×
Ad

ಕೋಟಿಗಟ್ಟಲೆ ಹಣ ನೀಡಿ ಕುದುರೆ ವ್ಯಾಪಾರಕ್ಕೆ ನಿಂತ ಬಿಜೆಪಿ: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-12-30 18:04 IST

ಬೆಂಗಳೂರು, ಡಿ. 30: ‘ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಬೀಳಿಸಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದು, ಪ್ರತಿ ಶಾಸಕರಿಗೆ 25ರಿಂದ 30 ಕೋಟಿ ರೂ.ಹಣವನ್ನು ನೀಡಿ ಖರೀದಿಸಲು ಹೊರಟಿದೆ’ ಎಂದು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಟೀಕಿಸಿದ್ದಾರೆ.

ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಆರಂಭದಿಂದಲೂ ಸರಕಾರ ಬೀಳಿಸುವ ಯತ್ನ ನಡೆಸುತ್ತಿದೆಯೇ ಹೊರತು ಬೇರೆ ಯಾವುದೇ ಕೆಲಸವನ್ನು ಮಾಡಿಲ್ಲ. ಕೋಟಿಗಟ್ಟಲೇ ಹಣ ನೀಡಿ ಕುದುರೆ ವ್ಯಾಪಾರ ನಡೆಸಲು ಮುಂದಾಗಿರುವ ಬಿಜೆಪಿಗೆ ಹಣ ಎಲ್ಲಿಂದ ಬರುತ್ತಿದೆ. ಇವರು ಭ್ರಷ್ಟರಲ್ಲದೇ ಇದ್ದರೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬರುತ್ತದೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಮುಖಂಡರ ಸಂಪರ್ಕಕ್ಕೆ ಸಿಗುತ್ತಿಲ್ಲ. ರಮೇಶ್ ಜಾರಕಿಹೊಳಿ ಹೊಸದಿಲ್ಲಿ, ಮುಂಬೈನಲ್ಲಿ ಇದ್ದಾರೆ ಎಂಬ ವದಂತಿಗಳ ಬೆನ್ನಲ್ಲೆ, ಮಾಜಿ ಸಿಎಂ ಸಿದ್ದರಾಮಯ್ಯನವರ ಆಪರೇಷನ್ ಕಮಲಕ್ಕೆ ಬಿಜೆಪಿ ಮುಂದಾಗಿದೆ ಎಂಬ ಟ್ವಿಟ್ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಮಂತ್ರಿ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧವೇ ಅಸಮಾಧಾನಗೊಂಡಿರುವ ಕಾಂಗ್ರೆಸ್‌ನ ಕೆಲ ನಾಯಕರು ಆಪರೇಷನ್ ಕಮಲಕ್ಕೆ ಬಲಿಯಾಗುವರೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಮಧ್ಯೆ ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ತೆರೆ ಮರೆಯಲ್ಲಿ ಕಸರತ್ತು ನಡೆಸಿದೆ ಎಂಬುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News