ಕಂಪ್ಯೂಟರ್ ಮಾಹಿತಿಗಳನ್ನು ಭೇದಿಸಲು 10 ಏಜೆನ್ಸಿಗಳಿಗೆ ಮುಕ್ತ ಅಧಿಕಾರ ನೀಡಿಲ್ಲ: ಗೃಹ ಸಚಿವಾಲಯದ ಸ್ಪಷ್ಟನೆ

Update: 2018-12-30 15:59 GMT

ಹೊಸದಿಲ್ಲಿ,ಡಿ.30: ಯಾವುದೇ ಕಂಪ್ಯೂಟರ್‌ನಿಂದ ಮಾಹಿತಿಗಳನ್ನು ಸಂಗ್ರಹಿಸಲು ಯಾವುದೇ ಏಜೆನ್ಸಿಗೆ ಕೇಂದ್ರ ಸರಕಾರವು ಮುಕ್ತ ಅಧಿಕಾರವನ್ನು ನೀಡಿಲ್ಲ ಮತ್ತು ಅವು ಇಂತಹ ಕ್ರಮವನ್ನು ಕೈಗೊಳ್ಳುವಾಗ ಜಾರಿಯಲ್ಲಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಮತ್ತು ಇಂತಹ ಪ್ರತಿಯೊಂದೂ ಕ್ರಮಕ್ಕೂ ಮುನ್ನ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ರವಿವಾರ ಇಲ್ಲಿ ತಿಳಿಸಿದರು.

ಇದು ಹೊಸದಾಗಿ ಜಾರಿಗೊಳಿಸಿರುವ ಕಾನೂನು ಅಲ್ಲ,ಕಂಪ್ಯೂಟರ್‌ಗಳ ಮೇಲೆ ಕಣ್ಗಾವಲು ಇಡುವ ಸಂಸ್ಥೆೆಗಳೂ ಹೊಸದಲ್ಲ. ಮೊದಲಿನಿಂದಲೂ ಜಾರಿಯಲ್ಲಿರುವ ನಿಯಮಗಳಲ್ಲಿ ಒಂದೇ ಒಂದು ಸಣ್ಣ ಬದಲಾವಣೆಯನ್ನೂ ಮಾಡಲಾಗಿಲ್ಲ ಎಂದರು.

ಗೃಹ ಸಚಿವಾಲಯವು ಡಿ.20ರಂದು 10 ಸರಕಾರಿ ಸಂಸ್ಥೆಗಳನ್ನು ಹೆಸರಿಸಿ ಹೊರಡಿಸಿದ್ದ ಅಧಿಸೂಚನೆಯು ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಿತ್ತು. ‘ಕಣ್ಗಾವಲು ದೇಶ’ವನ್ನು ಸೃಷ್ಟಿಸಲು ಸರಕಾರವು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ಅಧಿಸೂಚನೆಯಲ್ಲಿ ಹೆಸರಿಸಲಾಗಿರುವ 10 ಸಂಸ್ಥೆಗಳು 2011ರಿಂದಲೇ ವಿದ್ಯುನ್ಮಾನ ಸಂವಹನಗಳನ್ನು ಛೇದಿಸುವ ಅಧಿಕಾರಗಳನ್ನು ಹೊಂದಿವೆ ಎಂದ ಅಧಿಕಾರಿ,ಯಾವುದೇ ಕಂಪ್ಯೂಟರ್‌ನಿಂದ ಮಾಹಿತಿಯನ್ನು ಭೇದಿಸುವ ಮುನ್ನ ಕೇಂದ್ರ ಅಥವಾ ರಾಜ್ಯ ಗೃಹ ಕಾರ್ಯದರ್ಶಿಗಳ ಪೂರ್ವಾನುಮತಿಯನ್ನು ಪಡೆಯುವುದನ್ನು ಕಡ್ಡಾಯವಾಗಿಸಿರುವ 2011ರ ಪ್ರಮಾಣಿತ ಕಾರ್ಯ ವಿಧಾನ(ಎಸ್‌ಒಪಿ)ವನ್ನು ಅನುಸರಿಸಬೇಕು ಎನ್ನುವುದನ್ನು ಅಧಿಸೂಚನೆಯಲ್ಲಿ ಗೃಹ ಸಚಿವಾಲಯವು ಒತ್ತಿ ಹೇಳಿತ್ತು ಎಂದು ತಿಳಿಸಿದರು.

 ಕಂಪ್ಯೂಟರ್ ಮಾಹಿತಿಗಳನ್ನು ಭೇದಿಸುವ ಮತ್ತು ಅವುಗಳ ಮೇಲೆ ನಿಗಾಯಿರಿಸಲು ನಿಯಮಾವಳಿಗಳನ್ನು 2009ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಅಧಿಕಾರದಲ್ಲಿದ್ದಾಗ ರೂಪಿಸಲಾಗಿತ್ತು ಮತ್ತು ತನ್ನ ಹೊಸ ಆದೇಶದಲ್ಲಿ ಇಂತಹ ಕಾರ್ಯಾಚರಣೆಗಳನ್ನು ನಡೆಸುವ ನಿಯೋಜಿತ ಸಂಸ್ಥೆಗಳನ್ನು ಮಾತ್ರ ಅಧಿಸೂಚಿಸಲಾಗಿದೆ ಎಂದು ಕೇಂದ್ರ ಸರಕಾರವು ಪ್ರತಿಪಾದಿಸುತ್ತಿದೆ.

2014ರಿಂದೀಚಿಗೆ ದೇಶದಲ್ಲಿ ಮೊಬೈಲ್ ಫೋನ್ ಸಂಪರ್ಕಗಳು ಹೆಚ್ಚಾಗಿದ್ದರೂ ಮಾಹಿತಿ ಸಂಗ್ರಹ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದೂ ಅಧಿಕಾರಿ ತಿಳಿಸಿದರು.

ಸರಕಾರದ ಅಧಿಸೂಚನೆಯನ್ವಯ ನಿಯೋಜಿತ ಸಂಸ್ಥೆಗಳು ಐಟಿ ಕಾಯ್ದೆ,2000ರ ಕಲಂ 69ರಡಿ ದೇಶಾದ್ಯಂತ ಕಂಪ್ಯೂಟರ್‌ಗಳಲ್ಲಿ ಸಂಗ್ರಹಿತ,ಸೃಷ್ಟಿಯಾದ,ರವಾನೆಯಾದ,ಸ್ವೀಕರಿಸಲಾದ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳುವ ಅಧಿಕಾರವನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News