ಗುಣಮಟ್ಟದ ಶಿಕ್ಷಣದಿಂದ ಉತ್ತಮ ಪ್ರಜೆಯಾಗಲು ಸಾಧ್ಯ: ನಿವೃತ್ತ ನ್ಯಾ.ಮನೋಹರ್
ಬೆಂಗಳೂರು, ಡಿ.30: ಹಿಂದೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದುದರಿಂದ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯುತ್ತಿದ್ದರು. ಈಗಿನ ಶಿಕ್ಷಣದಿಂದ ಮಕ್ಕಳು ನಯ, ವಿನಯ ಕಲಿಯಲು ಸಾಧ್ಯವಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಮನೋಹರ್ ಅಭಿಪ್ರಾಯಪಟ್ಟಿದ್ದಾರೆ.
ಅಖಿಲ ಹವ್ಯಕ ಮಹಾಸಭಾ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ’ದ ‘ಹವ್ಯಕ ದೇಶರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕಾದರೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಿಗೆ ಸರಿಯಾದ ಗುಣಮಟ್ಟದ ಶಿಕ್ಷಣ ಸಿಕ್ಕಾಗ ಅದು ಬಹುಎತ್ತರಕ್ಕೆ ಬೆಳೆಯುತ್ತಾರೆ. ಅಲ್ಲದೆ, ಕೇವಲ ಪಠ್ಯಪುಸ್ತಕಗಳಿಗಷ್ಟೇ ಸೀಮಿತವಾಗದೇ ಸಂಸ್ಕಾರ ಹಾಗೂ ಮಾನವೀಯತೆಯ ಶಿಕ್ಷಣವೂ ಶಿಕ್ಷಕರು ಹಾಗೂ ಪೋಷಕರು ಕಲಿಸಬೇಕು ಎಂದು ನುಡಿದರು.
ಮಕ್ಕಳು ದೇಶದ ಅಮೂಲ್ಯ ಆಸ್ತಿ. ಪ್ರತಿಯೊಬ್ಬ ಮಗುವನ್ನೂ ನೇತಾರನನ್ನಾಗಿಯೂ, ದಕ್ಷ ಆಡಳಿತಗಾರನನ್ನಾಗಿಯೂ, ಉದ್ಯೋಗ ಕೌಶಲಿಯನ್ನಾಗಿಯೂ, ಓರ್ವ ಉತ್ತಮ ಪ್ರಜೆಯನ್ನಾಗಿಯೂ, ಸ್ವಾವಲಂಬೀ ಬದುಕನ್ನು ನಿರ್ವಹಿಸ ಬಲ್ಲ ನಾಗರಿಕನನ್ನಾಗಿಯೂ ರೂಪಿಸಬೇಕಾಗಿರುವುದು ನಮ್ಮ ಕರ್ತವ್ಯ. ಹೀಗಾಗಿ, ಯಾರನ್ನೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ಯಾರೇ ಆಗಲಿ ಜೀವನದಲ್ಲಿ ಮುಂದೆಬರಬೇಕಾದರೆ ಅವರಲ್ಲಿ ಪ್ರಾಮಾಣಿಕತೆಯ ಜೊತೆಗೆ ಶ್ರದ್ದೆ, ಶಿಸ್ತು, ಮತ್ತು ಸಮಯಪ್ರಜ್ಞೆ ಇರಬೇಕು. ಇದರಿಂದ ಕೆಲಸ ಮಾಡುವವರಲ್ಲಿ ಮಾನಸಿಕ ಸ್ಥೈರ್ಯ ತುಂಬಿ ಯಶಸ್ಸಿನತ್ತ ಹೆಜ್ಜೆ ಹಾಕುತ್ತಾನೆ. ಇದೇ ನಿಜವಾದ ಜೀವನದ ಅರ್ಥವಾಗಿದೆ ಎಂದ ಅವರು, ಇತ್ತೀಚೆಗೆ ಎಲ್ಲರೂ ಐಶಾರಾಮಿ ಜೀವನವೇ ಬೇಕು ಎನ್ನುತ್ತಿದ್ದಾರೆ ಎಂದು ಹೇಳಿದರು.
ಪತ್ರಕರ್ತ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಮತ, ಧರ್ಮ ಮೊದಲಾದ ಕಾರಣ ನೀಡಿ ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಬಾರದು ಎನ್ನುವವರ ತಂಡವಿದೆ. ಅವರಿಗೆ ನಾವೆಲ್ಲರೂ ಉತ್ತರ ನೀಡಬೇಕು. ಭಾರತವನ್ನು ತಾಯಿಯಾಗಿ ನೋಡಲು ಇಷ್ಟವಾಗುವುದಿಲ್ಲ ಎಂಬ ಕಾರಣ ನೀಡುತ್ತಿದ್ದಾರೆ. ಇವರಿಗೆ ಉತ್ತರ ಕೊಡಲು ಸಮಯ ಹತ್ತಿರ ಬಂದಿದೆ ಎಂದು ಹೇಳಿದರು.
ರಾಷ್ಟ್ರವನ್ನು ಉನ್ನತ ಸ್ಥಾನದಿಂದ ಕೆಳಕ್ಕೆ ಇಳಿಯದಂತೆ ಎಚ್ಚರ ವಹಿಸಬೇಕು. ಭಾರತ ಜಗತ್ತಿನಲ್ಲಿ ಉನ್ನತ ಸ್ಥಾನಕ್ಕೇರುವುದರಲ್ಲಿ ಅನುಮಾನವಿಲ್ಲ. ಆದರೆ ಅದು ನಮ್ಮ ಕಾಲದಲ್ಲೇ ಆಗಬೇಕೆಂಬ ಉದ್ದೇಶದಿಂದ ಕೆಲಸ ಮಾಡಬೇಕು. ಯುದ್ಧ ಭೂಮಿಯಲ್ಲಿ ಕೆಲಸ ಮಾಡುವ ಸೈನಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಗುಪ್ತಚರ ದಳ ಇಲ್ಲವಾದಾಗಲೂ ಸೈನಿಕರು ಎದೆಗುಂದದೆ ಕೆಲಸ ಮಾಡಿದ್ದಾರೆ. ಕಾರ್ಗಿಲ್ ಯುದ್ಧಕ್ಕೆ ಹೊರಟಿದ್ದ ಸೈನಿಕರಿಗೆ ಪಾಕಿಸ್ತಾನ ಕಡೆಯಿಂದ ಎಷ್ಟು ಸೈನಿಕರು ಬಂದಿದ್ದಾರೆ ಎಂದು ಗೊತ್ತಿರಲಿಲ್ಲ. ಆದರೂ ಭಯ ಪಡದ ಸೈನಿಕರು ಎಷ್ಟೇ ಶತ್ರುಗಳಿದ್ದರೂ ಹೋರಾಡುತ್ತೇವೆ ಎಂದಿದ್ದರು ಎಂದರು.
ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಮಾತನಾಡಿ, ಇಂದು ದೇಶದಲ್ಲಿ ಅಪ್ರಬುದ್ಧ ಶಿಕ್ಷಣ ವ್ಯವಸ್ಥೆ ಇದೆ. ಹಿಂದೆ ರಾಮಾಯಣ, ಮಹಾಭಾರತವನ್ನು ಶಾಲೆಗಳಲ್ಲಿ ಕಲಿಸಲಾಗುತ್ತಿತ್ತು. ಈಗ ಜಾತ್ಯತೀತ ದೇಶವೆಂದು ಭಾರತವನ್ನು ಕರೆದಿರುವುದರಿಂದ ಶಾಲೆಯಲ್ಲಿ ಪುರಾಣದ ಬಗ್ಗೆ ಹೇಳಿದರೆ ಟೀಕೆ ಕೇಳಿಬರುತ್ತದೆ. ಹೀಗಾಗಿ ಮಕ್ಕಳು ಕ್ರಿಯಾಶೀಲರಾಗಿ ಬೆಳೆಯುತ್ತಿಲ್ಲ. ಕೇವಲ ಬಾಯಿಪಾಠ ಮಾಡಿಕೊಂಡು ಬೆಳೆಯುತ್ತಿರುವ ಮಕ್ಕಳನ್ನು ಸರಿದಾರಿಗೆ ತರುವ ವಿಚಾರದಲ್ಲಿ ಪೋಷಕರು ಕೂಡಾ ಕಾಳಜಿ ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಲೆ.ಜ.ಬಿಎನ್‌ಬಿಎಂ ಪ್ರಸಾದ್, ಮೇ.ಜ.ಎಂ.ವಿ.ಭಟ್, ಬ್ರಿಗೆಡಿಯರ್ ಎಸ್.ಜಿ.ಭಾಗವತ್, ಕಮಾಂಡರ್ ಶ್ರೀಧರ್ ಕಾರ್ಣಿಕ್, ಕ್ಯಾಘಿ.ಶ್ರೀಕಾಂತ್ ಹೆಗಡೆ ಸೇರಿದಂತೆ 75 ಯೋಧರಿಗೆ ‘ಹವ್ಯಕ ದೇಶರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ 75 ವಿದ್ಯಾರ್ಥಿಗಳಿಗೆ ‘ಹವ್ಯಕ ವಿದ್ಯಾರತ್ನ’ ಪ್ರಶಸ್ತಿ ಪ್ರದಾನವಾಯಿತು.