ಡಿಸಿಎಂ ಪರಮೇಶ್ವರ್ ಭೇಟಿ ಮಾಡಿದ ನೂತನ ಗೃಹ ಸಚಿವ ಎಂ.ಬಿ.ಪಾಟೀಲ್

Update: 2018-12-30 14:04 GMT

ಬೆಂಗಳೂರು, ಡಿ. 30: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದ ನೂತನ ಗೃಹ ಸಚಿವ ಎಂ.ಬಿ.ಪಾಟೀಲ್ ಪುಷ್ಪಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು.

ರವಿವಾರ ಬೆಳಗ್ಗೆ ಇಲ್ಲಿನ ಸದಾಶಿವನಗರದಲ್ಲಿನ ಡಾ.ಜಿ.ಪರಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿದ ನೂತನ ಗೃಹ ಸಚಿವ ಎಂ.ಬಿ.ಪಾಟೀಲ್, ಸುಮಾರು ಅರ್ಧಗಂಟೆಗೂ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆಂದು ಗೊತ್ತಾಗಿದೆ.

ಸಚಿವ ಸಂಪುಟ ಪುನಾರಚನೆ ಬಳಿಕ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ಬಳಿ ಇದ್ದ ಗೃಹಖಾತೆಯನ್ನು ಎಂ.ಬಿ.ಪಾಟೀಲ್ ಅವರಿಗೆ ಹಂಚಿಕೆ ಮಾಡಲಾಗಿತ್ತು. ಮೊದಲಿಗೆ ಗೃಹಖಾತೆಯನ್ನ ಪರಮೇಶ್ವರ್ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಅಂತಿಮವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ವೇಣುಗೋಪಾಲ್, ಪರಮೇಶ್ವರ್ ಅವರ ಮನವೋಲಿಸುವಲ್ಲಿ ಯಶಸ್ವಿಯಾಗಿದ್ದರು.

ತೀವ್ರ ಹಗ್ಗಜಗ್ಗಾಟದ ಬಳಿಕ ಪರಮೇಶ್ವರ್, ಎಂ.ಬಿ.ಪಾಟೀಲ್ ಅವರಿಗೆ ಗೃಹ ಖಾತೆಯನ್ನ ಬಿಟ್ಟುಕೊಟ್ಟಿದ್ದರು. ಆ ಹಿನ್ನೆಲೆಯಲ್ಲಿ ನೂತನ ಗೃಹ ಸಚಿವ ಎಂ.ಬಿ. ಪಾಟೀಲ್ ಮೇಲೆ ಪರಮೇಶ್ವರ್ ಮುನಿಸಿಕೊಂಡಿದ್ದರು. ಇದೀಗ ಉಭಯ ನಾಯಕರು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಅಚ್ಚರಿ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News