ಗರ್ಭಿಣಿಗೆ ಎಚ್‌ಐವಿ ಸೋಂಕಿನ ರಕ್ತ ನೀಡಿದ ಪ್ರಕರಣ: ರಕ್ತದಾನ ಮಾಡಿದ ಯುವಕ ಇಲಿಪಾಷಾಣ ಸೇವಿಸಿ ಆತ್ಮಹತ್ಯೆ

Update: 2018-12-30 17:59 GMT

ಚೆನ್ನೈ, ಡಿ.30: ಉದ್ದೇಶಪೂರ್ವಕವಲ್ಲದೆ ಎಚ್‌ಐವಿ ಪೊಸಿಟಿವ್ ಸೋಂಕಿನ ರಕ್ತವನ್ನು ದಾನ ಮಾಡಿದ್ದ 19ರ ಹರೆಯದ ಯುವಕ ಬುಧವಾರ ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ರವಿವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈತನಿಂದ ಪಡೆದಿದ್ದ ರಕ್ತವನ್ನು ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರ ದೇಹಕ್ಕೆ ವರ್ಗಾಯಿಸಿದ್ದ ಬಳಿಕ ಮಹಿಳೆ ಎಚ್‌ಐವಿ ಸೋಂಕಿಗೆ ಒಳಗಾಗಿದ್ದರು. ತನ್ನ ಮಗ ಲವಲವಿಕೆಯಿಂದಲೇ ಇದ್ದ. ಆದರೆ ತಾನು ದಾನವಾಗಿ ನೀಡಿದ್ದ ರಕ್ತದಿಂದ ಗರ್ಭಿಣಿ ಮಹಿಳೆಯೊಬ್ಬರು ಎಚ್‌ಐವಿ ಸೋಂಕಿಗೆ ಒಳಗಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ತೀವ್ರ ಆಘಾತಗೊಂಡು ಇಲಿ ಪಾಷಾಣ ಸೇವಿಸಿದ್ದಾನೆ ಎಂದು ಯುವಕನ ತಾಯಿ ತಿಳಿಸಿದ್ದಾರೆ.

ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ರವಿವಾರ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಮಧ್ಯೆ, ಎಚ್‌ಐವಿ ಸೋಂಕಿಗೆ ಒಳಗಾಗಿರುವ ಗರ್ಭಿಣಿ ಮಹಿಳೆಗೆ ಜನವರಿಯಲ್ಲಿ ಹೆರಿಗೆಯಾಗಲಿದೆ ಎಂದು ವೈದ್ಯರು ತಿಳಿಸಿದ್ದು, ಮಗುವಿಗೆ ಯಾವುದೇ ಅಪಾಯವಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. ಗರ್ಭಿಣಿ ಮಹಿಳೆ ಹಾಗೂ ಮಗುವಿನ ಚಿಕಿತ್ಸೆಯ ಎಲ್ಲಾ ವೆಚ್ಚಗಳನ್ನೂ ಸರಕಾರ ಭರಿಸಲಿದೆ ಎಂದು ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ತಿಳಿಸಿದ್ದಾರೆ. ಅಲ್ಲದೆ ಗರ್ಭಿಣಿ ಮಹಿಳೆಗೆ ಉಚಿತ ಜಮೀನು ಹಾಗೂ ಹಸಿರುಮನೆಯನ್ನೂ ಸರಕಾರ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News