೆಗೆ ಮೊದಲಾಯಿತು. ತಲೆ ಗಡ್ಡಗಳನ್ನು ಬೋಳಿಸಿ ಕ್ಷೌರಿಕ ಮೀಸೆಗೆ ಸಾಬೂನನ್ನು ಹಚ್ಚಿದ. ‘ಮೀಸೆಯನ್ನೂ ತೆಗೆಯಬೇಕೇ?’ ಎಂದು ಸಾಂಬಯ್ಯ ಹಂಬಲಿಸಿದರು. ‘ಅಲ್ಲವೇ ಮತ್ತೆ?’ ಎಂದರು ಋತ್ವಿಕರು. ತಮ್ಮ ಪ್ರಾಣವನ್ನೇ ಬಲಿಕೊಟ್ಟಷ್ಟು ಸಂಕಟವಾಯಿತು ಸಾಂಬಯ್ಯನವರಿಗೆ. ಏಕಾದರೂ ಈ ಯಾಗ ಮಾಡಲು ಒಪ್ಪಿಕೊಂಡೆನೋ ಎಂದು ತಮ್ಮನ್ನು ತಾವೇ ಶಪಿಸಿಕೊಂಡರು. ಇದೆಲ್ಲ ಕೃಷ್ಣರಾಜ ಒಡೆಯರ ಸನ್ನಾಹವೇ ಇರಬೇಕೆಂದು ಒಳಗೊಳಗೇ ಗೊಣಗಿಕೊಂಡರು. ಏನಾದರೇನು? ಮೀಸೆ ಮಾಯವಾಯಿತು. ಯಾಗ ಪೂರ್ಣವಾಯಿತು. ದೊರೆಗಳ ಇಚ್ಛೆ ಪೂರೈಸಿತು.

ಶೃಂಗೇರಿ ಮಠದ ಜಗದ್ಗುರು ನರಸಿಂಹಭಾರತಿಗಳು ಒಮ್ಮೆ ಮೈಸೂರಿಗೆ ಬಂದು ಪಶ್ಚಿಮಾವಾಹಿನಿಯಲ್ಲಿ ಬಿಡಾರ ಮಾಡಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರು ಸ್ವಾಮಿಗಳ ಸನ್ನಿಧಿಗೆ ದರ್ಶನಾಕಾಂಕ್ಷಿಗಳಾಗಿ ಬಂದರು. ಸ್ವಾಮಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಕೈಜೋಡಿಸಿ ನಿಂತಾಗ ‘ಅಯ್ಯಾ! ನೀನು ನಮಗೊಂದು ವಾಗ್ದಾನ ಮಾಡಬೇಕು’ ಎಂದರು ಸ್ವಾಮಿಗಳು. ‘ಅಪ್ಪಣೆಯಾಗಬೇಕು’ ಎಂದರು ದೊರೆಗಳು. ‘ಕುಣಿಗಲ್ ರಾಮಶಾಸ್ತ್ರಿಗಳ ದ್ವಿತೀಯ ಪುತ್ರ ಶಿವಸ್ವಾಮಿಯನ್ನು ನಮ್ಮ ಸಂಸ್ಥಾನಕ್ಕೆ ದತ್ತುಕೊಡಿಸಬೇಕು’ ಎಂದರಂತೆ ನರಸಿಂಹಭಾರತಿಗಳು. ನಡೆಸಿಕೊಡುತ್ತೇನೆಂದು ದೊರೆಗಳು ಕಾವೇರಿ ಜಲದಿಂದ ಸಂಕಲ್ಪ ಮಾಡಿ ಮಾತು ಕೊಟ್ಟು ಮೈಸೂರಿಗೆ ಹಿಂದಿರುಗಿದರು.

‘ಅಯ್ಯ! ಕುಣಿಗಲ್ ರಾಮಶಾಸ್ತ್ರಿಗಳನ್ನು ನೋಡಿ ತುಂಬ ದಿವಸಗಳಾದವು. ಮಹಾ ತರ್ಕವಿದ್ವಾಂಸರು ಅವರು. ಅವರನ್ನು ಅರಮನೆಗೆ ಕರೆದು ತನ್ನಿ’ ಎಂದು ಹತ್ತಿರವಿದ್ದವರಿಗೆ ಅಪ್ಪಣೆ ಮಾಡಿದರು. ಶಾಸ್ತ್ರಿಗಳಿಗೆ ಹತ್ತು ಹನ್ನೆರಡು ಸಾವಿರ ರೂಪಾಯಿ ಸಾಲವಿದ್ದ ಸಂಗತಿ ಪ್ರಭುಗಳಿಗೆ ತಿಳಿದಿತ್ತು. ಅವರು ಅರಮನೆಗೆ ದಯಮಾಡಿಸಿದೊಡನೆ ಲೋಕಾಭಿರಾಮವಾಗಿ ಮಾತನಾಡುತ್ತ ಪ್ರಸ್ತಾಪತ್ವೇನ ಅವರ ಸಾಲದ ವಿಷಯವನ್ನು ಪ್ರಭುಗಳೇ ಎತ್ತಿದರು. ‘ತಾವೇನೂ ಯೋಚಿಸಬೇಕಾದ್ದಿಲ್ಲ ಶಾಸ್ತ್ರಿಗಳೇ! ದೇವರು ನಿಮ್ಮ ಸಂಕಟಗಳನ್ನೆಲ್ಲ ಬಗೆಹರಿಸುತ್ತಾನೆ’ ಎಂದು ಅಭಯವಿತ್ತರು. ಶಾಸ್ತ್ರಿಗಳ ಸಾಲವನ್ನೆಲ್ಲ ಅರಮನೆಯಿಂದ ತೀರಿಸಲಾಯಿತು.

ಇದಾದ ಸ್ವಲ್ಪದಿನಗಳ ಬಳಿಕ ಸಂಸ್ಥಾನದ ಅಶೇಷ ವೈದಿಕ ಮಹಾಶಯರನ್ನೂ ಆಹ್ವಾನಿಸಿ ಅಂಬಾವಿಲಾಸದಲ್ಲಿ ಒಂದು ವಿದ್ವಜ್ಜನ ಸಭೆಯನ್ನು ದೊರೆಗಳು ಏರ್ಪಡಿಸಿದರು. ರಾಮಶಾಸ್ತ್ರಿಗಳಿಗೂ ಶಿವಸ್ವಾಮಿಗೂ ವಿಶೇಷ ಆಹ್ವಾನವನ್ನು ಕಳುಹಿಸಿದ್ದರು. ಇಬ್ಬರೂ ಸಭೆಗೆ ದಯಮಾಡಿಸಿದ್ದರು. ಕೃಷ್ಣರಾಜ ಒಡೆಯರು ಕುಮಾರ ಶಿವಸ್ವಾಮಿಯವರನ್ನು ಹತ್ತಿರ ಕರೆದು ಏನಾದರೊಂದನ್ನು ಅಪ್ಪಣೆ ಕೊಡಿಸಬೇಕು ಎಂದರಂತೆ. ‘ದಿಶಸ್ತು ಕಕುಭಃ ಕಾಷ್ಠಾ....’ ಎಂದು ಅಮರದ ಒಂದು ಶ್ಲೋಕವನ್ನು ಶಿವಸ್ವಾಮಿ ಪ್ರಾರಂಭ ಮಾಡಿದರಂತೆ. ಸಾಕು ಸಾಕು. ದಿಗ್ವಿಜಯ ಮಾಡುವುದಕ್ಕಾಗಿಯೇ ತಾವು ಅವತಾರ ಮಾಡಿರುವುದು. ಮುಂದೆ ಶೃಂಗೇರಿ ಜಗದ್ಗುರುಗಳಾಗತಕ್ಕವರು ತಾವು ಎಂದು ಹೇಳಿ, ತುಂಬಿದ ಸಭೆಯಲ್ಲಿ ನಡುಕಟ್ಟಿ ಶಿವಸ್ವಾಮಿಗೆ ಸಾಷ್ಟಾಂಗವೆರಗಿದರಂತೆ ಮುಮ್ಮಡಿ ಕೃಷ್ಣರಾಜ ಒಡೆಯರು. ಕುಣಿಗಲ್ ರಾಮಶಾಸ್ತ್ರಿಗಳಿಗೆ ಏನೊಂದೂ ಅರ್ಥವಾಗಲಿಲ್ಲ. ಆಗ ಪ್ರಭುಗಳು ಶಾಸ್ತ್ರಿಗಳನ್ನು ಕುರಿತು ‘ಕ್ಷಮಿಸಬೇಕು, ತಮ್ಮ ಅನುಮತಿಯಿಲ್ಲದೆಯೇ ನಾನು ತಮ್ಮ ಕುಮಾರರನ್ನು ಶ್ರೀಗಳವರ ಆಜ್ಞಾನುಸಾರ ಮಠಕ್ಕೆ ಧಾರೆಯೆರೆದು ಕೊಟ್ಟಿದ್ದೇನೆ. ಲೋಕಕಲ್ಯಾಣಕ್ಕಾಗಿ ಮಾಡಿದ ಈ ಕೆಲಸವನ್ನು ತಾವು ದೊಡ್ಡ ಮನಸ್ಸುಮಾಡಿ ನೆರವೇರಿಸಿಕೊಡಬೇಕು ಎಂದು ಪ್ರಾರ್ಥಿಸಿಕೊಂಡರಂತೆ. ಶಾಸ್ತ್ರಿಗಳು ಮಾಡುವುದಾದರೂ ಏನನ್ನು? ಜಗದ್ಗುರುಗಳಿಗೆ ವಾಗ್ದಾನ ಮಾಡಿಯಾಗಿದೆ’. ತುಂಬಿದ ಸಭೆಯಲ್ಲಿ ಕುಮಾರನನ್ನು ಮುಂದಿನ ಜಗದ್ಗುರುಗಳು ಎಂದು ‘‘ಸಾರಿ ದೊರೆಗಳೇ ಸಾಷ್ಟಾಂಗಮಾಡಿದ್ದಾರೆ! ದೇವರ ಚಿತ್ತ’’ ಎಂದರು ರಾಮಶಾಸ್ತ್ರಿಗಳು. ಕುಮಾರಸ್ವಾಮಿ ಮುಂದೆ ಜಗದ್ಗುರು ಅಭಿನವ ನರಸಿಂಹಭಾರತಿಗಳಾದರು!

ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಒಂದು ಭಾರೀ ಗ್ರಹಗತಿಗಳು ಬಹಳ ಕ್ರೂರವಾಗಿದ್ದುದರಿಂದ ಸುವರ್ಣ ಗೋದಾನ ಮಾಡಬೇಕೆಂದು ಗೊತ್ತಾಯಿತು. ಆದರೆ ದಾನವನ್ನು ಸ್ವೀಕರಿಸಿ ಪಾಪ ನಿವೃತ್ತಿ ಮಾಡಿಕೊಳ್ಳುವ ಧೈರ್ಯ ಯಾರಿಗೂ ಬರಲಿಲ್ಲ. ದಾನವನ್ನು ತೆಗೆದುಕೊಳ್ಳಲು ಯಾರೂ ಮುಂದೆ ಬರಲಿಲ್ಲ. ದಾನವನ್ನು ಯಾರಿಗೆ ಕೊಡಬೇಕು ಎಂದು ದೊರೆಗಳು ಯೋಚಿಸುತ್ತಿರುವಾಗ ‘‘ಮಹಾಸ್ವಾಮಿ! ಎಡತೊರೆಯಲ್ಲಿ ಒಬ್ಬ ಸೋಮಯಾಜಿಗಳಿದ್ದಾರೆ. ಮಹಾ ತೇಜಸ್ವಿಗಳು, ಆಹ್ನಿಕಪರರು, ಸೂರ್ಯಾರಾಧಕರು. ಈ ದಾನವನ್ನು ತೆಗೆದುಕೊಳ್ಳುವುದಕ್ಕೆ ಅವರನ್ನು ಬಿಟ್ಟರೆ ಬೇರೆ ಯಾರೂ ಯೋಗ್ಯರಲ್ಲ’’ ಎಂದು ಹತ್ತಿರವಿದ್ದವರು ಅರಿಕೆಮಾಡಿದರಂತೆ. ‘‘ಸರಿ, ಸೋಮಯಾಜಿಗಳನ್ನ ಅರಮನೆಗೆ ಕರೆಸಿಕೊಂಡು ದಾನವನ್ನು ಪರಿಗ್ರಹಿಸಬೇಕು’’ ಎಂದು ದೊರೆಗಳು ಪ್ರಾರ್ಥಿಸಿಕೊಂಡರಂತೆ. ಆಗಬಹುದು ಎಂದು ಸೋಮಯಾಜಿಗಳು ಎಡಗೈಯನ್ನು ಮುಂದುಮಾಡಿದರಂತೆ. ‘‘ಹಾ! ಹಾ! ಏನನ್ಯಾಯ! ದೊರೆಗಳು ನೀಡುವ ದಾನವನ್ನು ತೆಗೆದುಕೊಳ್ಳಲು ವಾಮಹಸ್ತವನ್ನು ಒಡ್ಡೋಣವೆಂದರೇನು? ಏನು ಗರ್ವ ಈ ಬ್ರಾಹ್ಮಣನಿಗೆ?’’ ಎಂದು ಮುಂತಾಗಿ ಪರಿವಾರದ ಜನ ಗುಜುಗುಜು ಮಾಡಿದರು. ಪ್ರಭುಗಳಿಗೂ ಕಣ್ಣು ಕೆಂಪಾಯಿತು! ‘‘ಮಹಾಪ್ರಭು! ಬಲಗೈಯಲ್ಲಿ ದಾನಪ್ರತಿಗ್ರಹಮಾಡಿದರೆ ತಮಗೆ ಶ್ರೇಯಸ್ಸಲ್ಲ, ಆದ್ದರಿಂದ ಎಡಗೈಯನ್ನು ಹಿಡಿದಿದ್ದೇನೆ. ತಾವು ಅನ್ಯಥಾ ಭಾವಿಸಬಾರದು’’ ಎಂದರು ಸೋಮಯಾಜಿಗಳು. ‘‘ಬಲಗೈಯ್ಯಲ್ಲಿ ಸ್ವೀಕರಿಸಿದರೆ ಆಗುವ ನಷ್ಟವೇನೋ’’ ಎಂದು ವ್ಯಂಗ್ಯ ಮಾತುಗಳನ್ನಾಡಿ ಸೋಮಯಾಜಿಗಳು ಬಲಗೈಯಲ್ಲೇ ದಾನವನ್ನು ತೆಗೆದುಕೊಳ್ಳುವಂತೆ ‘‘ಅಪ್ಪಣೆಯಾಗಬೇಕು ಪ್ರಭು’’ ಎಂದರು ಪರಿವಾರದವರು. ‘ಸರಿ! ಸೂರ್ಯದೇವನ ಚಿತ್ತ’ ಎಂದು ಸೋಮಯಾಜಿಗಳು ದಕ್ಷಿಣ ಹಸ್ತದಿಂದಲೇ ದಾನವನ್ನು ಪರಿಗ್ರಹಿಸಿದರು.

ಸೋಮಯಾಜಿಗಳು ಬಲಗೈಯಲ್ಲಿ ದಾನ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದುದೇಕೆ ಎಂಬ ಕುತೂಹಲ ಕೆರಳಿತು ದೊರೆಗಳಿಗೆ. ಸೋಮಯಾಜಿಗಳನ್ನೇ ಕೇಳಿದರಂತೆ ಪ್ರಭುಗಳು. ಆಗ ಸೋಮಯಾಜಿಗಳು ‘‘ಪ್ರಭು! ಆಗಬೇಕಾದುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಒಳ್ಳೆಯದು, ಬೆರಣಿಯ ಚೂರನ್ನು ತರಿಸಿಕೊಡೋಣವಾಗಲಿ. ಬಲಗೈಯನ್ನು ಏಕೆ ಹಿಡಿಯಲಿಲ್ಲ ಎಂಬುದಕ್ಕೆ ಕಾರಣವನ್ನು ತೋರಿಸುತ್ತೇನೆ’’ ಎಂದರು. ಬೆರಣಿಯ ಚೂರನ್ನು ತರಿಸಲಾಯಿತು. ಸೋಮಯಾಜಿಗಳು ತಮ್ಮ ಬಲಗೈಯ ಮೇಲೆ ಒಂದು ಚೂರು ಬೆರಣಿಯನ್ನು ಪುಡಿಮಾಡಿ ಉದುರಿಸಿಕೊಂಡರಂತೆ. ಭಗ್ ಎಂದು ಬೆಂಕಿ ಕಾಣಿಸಿಕೊಂಡಿತಂತೆ! ದೊರೆಗಳ ಸಮೀಪದಲ್ಲಿದ್ದವರೆಲ್ಲರೂ ಆಶ್ಚರ್ಯಚಕಿತರಾಗಿ ಮೂಕರಾದರು. ದೊರೆಗಳ ಮುಖ ಬಾಡಿತು. ಜ್ಯೋತಿಷ್ಯದಲ್ಲಿ ಸ್ವಯಂ ಪಂಡಿತರಾದ ಪ್ರಭುಗಳಿಗೆ ಭವಿಷ್ಯದ ಚಿತ್ರ ಕಣ್ಣುಮುಂದೆ ಸುಳಿದು ಸರಿಯಿತು. ಈಶ್ವರ ಸಂಕಲ್ಪ ಎಂದು ಸುಮ್ಮನಾದರು. ‘‘ಕ್ಷಮಿಸಬೇಕು ಪ್ರಭು’’ ಎಂದರು ಸೋಮಯಾಜಿಗಳು. ಉಳಿದವರಿಗೆ ಏನೊಂದೂ ಅರ್ಥವಾಗಲಿಲ್ಲ. ಗ್ರಹಗತಿಗಳು ತಮ್ಮ ಆಟವನ್ನು ಮುಗಿಸಿಯೇ ಮುಗಿಸಿದವು! ರಾಜ್ಯ ಬ್ರಿಟಿಷ್ ಕಂಪೆನಿಯ ವಶವಾಯಿತು!

ಸೋಮಯಾಜಿಗಳು ಬಲಗೈಯ್ಯಲ್ಲಿ ದಾನ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದುದೇಕೆ ಎಂಬ ಕುತೂಹಲ ಕೆರಳಿತು ದೊರೆಗಳಿಗೆ. ಸೋಮಯಾಜಿಗಳನ್ನೇ ಕೇಳಿದರಂತೆ ಪ್ರಭುಗಳು. ಆಗ ಸೋಮಯಾಜಿಗಳು ‘‘ಪ್ರಭು! ಆಗಬೇಕಾದುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಒಳ್ಳೆಯದು, ಬೆರಣಿಯ ಚೂರನ್ನು ತರಿಸಿಕೊಡೋಣವಾಗಲಿ. ಬಲಗೈಯನ್ನು ಏಕೆ ಹಿಡಿಯಲಿಲ್ಲ ಎಂಬುದಕ್ಕೆ ಕಾರಣವನ್ನು ತೋರಿಸುತ್ತೇನೆ’’ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News